ಶುಕ್ರವಾರ, ಜನವರಿ 28, 2022
25 °C
ಲಾಲ್‌ಬಾಗ್‌ನಲ್ಲಿ ಪ್ರದರ್ಶನ ಆಯೋಜನೆ; ನಟರಿಗೆ ಪುಷ್ಪಗಳಿಂದ ಗೌರವ

ನಟ ಪುನೀತ್‌ ಪರಿಕಲ್ಪನೆಯಲ್ಲಿ ಫಲಪುಷ್ಪ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ನಟರಾದ ಡಾ.ರಾಜ್‌ಕುಮಾರ್‌ ಹಾಗೂ ಇತ್ತೀಚೆಗೆ ಅಗಲಿದ ಪುನೀತ್‌ ರಾಜ್‌ಕುಮಾರ್‌ ಅವರ ನೆನಪಾರ್ಥ ಆಯೋಜಿಸಲು ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘ ನಿರ್ಧರಿಸಿವೆ.

ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಇಬ್ಬರೂ ನಟರಿಗೆ ಫುಷ್ಪಗಳ ಮೂಲಕ ಗೌರವ ಸಲ್ಲಿಸಲು ಲಾಲ್‌ಬಾಗ್‌ನಲ್ಲಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ.

ಮೂಲಗಳ ಪ್ರಕಾರ ಲಾಲ್‌ಬಾಗ್‌ ಉದ್ಯಾನದ ಗಾಜಿನ ಮನೆಯಲ್ಲಿ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿಶೇಷವಾದ ತರಹೇವಾರಿ ಅಲಂಕಾರಿಕ ಪುಷ್ಪಗಳನ್ನು ಬಳಕೆ ಮಾಡಲಾಗುವುದು ಎಂದೂ ಹೇಳಲಾಗಿದೆ.

‘ಕನ್ನಡ ಚಿತ್ರರಂಗದ ಮೇರು ನಟರಾದ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ. ಪ್ರದರ್ಶನದ ವಿನ್ಯಾಸಗಳು, ದಿನಾಂಕ ನಿಗದಿಯನ್ನು ಶೀಘ್ರದಲ್ಲೇ ತೀರ್ಮಾನಿಸಿ ಅಂತಿಮಗೊಳಿಸಲಾಗುವುದು’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ತಿಳಿಸಿದ್ದಾರೆ.

21ರಂದು ಪುನೀತ್‌ಗೆ ರಂಗನಮನ
ಬೆಂಗಳೂರು: ಸಾಹಿತಿ ಮತ್ತು ಕಲಾವಿದರ ವೇದಿಕೆಯು ರಂಗ ವಿಜಯ ಸಂಘಟನೆಯ ಸಹಯೋಗದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ರಂಗನಮನ ಸಲ್ಲಿಸಲು ನಿರ್ಧರಿಸಿದೆ. ಇದಕ್ಕಾಗಿ ‘ನಿನ್ನಂಥೋರ್‌ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಇದೇ 21ರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇಂಪು ಸಂಗೀತ ಸಂಸ್ಥೆಯವರು ರಂಗ ಗೀತೆ ಹಾಗೂ ನೆನಪಿನ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ನಟ ರಾಘವೇಂದ್ರ ರಾಜ್‌ಕುಮಾರ್‌ ಭಾಗವಹಿಸಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು