ಗುರುವಾರ , ಫೆಬ್ರವರಿ 9, 2023
30 °C
ಚುಂಚಘಟ್ಟ ಕೆರೆಯಲ್ಲಿ ರಾಜ್ಯೋತ್ಸವ; ಕರಿಹೋಬನಹಳ್ಳಿ ಕೆರೆಯಲ್ಲಿ ಅಗ್ನಿಸ್ಪರ್ಶ

ಕೆರೆಯಲ್ಲೇ ಪಟಾಕಿ, ಕಾರ್ಖಾನೆ ತ್ಯಾಜ್ಯಕ್ಕೆ ಬೆಂಕಿ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರ ವೆಚ್ಚ ಮಾಡಿರುವ ಬಿಬಿಎಂಪಿ, ಅದರ ನಿರ್ವಹಣೆಯಲ್ಲಿ ವಿಫಲವಾಗಿದೆ. ಕೆರೆಯ ಅಂಗಳದಲ್ಲೇ ರಾಜ್ಯೋತ್ಸವ, ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿವೆ. ಪಟಾಕಿಯನ್ನು ಸಿಡಿಸಿ ಅಂಗಳವನ್ನೇ ಹಾಳು ಮಾಡಲಾಗಿದೆ. ಕಾರ್ಖಾನೆ ತ್ಯಾಜ್ಯವನ್ನೂಸುಡಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರವೂ ಇತ್ತ ಗಮನಹರಿಸಿಲ್ಲ.

ಬೆಂಗಳೂರುದಕ್ಷಿಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಚುಂಚಘಟ್ಟ ಕೆರೆ ಹಿಂದೆ ತ್ಯಾಜ್ಯದ ಗೂಡಾಗಿತ್ತು. ಬಿಬಿಎಂಪಿ ವತಿಯಿಂದ ನಾಲ್ಕಾರು ಕೋಟಿ ವೆಚ್ಚ ಮಾಡಿ ಅಭಿವೃದ್ಧಿ ಮಾಡಿ ಬೇಲಿಯನ್ನೂ ಹಾಕಲಾಗಿದೆ. ಆದರೆ, ಆ ಬೇಲಿಯೊಳಗೇ ರಾಜಕೀಯ, ಸಂಘ–ಸಂಸ್ಥೆಗಳ ಕಾರ್ಯಕ್ರಮಗಳು ಇತ್ತೀಚೆಗೆ ನಡೆಯುತ್ತಿವೆ. ತಮ್ಮ ಮುಖಂಡ
ರನ್ನು ಸಂತಸಪಡಿಸಲು ಬೃಹತ್‌ ಪಟಾಕಿಗಳನ್ನು ಇಲ್ಲಿ ಸಿಡಿಸಲಾಗಿದೆ. ಕೆರೆ ಅಂಗಳ ಸುಟ್ಟ ಪೇಪರ್‌ಗಳ ತಾಣವಾಗಿದೆ.

ಚುಂಚಘಟ್ಟ ಕೆರೆ 23 ಎಕರೆ 9 ಗುಂಟೆ ಪ್ರದೇಶದಲ್ಲಿದೆ. ಬಿಬಿಎಂಪಿ ಅಭಿವೃದ್ಧಿ ಮಾಡಿ ನಾಲ್ಕು ವರ್ಷ ಸಂದಿದ್ದರೂ ಆಗಾಗ್ಗೆ ಆಧುನೀಕರಣ ಎಂದು ಲಕ್ಷಗಟ್ಟಲೆ ವ್ಯಯ ಮಾಡುತ್ತಲೇ ಇದೆ. ಆದರೆ, ಇದೀಗ ರಾಜಕೀಯ, ಸಂಘ–ಸಂಸ್ಥೆಗಳ ಕಾರ್ಯಕ್ರಮಗಳಿಗೂ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಕೆರೆಯ ಪರಿಸರ ಪೂರ್ಣ ಹಾಳಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ.

‘ಚುಂಚಘಟ್ಟದಲ್ಲಿ ರಾಜಕೀಯ ಕಾರ್ಯಕ್ರಮವನ್ನು ಆಯೋಜಿಸಿ ಪಟಾಕಿ ಸಿಡಿಸಿ, ಪರಿಸರ ಹಾಳುಮಾಡಲಾಗಿದೆ. ಇಲ್ಲಿರುವ ಗಿಡಗಳೆಲ್ಲ ಸುಟ್ಟುಹೋಗಿವೆ. ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ ಜವಾಬ್ದಾರಿ ಇಲ್ಲದಂತೆ ವರ್ತಿಸಿದೆ’ ಎಂದು ಆ್ಯಕ್ಷನ್ ಏಡ್‌ನ ಕಾರ್ಯಕ್ರಮ ವ್ಯವಸ್ಥಾಪಕ ರಾಘವೇಂದ್ರ ಬಿ. ಪಚ್ಚಾಪುರ್‌ ಆಕ್ರೋಶ ವ್ಯಕ್ತಪಡಿಸಿದರು.

ಪೀಣ್ಯ 2ನೇ ಹಂತದ ಕೈಗಾರಿಕೆ ಪ್ರದೇಶದ ಸಮೀಪವಿರುವ ಕರಿಹೋಬನಹಳ್ಳಿ ಕೆರೆ (ನಸರಸಪ್ಪನಹಳ್ಳಿ) 27 ಎಕರೆ 13 ಗುಂಟೆ ವಿಸ್ತೀರ್ಣದಲ್ಲಿದ್ದು, ಪ್ರತಿದಿನ ಇಲ್ಲಿ ಕಾರ್ಖಾನೆ ತ್ಯಾಜ್ಯವನ್ನು ಸುಡಲಾಗುತ್ತಿದೆ. ಯಾವುದೇ ಕಸವನ್ನು
ಸುಡಬಾರದು ಎಂಬ ಆದೇಶ
ವಿದ್ದರೂ ಇಲ್ಲಿ ಪಾಲನೆಯಾಗುತ್ತಿಲ್ಲ. ನಿರ್ವಹಣೆ, ರಕ್ಷಣೆಗೆ ಇರುವವರೇ ತ್ಯಾಜ್ಯ ಹಾಕಲು, ಸುಡಲು ಅನುವು ಮಾಡಿಕೊಡುತ್ತಿದ್ದಾರೆ.

‘ಕರಿಹೋಬನಹಳ್ಳಿ ಕೆರೆಯನ್ನು ಈಗ ಅಭಿವೃದ್ಧಿ ಮಾಡುವುದಾಗಿ ಬಿಬಿಎಂಪಿ ಹೇಳುತ್ತಿದೆ. ಆದರೆ ಇದನ್ನು ಮೊದಲು ರಕ್ಷಿಸಬೇಕು. ಕಾರ್ಖಾನೆ ತ್ಯಾಜ್ಯ ಇಲ್ಲಿ ಸುಟ್ಟರೆ ವಿಷಕಾರಕವಾಗುತ್ತದೆ. ಹಲವು ವರ್ಷಗಳಿಂದ ದೂರು ನೀಡುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಕ್ರಮ ಕೈಗೊಂಡಿಲ್ಲ’ ಎಂದು ಪರಿಸರ ಕಾರ್ಯಕರ್ತ ಗೌಡಯ್ಯ ಹೇಳಿದರು.

ಇನ್ನು ಮುಂದೆ ಎಚ್ಚರ...

‘ಯಾವುದೇ ಕೆರೆ ಅಂಗಳದಲ್ಲಿ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡಬಾರದು. ಈ ಬಗ್ಗೆ ಸೂಕ್ತ ಆದೇಶ
ವಿದ್ದರೂ ಅದು ಪಾಲನೆಯಾಗಿಲ್ಲ. ಹೋಮ್‌ ಗಾರ್ಡ್‌ಗಳಿಗೆ ಮತ್ತೆ ಕಟ್ಟುನಿಟ್ಟಿನ ಆದೇಶ ನೀಡಲಾಗುತ್ತದೆ. ಇನ್ನು ಕರಿಹೋಬನಹಳ್ಳಿ ಕೆರೆಯ ಅಭಿವೃದ್ಧಿಗೆ ಟೆಂಡರ್‌ ಕರೆಯಲಾಗಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ. ತ್ಯಾಜ್ಯ ಸುಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ಶಶಿಕುಮಾರ್‌ ತಿಳಿಸಿದರು.
‘ಕೆರೆಯಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಬೇಡ’

‘ಇತ್ತೀಚಿನ ದಿನಗಳಲ್ಲಿ ಕೆರೆಗಳಲ್ಲಿ ಕಾರ್ಯಕ್ರಮ ಆಯೋಜಿಸುವುದು ಹೆಚ್ಚಾಗುತ್ತಿದೆ. ಕೆರೆ ಹೆಸರಲ್ಲಿ ರಾಜಕೀಯ ಕಾರ್ಯಕ್ರಮಗಳಾಗುತ್ತಿವೆ. ಸಂಘ–ಸಂಸ್ಥೆಗಳು ತಮ್ಮ ಪ್ರಚಾರಕ್ಕಾಗಿ ಕೆರೆ ಅಂಗಳವನ್ನು ಬಳಸಿಕೊಳ್ಳುತ್ತಿವೆ. ಕೆರೆಯಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಮಕ್ಕಳು, ವೃದ್ಧರಿಗೆ ಕೆಲವು ಚಟುವಟಿಕೆಗಳಿಗಷ್ಟೇ ಅವಕಾಶ ಇರಬೇಕು. ಆದರೆ, ಯಾವುದೇ ರೀತಿಯಲ್ಲೂ ಕೆರೆ ಪರಿಸರಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಪರಿಸರ ಕಾರ್ಯಕರ್ತ ಶ್ರೀನಿವಾಸ್‌ ಆಗ್ರಹಿಸಿದರು.

‘ಕೆರೆಯಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಬೇಡ’

‘ಇತ್ತೀಚಿನ ದಿನಗಳಲ್ಲಿ ಕೆರೆಗಳಲ್ಲಿ ಕಾರ್ಯಕ್ರಮ ಆಯೋಜಿಸುವುದು ಹೆಚ್ಚಾಗುತ್ತಿದೆ. ಕೆರೆ ಹೆಸರಲ್ಲಿ ರಾಜಕೀಯ ಕಾರ್ಯಕ್ರಮಗಳಾಗುತ್ತಿವೆ. ಸಂಘ–ಸಂಸ್ಥೆಗಳು ತಮ್ಮ ಪ್ರಚಾರಕ್ಕಾಗಿ ಕೆರೆ ಅಂಗಳವನ್ನು ಬಳಸಿಕೊಳ್ಳುತ್ತಿವೆ. ಕೆರೆಯಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಮಕ್ಕಳು, ವೃದ್ಧರಿಗೆ ಕೆಲವು ಚಟುವಟಿಕೆಗಳಿಗಷ್ಟೇ ಅವಕಾಶ ಇರಬೇಕು. ಆದರೆ, ಯಾವುದೇ ರೀತಿಯಲ್ಲೂ ಕೆರೆ ಪರಿಸರಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಪರಿಸರ ಕಾರ್ಯಕರ್ತ ಶ್ರೀನಿವಾಸ್‌ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು