ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ: ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

Published 13 ಜುಲೈ 2023, 11:34 IST
Last Updated 13 ಜುಲೈ 2023, 11:34 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ತಾಲ್ಲೂಕಿನ ಹುಣಸಮಾರನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಖರಾಬು ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ವಂಚಿಸಿರುವ ಆರೋಪದಡಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮುನಿರತ್ನ ಸೇರಿ ನಾಲ್ವರ ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಯಲಹಂಕ ತಹಶೀಲ್ದಾರ್ ಅನಿಲ್ ಅರೋಳಿಕರ್ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ಇತ್ತೀಚೆಗೆ ದೂರು ನೀಡಿದ್ದಾರೆ. ಆರೋಪಿಗಳಾದ ಆನಂದನ್, ವಿ. ಗಣೇಶ್, ರಾಧಮ್ಮ ಹಾಗೂ ಎನ್‌. ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹುಣಸಮಾರನಹಳ್ಳಿ ಗ್ರಾಮದ ಸರ್ವೇ ನಂಬರ್ 179ರಲ್ಲಿ ಸರ್ಕಾರಿ ಖರಾಬು ಬಂಡೆ ಜಮೀನು ಇದೆ. ಈ ಆಸ್ತಿಗೆ ಹೊಂದಿಕೊಂಡಂತೆ, ಸರ್ವೇ ನಂಬರ್ 177/3, 178/1–2–3, 179 ಮತ್ತು ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೇ ನಂಬರ್ 34/1–2–3 ಹಾಗೂ ಸರ್ವೇ ನಂಬರ್ 17/7–8–9 ಜಮೀನಿದೆ. ಸರ್ಕಾರಿ ಖರಾಬು ಜಮೀನಿನಲ್ಲಿ ಜಿಲಿಟಿನ್ ಬಳಸಿ ಬಂಡೆಗಳನ್ನು ಸ್ಫೋಟಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಜೈ ಭೀಮ್ ಸೇನೆ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಇತ್ತೀಚೆಗೆ ದೂರು ನೀಡಿದ್ದರು.’

‘ದೂರು ಆಧರಿಸಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ, ಜಂಟಿ ತನಿಖೆ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ, ಬಂಡೆಗಳನ್ನು ಮಾರಾಟ ಮಾಡಿ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ತಹಶೀಲ್ದಾರ್ ಅವರು ದೂರಿನ ಜೊತೆ, ತನಿಖಾ ವರದಿಯನ್ನೂ ಲಗತ್ತಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಾಸಕ ಹೆಸರಿನಲ್ಲಿ ಜಮೀನು: ‘ಸರ್ವೇ ನಂಬರ್ 179ರಲ್ಲಿ 2–22ಎ ಜಮೀನು ಆನಂದ್ ಹಾಗೂ ರಾಧಮ್ಮ ಹೆಸರಿನಲ್ಲಿ ಖಾತೆ ಆಗಿದೆ. ಉಳಿದ ಸರ್ವೇ ನಂಬರ್ ಜಮೀನು, ಶಾಸಕ ಮುನಿರತ್ನ ಹೆಸರಿನಲ್ಲಿ ಖಾತೆ ದಾಖಲಾಗಿದೆ. ಮುನಿರತ್ನ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಭಾವ ಬಳಸಿ, ಅಕ್ರಮ ಗಣಿಗಾರಿಕೆ ನಡೆಸಿರುವ ಮಾಹಿತಿ ಇದೆ. ಪ್ರಕರಣದ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT