ಮಂಗಳವಾರ, ಡಿಸೆಂಬರ್ 7, 2021
24 °C

ಬೌನ್ಸರ್‌ಗಳ ಜೊತೆ ನುಗ್ಗಿ ಹಲ್ಲೆ; ಸೌಂದರ್ಯ ಜಗದೀಶ್‌ ಪತ್ನಿ, ಮಗನ ಮೇಲೆ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎದುರು ಮನೆಯ ಕೆಲಸದ ಮಹಿಳೆ ಹಾಗೂ ಅವರ ತಾಯಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ರೇಖಾ, ಪುತ್ರ ಸ್ನೇಹಿತ್ (19) ಹಾಗೂ ಇತರರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮನೆ ಕೆಲಸ ಮಾಡುವ ಅನುರಾಧಾ ಎಂಬುವರು ದೂರು ನೀಡಿದ್ದಾರೆ. ರೇಖಾ ಜಗದೀಶ್, ಸ್ನೇಹಿತ್, ರಕ್ಷಿತ್, ಭುವನಾ, ನಿಖಿಲ್, ಕುಮಾರ್, ರೋಹಿತ್, ಅಶೋಕ ಹಾಗೂ ಲತಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ಕರೆಯಲಾಗಿತ್ತು. ಆದರೆ, ಅವರು ವಿಚಾರಣೆಗೆ ಬರಲಿಲ್ಲ. ಹೀಗಾಗಿ, ಮನೆಗೆ ಹೋಗಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ದೂರುದಾರ ಮಹಿಳೆ, ಪುರುಷೋತ್ತಮ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಾರೆ. ಅದೇ ಮನೆಯ ಕೊಠಡಿಯಲ್ಲಿ ತಾಯಿ ಜೊತೆ ವಾಸವಿದ್ದರು. ಅ. 23ರಂದು ಅವರು ಮನೆಯ ಮುಂದೆ ಕಸಗೂಡಿಸುತ್ತಿದ್ದರು. ಎದುರು ಮನೆಯಲ್ಲಿ ವಾಸವಿರುವ ರಕ್ಷಿತ್ ಹಾಗೂ ಸ್ನೇಹಿತ್, ಇಬ್ಬರೂ ಮಹಿಳೆಯನ್ನು ದುರುಗುಟ್ಟಿ ನೋಡಿದ್ದರು.’
‘ಕಸಗೂಡಿಸುವ ವೇಳೆ ದೂಳು ಬರುತ್ತದೆ ಪಕ್ಕಕ್ಕೆ ಹೋಗುವಂತೆ ಮಹಿಳೆ, ಇಬ್ಬರಿಗೂ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಇಬ್ಬರು, ಮಹಿಳೆಯನ್ನು ನಿಂದಿಸಿದ್ದರು. ಪ್ರಶ್ನಿಸಿದ ಅವರ ತಾಯಿಗೂ ಬೈದಿದ್ದರು. ಇದಾದ ಕೆಲ ಗಂಟೆಗಳ ನಂತರ, ಬೌನ್ಸರ್‌ಗಳಾದ ನಿಖಿಲ್, ಕುಮಾರ್, ರೋಹಿತ್, ಅಶೋಕ ಜೊತೆಯಲ್ಲಿ ಆರೋಪಿಗಳು ಅನುರಾಧಾ ಅವರ ಮನೆಗೆ ನುಗ್ಗಿದ್ದರು. ರೇಖಾ ಜಗದೀಶ್, ಅವರ ಅಕ್ಕ ಲತಾ ಹಾಗೂ ಇತರರು ಸಹ ಇದ್ದರು’ ಎಂದೂ ತಿಳಿಸಿದರು.

‘ಎಲ್ಲ ಆರೋಪಿಗಳು ಸೇರಿ, ಅನುರಾಧಾ ಹಾಗೂ ಅವರ ತಾಯಿ ಮೇಲೆ ಹಲ್ಲೆ ಮಾಡಿದರು.  ಬಟ್ಟೆ ಹರಿದರು. ಬಿಡಿಸಲು ಹೋದವರ ಮೇಲೂ ಹಲ್ಲೆಗೆ ಯತ್ನಿಸಿದ್ದರು. ಈ ಸಂಗತಿ ಮಹಿಳೆ ನೀಡಿರುವ ದೂರಿನಲ್ಲಿದೆ.’

‘ಕೃತ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ನೋಟಿಸ್ ನೀಡಲಾಗಿತ್ತು. ಅವರು ಠಾಣೆಗೆ ಬಂದಿರಲಿಲ್ಲ. ಹೀಗಾಗಿ, ವಿಶೇಷ ತಂಡದಲ್ಲಿ ಅಧಿಕಾರಿಗಳು ಮನೆಗೆ ಹೋಗಿ ಆರೋಪಿಗಳ ಹೇಳಿಕೆ ಪಡೆಯುತ್ತಿದ್ದಾರೆ. ಹೇಳಿಕೆ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಅಧಿಕಾರಿ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು