ಭಾನುವಾರ, ನವೆಂಬರ್ 27, 2022
25 °C

ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜನೆ: ಕಾರ್ಮೆಲ್ ಕಾಲೇಜು ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಾತಂತ್ರ್ಯೋತ್ಸವ ದಿನ ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದ ಆರೋಪದಡಿ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಆಗಸ್ಟ್ 15ರಂದು ಮಧ್ಯಾಹ್ನ ಕಾಲೇಜು ಎದುರು 6 ಸಾವಿರದಿಂದ 8 ಸಾವಿರ ಜನ ಸೇರಿದ್ದರು. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಲಾಗಿತ್ತು. ಅಲ್ಲಿಯ ಜನರು ನೀಡಿದ್ದ ಹೇಳಿಕೆ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ವಾತಂತ್ರ್ಯೋತ್ಸವ ದಿನದಂದು ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟಿಕೆಟ್ ಇರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ತಲಾ 20 ಟಿಕೆಟ್‌ ನೀಡಿದ್ದ ಆಡಳಿತ ಮಂಡಳಿ, ₹ 100 ದರದಲ್ಲಿ ಮಾರುವಂತೆ ತಿಳಿಸಿತ್ತು. ಎಲ್ಲ ವಿದ್ಯಾರ್ಥಿಗಳು ಸೇರಿ 10,000 ಟಿಕೆಟ್ ಮಾರಿದ್ದರು.’

‘ಟಿಕೆಟ್ ಪಡೆದಿದ್ದ ಬಹುತೇಕರು ಆಗಸ್ಟ್ 15ರಂದು ಕಾಲೇಜು ಬಳಿ ಬಂದಿದ್ದರು. ಸಭಾಭವನ ಭರ್ತಿಯಾಗಿದ್ದರಿಂದ, ಕ್ರಮೇಣ ಪ್ರವೇಶ ನಿರ್ಬಂಧಿಸಲಾಗಿತ್ತು. ಗೇಟ್ ಬಂದ್ ಮಾಡಿದ್ದರಿಂದ, 6 ಸಾವಿರದಿಂದ 8 ಸಾವಿರ ಜನ ಹೊರಗೆ ರಸ್ತೆ ಮೇಲೆ ನಿಂತಿದ್ದರು. ಒಳಗೆ ಬಿಡುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಿದ್ದರು. ಸಾರ್ವಜನಿಕರ ವಾಹನ ಓಡಾಟಕ್ಕೂ ಅಡ್ಡಿಪಡಿಸಿದ್ದರು. ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಸ್ಥಿತಿ ನಿಭಾಯಿಸಿದ್ದರು.’

‘ಕಾರ್ಯಕ್ರಮ ನಡೆಸಲು ಕಾಲೇಜಿ ನವರು ಅನುಮತಿ ಪಡೆದಿರಲಿಲ್ಲ. ಅಕ್ರಮವಾಗಿ ತಡೆಯುವುದು (ಐಪಿಸಿ 341), ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ (ಐಪಿಸಿ 283) ಹಾಗೂ ಅಕ್ರಮ ಕೂಟ (ಐಪಿಸಿ 143) ಆರೋಪದಡಿ ಕಾಲೇಜು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು