ಮಂಗಳವಾರ, ಸೆಪ್ಟೆಂಬರ್ 21, 2021
22 °C
ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ, ಹಾರ ನಿಷೇಧಕ್ಕೆ ಖಂಡನೆ *ಹೂವು ಬೆಳೆಗಾರರಿಂದ ಪ್ರತಿಭಟನೆ

‘ಪುಷ್ಪೋದ್ಯಮದ ಮೇಲೆ ಗದಾಪ್ರಹಾರ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ ಹಾಗೂ ಹೂವಿನ ಹಾರ ನಿಷೇಧಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿ ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ನೇತೃತ್ವದಲ್ಲಿ ಹೂವಿನ ಬೆಳೆಗಾರರು ಮತ್ತು ಮಾರಾಟಗಾರರು ಹೆಬ್ಬಾಳದ ಪುಷ್ಪ ಹರಾಜು ಕೇಂದ್ರ (ಐಎಫ್‌ಎಬಿ) ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ವಿವಿಧ ಪುಷ್ಪ ಬೆಳೆಗಾರರ ಹಾಗೂ ಮಾರಾಟಗಾರರ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಕೈಯಲ್ಲಿ ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು ಹಿಡಿದುಕೊಂಡು ಪ್ರತಿಭಟಿಸಿದರು.

ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಎಂ.ಅರವಿಂದ್‌, ‘ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಸರ್ಕಾ ಆದೇಶಿಸಿರುವುದು ಖಂಡನೀಯ. ಇದು, ರಾಜ್ಯದ 7,500 ಹೆಕ್ಟೇರ್‌ ಪ್ರದೇಶದಲ್ಲಿ ಪುಷ್ಪ ಕೃಷಿಯಲ್ಲಿ ತೊಡಗಿಕೊಂಡಿರುವ ಸಾವಿರಾರು ರೈತ ಕುಟುಂಬಗಳ ಮೇಲಿನ ಗದಾಪ್ರಹಾರ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕೋವಿಡ್‌ ಹೊಡೆತದಿಂದಾಗಿ ಪುಷ್ಪೋದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಆದೇಶ ಮತ್ತೆ ಉದ್ಯಮವನ್ನು ಬುಡಮೇಲು ಮಾಡುವಂತಿದೆ. ಹಲವು ತಿಂಗಳಿನಿಂದ ಯಾವುದೇ ಸಭೆ–ಸಮಾರಂಭಗಳು ನಡೆಯದೆ, ಹೂವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಫ್ಲವರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಶ್ರೀಕಾಂತ್‌ ಬೊಲ್ಲಪಳ್ಳಿ,‘ಪುಷ್ಪಕೃಷಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ಹಸಿರು ಮನೆ ಮೂಲಕ ನಡೆಯುತ್ತಿರುವ ಪುಷ್ಪಕೃಷಿಯಲ್ಲಿ ಸಾವಿರಾರು ಕುಟುಂಬಗಳು ಜೀವನ ಕಂಡುಕೊಂಡಿವೆ. ಬೆಂಗಳೂರು ದೇಶದ ಪುಷ್ಪೋದ್ಯಮದ ಪ್ರಮುಖ ಜಾಲವಾಗಿದ್ದು, ಈ ರೀತಿ ನಿಷೇಧ ಹೇರುವ ಮೂಲಕ ಪುಷ್ಪಕೃಷಿಗೆ ಹೊಡೆತ ನೀಡುವುದು ಸರಿಯಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು