ಶನಿವಾರ, ಮಾರ್ಚ್ 25, 2023
23 °C

ಬೆಂಗಳೂರಿನಲ್ಲಿ ಮೊದಲ ಬಾರಿ ಸೇನಾ ದಿನಾಚರಣೆ: ಗಮನ ಸೆಳೆದ ಯೋಧರ ಪಥಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ(ಎಲ್‌ಎಸಿ) ಬಲಿಷ್ಠ ರಕ್ಷಣಾ ಸಾಮರ್ಥ್ಯವನ್ನು ಭಾರತೀಯ ಸೇನೆ ಹೊಂದಿದ್ದು, ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ’ ಎಂದು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಪ್ರತಿಪಾದಿಸಿದರು.

ಇದೇ ಪ್ರಥಮ ಬಾರಿ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗೆ ನಡೆದ ಸೇನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ದೇಶದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ನಗರದ ‘ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಆ್ಯಂಡ್‌ ಸೆಂಟರ್‌’ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥರು, ಸೇನೆಯ ಯಶಸ್ವಿ ಕಾರ್ಯಾಚರಣೆಗಳು ಮತ್ತು ಭವಿಷ್ಯದಲ್ಲಿ ಎದುರಿಸಬೇಕಾದ ಸವಾಲುಗಳನ್ನು ವಿಶ್ಲೇಷಿಸಿದರು.

‘ಉತ್ತರದ ಗಡಿ ಪ್ರದೇಶವು ಶಾಂತಿಯುತವಾಗಿದೆ. ಈಗಿರುವ ವ್ಯವಸ್ಥೆಗಳ ಮೂಲಕವೇ ಶಾಂತಿ ಕಾಪಾಡುವ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲೂ ಯಾವುದೇ ರೀತಿಯ ಸವಾಲು ಮತ್ತು ಸಂದರ್ಭಗಳನ್ನು ಎದುರಿಸಲು ಸೇನೆ ಸನ್ನದ್ಧವಾಗಿದೆ. ಜಮ್ಮು ಮತ್ತು ಪಂಜಾಬ್‌ ಗಡಿಯಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಮತ್ತು ಡ್ರಗ್ಸ್‌ ಸಾಗಿಸುವ ಪ್ರಯತ್ನಗಳನ್ನು ವಿಫಲಗೊಳಿಸಲು ಪ್ರತಿರೋಧಕ ಡ್ರೋನ್‌ಗಳನ್ನು ಬಳಸಲಾಗುತ್ತಿದೆ’ ಎಂದರು.

ಪಶ್ಚಿಮ ಗಡಿಯಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ ಅವರು, ‘ಗಡಿಯ ಇನ್ನೊಂದು ಬದಿಯಲ್ಲಿ ಭಯೋತ್ಪಾದಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಪಾಕಿಸ್ತಾನದಿಂದ ನಡೆಯುವ ಒಳನುಸುಳುವಿಕೆಯ ಪ್ರಯತ್ನಗಳನ್ನು ನಮ್ಮ ಯೋಧರು ಯಶಸ್ವಿಯಾಗಿ ವಿಫಲಗೊಳಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ದುರ್ಗಮ ಸ್ಥಳಗಳು ಮತ್ತು ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ ನಮ್ಮ ಯೋಧರು ಗಡಿ ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಈ ಯೋಧರಿಗೆ ಎಲ್ಲ ರೀತಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗಡಿ ಪ್ರದೇಶಗಳಲ್ಲಿ, ಸ್ಥಳೀಯ ಆಡಳಿತಗಳ ಸಹಯೋಗದಲ್ಲಿ ಸೇನೆಯು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ’ ಎಂದು ತಿಳಿಸಿದರು.

’ಆತ್ಮನಿರ್ಭರದಿಂದ ಆಧುನಿಕತೆ ಎನ್ನುವುದು ನಮ್ಮ ಮೂಲ ಮಂತ್ರ. ಭವಿಷ್ಯದ ದೃಷ್ಟಿಯಿಂದ ಸೇನೆಯಲ್ಲಿ ಮಹತ್ವದ ಪರಿವರ್ತನೆ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಯೋಧರನ್ನು ಸಜ್ಜುಗೊಳಿಸಲಾಗುತ್ತಿದೆ. ಕೆಲವು ಹಳೆಯ ಘಟಕಗಳಿಗೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಇದರಿಂದ, ಯಾವುದೇ ಸವಾಲುಗಳನ್ನು ಯೋಧರು ಎದುರಿಸಬೇಕು ಎನ್ನುವುದು ಈ ಪ್ರಕ್ರಿಯೆಯ ಉದ್ದೇಶ’ ಎಂದು ತಿಳಿಸಿದರು.

‘ಅಗ್ನಿಪಥ ಯೋಜನೆಯು ಐತಿಹಾಸಿಕ ಮತ್ತು ಪ್ರಗತಿಶೀಲ ಹೆಜ್ಜೆಯಾಗಿದೆ. ಈ ನೇಮಕಾತಿಗೆ ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುರುಷ ಅಗ್ನಿವೀರರ ಮೊದಲ ತಂಡದ ತರಬೇತಿ ಈಗಾಗಲೇ ಆರಂಭವಾಗಿದೆ. ಈ ಯೋಧರಿಗೆ ಸಿಮ್ಯುಲೇಟರ್‌ ಸೇರಿದಂತೆ ಆಧುನಿಕ ಉಪಕರಣಗಳ ಬಗ್ಗೆ ಹೆಚ್ಚು ತರಬೇತಿ ನೀಡಲಾಗುತ್ತಿದೆ. ಮಹಿಳಾ ಅಗ್ನಿವೀರರಿಗೆ ಮಾರ್ಚ್‌ನಲ್ಲಿ ತರಬೇತಿ ಆರಂಭವಾಗಲಿದೆ. ಸೇನೆಗೆ ನಾರಿ ಶಕ್ತಿಯಿಂದ ಮತ್ತಷ್ಟು ಬಲ ದೊರೆತಿದೆ. ಮಹಿಳಾ ಅಧಿಕಾರಿಗಳು ಮತ್ತು ಯೋಧರು ಸಿಯಾಚಿನ್‌ ಸೇರಿದಂತೆ ಎಲ್ಲ ರೀತಿಯ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ವಿವರಿಸಿದರು.

‘ಅಂತರರಾಷ್ಟ್ರೀಯ ರಕ್ಷಣಾ ಸಹಕಾರ ಕ್ಷೇತ್ರದಲ್ಲಿ ಭಾರತೀಯ ಸೇನೆಯ ಯೋಧರು ಮಹತ್ವದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಎಂಟು ಕಾರ್ಯಾಚರಣೆಗಳಲ್ಲಿ 5,800 ಕ್ಕೂ ಹೆಚ್ಚು ಯೋಧರು ವಿಶ್ವ ಶಾಂತಿಪಾಲನಾ ಪ‍ಡೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

‘ತಂತ್ರಜ್ಞಾನ ಆಧಾರಿತ ಸೇನೆ’:

‘ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಯುದ್ಧ ಕ್ಷೇತ್ರವು ಜಟಿಲವಾಗುತ್ತಿದ್ದು, ಸೈಬರ್‌ ಯುದ್ಧದಂತಹ ಅಪಾಯ ಮತ್ತು ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತವಾಗಿ ಸೇನೆ ಪರಿವರ್ತನೆಗೊಳ್ಳಬೇಕಾಗಿದೆ’ ಎಂದು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಪ್ರತಿಪಾದಿಸಿದರು.

‘ಮಾಹಿತಿ ಕದನವು ಭವಿಷ್ಯದಲ್ಲಿ ಎದುರಾಗುವ ಮಹತ್ವದ ಸವಾಲು. ಹೀಗಾಗಿ, ಕೃತಕ ಬುದ್ಧಿಮತ್ತೆ, ಬ್ಲಾಕ್‌ ಚೈನ್‌,  ಮಾನವರಹಿತ ವ್ಯವಸ್ಥೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಹ ದೇಶಿಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತೀಯ ಸೇನೆಯು ಭವಿಷ್ಯದ ಯುದ್ಧಗಳನ್ನು ಎದುರಿಸಿ ವಿಜಯಿಯಾಗುತ್ತದೆ ಎನ್ನುವ ಅಚಲ ವಿಶ್ವಾಸ ನಮ್ಮದಾಗಿದೆ’ ಎಂದು ಭರವಸೆ ನೀಡಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು