ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊದಲ್ಲಿ ವೃದ್ಧ ಸಾವು; BMRCL ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಎಫ್‌ಐಆರ್‌

Published 24 ಜುಲೈ 2023, 22:21 IST
Last Updated 24 ಜುಲೈ 2023, 22:21 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ವೇಳೆ ವೃದ್ಧರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ ಪ್ರಕರಣ ಸಂಬಂಧ ಬಿಎಂಆರ್‌ಸಿಎಲ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿರುವ ಟಿ.ಮುತ್ತುರಾಜು ಅವರ ತಂದೆ ತಿಮ್ಮೇಗೌಡ (67) ಮೃತಪಟ್ಟವರು. ತಿಮ್ಮೇಗೌಡ ಅವರದ್ದು ಚಾಮರಾಜನಗರ ಜಿಲ್ಲೆಯ ಕಂಡಯ್ಯನಪಾಳ್ಯ ಗ್ರಾಮ.

ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ದೂರು ನೀಡಲಾಗಿದೆ.

‘ತಿಮ್ಮೇಗೌಡ ಅವರು ಮಗನ ಮನೆಗೆ ಬಂದಿದ್ದರು. ಜುಲೈ 20ರಂದು ಊರಿಗೆ ವಾಪಸ್ ತೆರಳಲು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಬಂದಿದ್ದರು. ಮಾರ್ಗ ಮಧ್ಯದಲ್ಲಿ ಮೆಟ್ರೊ ರೈಲಿನ ಒಳಗೆ ಕುಸಿದು ಬಿದ್ದಿದ್ದರು. ಅವರನ್ನು ಪ್ರಯಾಣಿಕರು ಎಂ.ಜಿ ರಸ್ತೆ ನಿಲ್ದಾಣದಲ್ಲಿ ಇಳಿಸಿದ್ದರು. ನಿಲ್ದಾಣದಲ್ಲಿದ್ದ ಪ್ರಯಾಣಿಕರೇ ಅವರನ್ನು ಆಟೊದಲ್ಲಿ ಕರೆದೊಯ್ದು ಇನ್‌ಫೆಂಟ್ರಿ ರಸ್ತೆಯ ಸ್ಪರ್ಶ ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಮೆಟ್ರೊ ರೈಲಿನ ಒಳಗಡೆ ಮೆಟ್ರೊ ಅಧಿಕಾರಿಗಳು ಹಾಗೂ ಸಿಬ್ಬಂದಿ ನೆರವಿಗೆ ಬಂದಿಲ್ಲ. ಯಾವುದೇ ರೀತಿಯ ವೈದ್ಯಕೀಯ ನೆರವು ಕಲ್ಪಿಸಿಲ್ಲ. ಕುಸಿದು ಬಿದ್ದವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನೂ ಮಾಡಿಲ್ಲ. ಎಂಜಿ ರಸ್ತೆಯ ಮೆಟ್ರೊ ನಿಲ್ದಾಣದಲ್ಲಿ 15ರಿಂದ 20 ನಿಮಿಷವಿದ್ದರೂ ಸಿಬ್ಬಂದಿ ಸ್ಪಂದಿಸಿಲ್ಲ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಿಲ್ಲ. ಆಸ್ಪತ್ರೆಗೆ ಆಟೊದಲ್ಲಿ ಕರೆದೊಯ್ಯಬೇಕಾದ ಸ್ಥಿತಿಯಿತ್ತು’ ಎಂದು ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT