ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: 15 ಮಂದಿ ರಕ್ಷಣೆ

Published 6 ಏಪ್ರಿಲ್ 2024, 4:17 IST
Last Updated 6 ಏಪ್ರಿಲ್ 2024, 4:17 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಟಿ. ನಗರದಲ್ಲಿರುವ ‘ಶ್ರೀ ವೆಂಕಟೇಶ್ವರ ಮನೋರ್’ ನಾಲ್ಕು ಮಹಡಿ ಕಟ್ಟಡದಲ್ಲಿ ಶುಕ್ರವಾರ ಬೆಂಕಿ ಅವಘಡ ಸಂಭವಿಸಿದ್ದು, ದಟ್ಟ ಹೊಗೆಯಿಂದ ಹೊರಗೆ ಬರಲಾಗದೇ ಕಟ್ಟಡದೊಳಗೆ ಸಿಲುಕಿದ್ದ 15 ಮಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.

‘80 ಅಡಿ ರಸ್ತೆಯಲ್ಲಿರುವ ಕಟ್ಟಡದ ನೆಲ ಮಹಡಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಕಟ್ಟಡದ ಇತರೆ ಭಾಗಕ್ಕೂ ಹರಡಿತ್ತು. ದಟ್ಟ ಹೊಗೆಯೂ ಆವರಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ಆರ್‌.ಟಿ.ನಗರ ಠಾಣೆಯ ಪೊಲೀಸರು ಹೇಳಿದರು.

‘ಕಟ್ಟಡದ ನೆಲ ಮಹಡಿಯಲ್ಲಿ ‘ಐಡಿಎಸ್‌ ನೆಕ್ಸ್ಟ್ ಬಿಸಿನೆಸ್ ಸಲ್ಯೂಷನ್ಸ್’ ಕಂಪನಿ ಕಚೇರಿ ಇದೆ. ಮೊದಲ ಮಹಡಿಯಲ್ಲಿ ಮಿರಾಕಲ್ ಡ್ರಿಂಕ್ಸ್ ಆಯುರ್ವೇದ ಔಷಧ ಕಂಪನಿ ಇದೆ. ಎರಡು, ಮೂರು ಹಾಗೂ ನಾಲ್ಕನೇ ಮಹಡಿಯಲ್ಲೂ ವಿವಿಧ ಕಂಪನಿಗಳ ಕಚೇರಿಗಳಿವೆ’ ಎಂದರು.

ಚಾವಣಿಯಲ್ಲಿ ಕೂಗಾಡಿದ್ದ ನೌಕರರು: ‘ಕಟ್ಟಡದಲ್ಲಿರುವ ಕಚೇರಿಯಲ್ಲಿ 50ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ‘ಐಡಿಎಸ್‌ ನೆಕ್ಸ್ಟ್ ಬಿಸಿನೆಸ್ ಸಲ್ಯೂಷನ್ಸ್’ ಕಂಪನಿ ಕಚೇರಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ನಿಮಿಷಗಳಲ್ಲಿ ಬೆಂಕಿ ಇತರೆಡೆ ವ್ಯಾಪಿಸಿತ್ತು’ ಎಂದು ಮೂಲಗಳು ಹೇಳಿವೆ.

‘ಕಟ್ಟಡದಲ್ಲಿ ದಟ್ಟ ಹೊಗೆ ಹೆಚ್ಚಾಗಿತ್ತು. ಮೊದಲ, ಎರಡು, ಮೂರು ಹಾಗೂ ನಾಲ್ಕನೇ ಮಹಡಿಗೂ ಹೊಗೆ ಆವರಿಸಿಕೊಂಡಿತ್ತು. ಕೆಲವರು, ಕಟ್ಟಡದಿಂದ ಹೊರಗೆ ಓಡಿ ಬಂದಿದ್ದರು. ಕಟ್ಟಡದ ಒಳಗಿದ್ದ 15 ನೌಕರರು, ಹೊರಗೆ ಬರಲು ಸಾಧ್ಯವಾಗಲಿಲ್ಲ.’

‘ಅಗ್ನಿಶಾಮಕ ದಳದ ಸಿಬ್ಬಂದಿ, ಕಟ್ಟಡದೊಳಗೆ ಹೋಗಿ ಹಲವರನ್ನು ಹೊರಗೆ ಕರೆತಂದರು. ಕೆಲವರು, ಕಟ್ಟಡದ ಚಾವಣಿ ಮೇಲೆ ಹೋಗಿ, ರಕ್ಷಣೆಗಾಗಿ ಕೂಗಾಡುತ್ತಿದ್ದರು. ಅವರನ್ನು ಸಹ ಏಣಿ ಸಹಾಯದಿಂದ ರಕ್ಷಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಆರ್‌.ಟಿ. ನಗರದಲ್ಲಿರುವ ‘ಶ್ರೀ ವೆಂಕಟೇಶ್ವರ ಮನೋರ್’ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ
ಆರ್‌.ಟಿ. ನಗರದಲ್ಲಿರುವ ‘ಶ್ರೀ ವೆಂಕಟೇಶ್ವರ ಮನೋರ್’ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ

‘ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಅನುಮಾನವಿದೆ. ಅವಘಡ ಬಗ್ಗೆ ಹಲವರ ಹೇಳಿಕೆ ಪಡೆಯಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT