ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ಆಟೊಗಳಿಗೆ ಡಿಕ್ಕಿ ಪ್ರಕರಣ l ಸಂತ್ರಸ್ತೆ ವಿರುದ್ಧ ಎಫ್‌ಐಆರ್‌ ದಾಖಲು

Published 20 ಆಗಸ್ಟ್ 2024, 23:48 IST
Last Updated 20 ಆಗಸ್ಟ್ 2024, 23:48 IST
ಅಕ್ಷರ ಗಾತ್ರ

ಬೆಂಗಳೂರು: ಕೊರಿಯೊಗ್ರಾಫರ್‌ನಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉತ್ತರ ಭಾರತ ಮೂಲದ 21 ವರ್ಷದ ಸಂತ್ರಸ್ತೆಯ ವಿರುದ್ಧ ಆಡುಗೋಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ತಡರಾತ್ರಿ 1.30 ರಿಂದ 2 ಗಂಟೆ ಸುಮಾರಿಗೆ ಮೂರು ಆಟೊಗಳಿಗೆ ಸರಣಿ ಅಪಘಾತ ಎಸಗಿದ್ದ ಆರೋಪದ ಅಡಿ ಚಾಲಕ ಅಜಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಸಂತ್ರಸ್ತೆ ವಿರುದ್ಧ ಪ್ರಕರಣ ದಾಖಲಾಗಿದೆ. 

‘ಸಂತ್ರಸ್ತೆ ಸದ್ಯ ಆಸ್ಪತ್ರೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಸಂಪೂರ್ಣ ಗುಣಮುಖರಾದ ಮೇಲೆ ಹೇಳಿಕೆ ಪಡೆದುಕೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದಕ್ಕೂ ಮೊದಲು ಕೋರಮಂಗಲದ ಪಬ್‌ಗೆ ತನ್ನ ಸ್ನೇಹಿತನ ಜತೆ ಕಾರಿನಲ್ಲಿ ಹೋಗಿದ್ದರು. ವಾಪಸ್‌ ಬರುವಾಗ ಈಕೆಯೇ ಕಾರು ಚಾಲನೆ ಮಾಡಿದ್ದರು. ಮಾರ್ಗ ಮಧ್ಯೆ ಮಂಗಳ ಜಂಕ್ಷನ್‌ನಲ್ಲಿ ಯು–ಟರ್ನ್ ಮಾಡಿಕೊಳ್ಳುವಾಗ ಆಟೊವೊಂದಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಬಳಿಕ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುವ ವೇಳೆ ಮತ್ತೆರಡು ಆಟೊಗಳಿಗೆ ಡಿಕ್ಕಿಯಾಗಿತ್ತು. ಬಳಿಕ ಕಾರನ್ನು ನಿಲುಗಡೆ ಮಾಡದೆ ತೆರಳಿದ್ದರು ಎಂಬ ಆರೋಪ ಇದೆ. ನಂತರ, ಫೋರಂ ಮಾಲ್‌ವರೆಗೆ ಕಾರನ್ನು ಹಿಂಬಾಲಿಸಿದ್ದ ಆಟೊ ಚಾಲಕರು ಅಲ್ಲಿ ಅಡ್ಡಗಟ್ಟಿ ಆಟೊಗಳನ್ನು ರಿಪೇರಿ ಮಾಡಿಸಿಕೊಡುವಂತೆ ಯುವತಿಯನ್ನು ಒತ್ತಾಯಿಸಿದ್ದರು. ಆದರೆ, ಅವರು ಸಮರ್ಪಕ ಉತ್ತರ ನೀಡದೆ ಅಲ್ಲಿಂದ ಪರಾರಿಯಾಗಿದ್ದರು ಎಂಬ ದೂರುಗಳಿವೆ. ನಂತರ, ಸ್ಥಳಕ್ಕೆ ಬಂದಿದ್ದ ಹೊಯ್ಸಳ ಸಿಬ್ಬಂದಿಗೆ ಆಟೊ ಚಾಲಕರು ಘಟನೆ ಕುರಿತು ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಸ್ನೇಹಿತನ ಹೇಳಿಕೆ ದಾಖಲು: ಘಟನೆ ವೇಳೆ ಸ್ಥಳದಲ್ಲಿದ್ದ ಸಂತ್ರಸ್ತೆಯ ಸ್ನೇಹಿತರೊಬ್ಬರಿಗೆ ನೋಟಿಸ್‌ ನೀಡಲಾಗಿತ್ತು. ಅವರ ಹೇಳಿಕೆ ಪಡೆಯಲಾಗಿದೆ.

‘ಕಾಲೇಜು ಸಹಪಾಠಿಯ ಜನ್ಮದಿನಾಚರಣೆಯ ಪಾರ್ಟಿಗೆ ಹೋಗಿದ್ದು, ಊಟ ಮುಗಿಸಿಕೊಂಡು ವಾಪಸ್‌ ಬರುತ್ತಿದ್ದೆವು. ನಾನು ಮತ್ತು ನನ್ನ ಸ್ನೇಹಿತೆ ಮದ್ಯ ಸೇವಿಸಿರಲಿಲ್ಲ. ಆಕೆಯೇ ಕಾರು ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ಆಟೊಗಳಿಗೆ ಡಿಕ್ಕಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಚಾಲನಾ ಪರವಾನಗಿ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪತ್ನಿ ಕೊಲೆ

ದಾಬಸ್‌ಪೇಟೆ: ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪತ್ನಿಯನ್ನು ಕೊಲೆ ಮಾಡಿರುವ ಆರೋಪದ ಅಡಿ ಪತಿಯನ್ನು ದಾಬಸ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮನೆಯ ಶೌಚಾಲಯದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾವ್ಯಾ (27) ಅವರ ಮೃತದೇಹ ಪತ್ತೆಯಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ದೂರು ನೀಡಿದ್ದು, ಆ ದೂರು ಆಧರಿಸಿ ಆರೋಪಿ ಶಿವಾನಂದ್(38) ಅವರನ್ನು ಬಂಧಿಸಲಾಗಿದೆ.

ಹಾಸನ ಜಿಲ್ಲೆ ಹೊಳೇನರಸಿಪುರ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಕಾವ್ಯಾ ಮತ್ತು ಹಾಸನದ ಆಲೂರು ತಾಲ್ಲೂಕಿನ ಮಣಿಪುರದ ಶಿವಾನಂದ್ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಶಿವಾನಂದ್ ಅವರು ದಾಬಸ್ ಪೇಟೆಯ ಖಾಸಗಿ ಕಂಪನಿಯೊಂದ ರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗೆ ಮದ್ಯ ಸೇವನೆ ಅಭ್ಯಾಸ ಇತ್ತು. ಅನಾರೋಗ್ಯ ಮತ್ತು ಕೆಲಸದ ಕಾರಣದಲ್ಲಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಕಾವ್ಯಾ ಅವರು ತವರು ಮನೆಗೆ ಹೋಗಿದ್ದರು. ಕೆಲವು ದಿನಗಳ ಹಿಂದಷ್ಟೇ ಗಂಡನ ಮನೆಗೆ ಬಂದಿದ್ದರು. ಅದಾದ ಮೇಲೆ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ, ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.

ಚಿಕಿತ್ಸೆ ವೇಳೆ ವೈದ್ಯ, ಶುಶ್ರೂಷಕಿ ಮೇಲೆ ಹಲ್ಲೆ

ಬೆಂಗಳೂರು: ಚಿಕಿತ್ಸೆಗೆಂದು ಕರೆದೊಯ್ದ ವೇಳೆ ಮದ್ಯದ ಅಮಲಿನಲ್ಲಿ ವೈದ್ಯ ಹಾಗೂ ಶುಶ್ರೂಷಕಿ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆಯಲ್ಲಿದ್ದ ಚಿಕಿತ್ಸಾ ಉಪಕರಣಗಳನ್ನು ಹಾನಿಗೊಳಿಸಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನೇಪಾಳದ ಆಶಿಶ್‌ ಸೆರಾಯ್‌(36) ಬಂಧಿತ ಆರೋಪಿ. ಶ್ರೀಸಾಯಿ ಆಸ್ಪತ್ರೆಯ ವೈದ್ಯ ನಾಗೇಂದ್ರಪ್ಪ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಠಾಣಾ ವ್ಯಾಪ್ತಿಯ ನೀಲಾದ್ರಿ ರಸ್ತೆಯ ಅಂಗಡಿ ಯೊಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಆರೋಪಿಗೆ ಮದ್ಯ ಸೇವಿಸಿ ಬಂದು ಕೆಲಸ ಮಾಡುವ ಅಭ್ಯಾಸವಿತ್ತು. ಸೋಮವಾರ ಸಂಜೆಯೂ ಮದ್ಯ ಸೇವಿಸಿ ಅಂಗಡಿಗೆ ಬಂದಿದ್ದ ಆರೋಪಿ ಮುಖ್ಯರಸ್ತೆಗೆ ಬಂದು ವಾಹನಗಳನ್ನು ಅಡ್ಡಗಟ್ಟುವುದು, ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ. ಅಲ್ಲದೇ ರಸ್ತೆಯಲ್ಲೇ ಬಿದ್ದುಗಾಯ ಮಾಡಿಕೊಂಡಿದ್ದ. ಸ್ಥಳೀಯರು ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು, ಸ್ಥಳೀಯರ ನೆರವು ಪಡೆದು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಪೊಲೀಸರು ಅಲ್ಲಿಂದ ತೆರಳಿದ ಮೇಲೆ ಚಿಕಿತ್ಸೆ ಕೊಡಲು ಮುಂದಾದ ನಾಗೇಂದ್ರ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ. ಉಪಕರಣಗಳಿಗೂ ಹಾನಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು. ಹಲ್ಲೆಯಿಂದ ವೈದ್ಯರ ತುಟಿ, ಬೆರಳುಗಳು ಹಾಗೂ ಕಾಲಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT