ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪದವಿ ಪಠ್ಯಕ್ರಮಕ್ಕೆ ಹಣಕಾಸು ಶಿಕ್ಷಣ ಕಡ್ಡಾಯ: ಅಶ್ವತ್ಥನಾರಾಯಣ

Last Updated 14 ಜುಲೈ 2022, 1:43 IST
ಅಕ್ಷರ ಗಾತ್ರ

ಬೆಂಗಳೂರು: ಪದವಿ ಕೋರ್ಸ್‌ಗಳ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಕುರಿತು ಬೋಧಿಸಲು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ ಅಂಗ ಸಂಸ್ಥೆಯಾದ ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್‌ (ಎನ್‌ಎಎಲ್‌) ಜತೆ ಒಪ್ಪಂದ ಮಾಡಿಕೊಂಡಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಎರಡೂ ಸಂಸ್ಥೆಗಳು ಬುಧವಾರ ಒಪ್ಪಂದದ ಪತ್ರವನ್ನು ವಿನಿಮಯ ಮಾಡಿಕೊಂಡವು. ರಾಜ್ಯದ 20 ವಿಶ್ವವಿದ್ಯಾಲಯಗಳ ಜತೆಗೂ ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್‌ ಒಪ್ಪಂದಗಳಿಗೆ ಸಹಿಹಾಕಿತು. 20 ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಕುಲಸಚಿವರು ಹಾಜರಿದ್ದು, ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ನಂತರ ಮಾತನಾಡಿದ ಸಚಿವರು, ‘ನಮ್ಮ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಿದೆ. ಇದಕ್ಕಾಗಿ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎರಡನ್ನೂ ಕಲಿಯಬೇಕಿದೆ. ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಎನ್‌ಎಸ್‌ಇ ಅಕಾಡೆಮಿ ಜತೆ ಮಾಡಿಕೊಂಡಿರುವ ಒಪ್ಪಂದದಿಂದ ಐದು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದರು.

‘ಎಲ್ಲ ಪದವಿ ಕಾಲೇಜುಗಳೂ ಈ ಕೋರ್ಸ್‌ ಅನ್ನು ತಮ್ಮ ಪಠ್ಯಕ್ರಮದ ಭಾಗವನ್ನಾಗಿ ಮಾಡಿಕೊಳ್ಳುವುದು ಕಡ್ಡಾಯ. ಈ ಕುರಿತು ಎಲ್ಲ ಕಾಲೇಜುಗಳಿಗೂ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ಉಳಿತಾಯ, ಹೂಡಿಕೆ, ಆರ್ಥಿಕ ತಿಳಿವಳಿಕೆ, ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಅರಿವು ಮೂಡಿಸಲಾಗುವುದು’ ಎಂದು ವಿವರಿಸಿದರು.

ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಾಲಕೃಷ್ಣ ಜೋಶಿ, ಎನ್‌ಎಸ್‌ಇ ಇಂಡಿಯಾ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಲಾಷ್‌ ಮಿಶ್ರ, ಪ್ರಧಾನ ಆರ್ಥಿಕ ತಜ್ಞ ಡಾ.ತೀರ್ಥಂಕರ್ ಪಟ್ನಾಯಕ್, ಮುಖ್ಯ ವ್ಯವಸ್ಥಾಪಕ ಎಸ್. ರಂಗನಾಥನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT