ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಡ್‌ ಡೆಲಿವರಿ ಸಿಬ್ಬಂದಿ ಹಿತಕ್ಕಾಗಿ ಕಾನೂನು ರೂಪಿಸಲು ಯುಎಫ್‌ಡಿಪಿಯು ಒತ್ತಾಯ

ಆಹಾರ ವಿತರಿಸುವವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಆಗ್ರಹ
Last Updated 9 ಜುಲೈ 2020, 14:27 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಿಗ್ಗಿ, ಝೊಮ್ಯಾಟೊದಂತಹ ಆಹಾರ ವಿತರಣೆ ಕಂಪನಿಗಳ ಫುಡ್‌ ಡೆಲಿವರಿ ಸಿಬ್ಬಂದಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಇವರ ಹಿತ ಕಾಯಲು ಕಾನೂನು ರೂಪಿಸಬೇಕು ಎಂದು ಯುನೈಟೆಡ್‌ ಫುಡ್‌ ಡೆಲಿವರಿ ಪಾರ್ಟ್‌ನರ್ಸ್‌ ಯೂನಿಯನ್‌ (ಯುಎಫ್‌ಡಿಪಿಯು) ಒತ್ತಾಯಿಸಿದೆ.

ಎವೈಡಿವೈಒ ನೇತೃತ್ವದಲ್ಲಿ ಯುಎಫ್‌ಡಿಪಿಯು ಫೇಸ್‌ಬುಕ್‌ ಲೈವ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಫುಡ್‌ ಡೆಲಿವರಿ ಕೆಲಸಗಾರರು ತಮ್ಮ ಸಂಕಷ್ಟ ಹೇಳಿಕೊಂಡರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಆಹಾರಕ್ಕೆ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಹಿಂದಿಗೆ ಹೋಲಿಸಿದರೆ ಈಗ ಶೇ 50ಕ್ಕಿಂತಲೂ ಕಡಿಮೆ ಆರ್ಡರ್‌ಗಳು ಬರುತ್ತಿವೆ. ‘ಚಾರ್ಟ್‌ ರೇಟ್‌’ ಇದ್ದಕ್ಕಿದ್ದಂತೆ ಪರಿಷ್ಕರಿಸುತ್ತಿದ್ದಾರೆ. ಮೊದಲು ದಿನಕ್ಕೆ ₹900ವರೆಗೆ ದುಡಿಯುತ್ತಿದ್ದೆವು. ಈಗ ₹400 ಕೂಡ ಸಿಗುತ್ತಿಲ್ಲ’ ಎಂದು ಧಾರವಾಡದಲ್ಲಿ ಝೊಮ್ಯಾಟೊ ಆಹಾರ ವಿತರಿಸುವ ಎಸ್.ಕೆ. ಹರೀಶ್ ಹೇಳಿದರು.

‘ಹೆಸರಿಗೆ ನಮ್ಮನ್ನು ಪಾರ್ಟ್‌ನರ್ಸ್‌ ಎನ್ನುತ್ತಾರೆ. ಕೆಲಸದಲ್ಲಿ ಮಾತ್ರ ನಾವು ಪಾಲುದಾರರು, ಲಾಭದಲ್ಲಿ ಅಲ್ಲ. ರೇಟ್‌ ಚಾರ್ಟ್‌ ಸಿದ್ಧಪಡಿಸುವಾಗ ನಮ್ಮ ಅಭಿಪ್ರಾಯ ಕೇಳುವುದಿಲ್ಲ. ಕಂಪನಿ ರೂಪಿಸುವ ನಿಯಮ ಪಾಲಿಸದಿದ್ದರೆ ಕೆಲಸ ಬಿಡಬೇಕು ಎಂಬಂತೆ ವರ್ತಿಸುತ್ತಾರೆ’ ಎಂದು ಬಳ್ಳಾರಿಯ ನರೇಂದ್ರ ಹೇಳಿದರು.

‘ಬೆಳಗಾವಿಯಲ್ಲಿ ಕಚೇರಿ ಮುಚ್ಚಿದ್ದಾರೆ. ಪ್ರತಿ ಕಿ.ಮೀ.ಗೆ ₹5ಕ್ಕಿಂತಲೂ ಕಡಿಮೆ ಪ್ರೋತ್ಸಾಹಧನ ಕೊಡುತ್ತಾರೆ. ಈಗ ಕೆಲ ಪ್ರದೇಶಗಳು ಸೀಲ್‌ಡೌನ್‌ ಆಗಿರುವುದರಿಂದ ಆಹಾರ ತಲುಪಿಸಲು 6ರಿಂದ 8 ಕಿ.ಮೀ. ಸುತ್ತಿಕೊಂಡು ಹೋಗಬೇಕು’ ಎಂದು ಬೆಳಗಾವಿಯ ಮೊಯಿನ್‌ ಹೇಳಿದರು.

‘ಸ್ವಿಗ್ಗಿ, ಝೊಮಾಟೊದಂತಹ ಆಹಾರ ವಿತರಣಾ ಕಂಪನಿಗಳ ಮಾರುಕಟ್ಟೆ ಮೌಲ್ಯ ₹4000 ಕೋಟಿಗಳಷ್ಟಿದೆ. ಚೀನಾ ಸೇರಿದಂತೆ ವಿವಿಧ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿವೆ. ಬೆಂಗಳೂರಿನ 1.5 ಲಕ್ಷ ಜನ ಸೇರಿ, ದೇಶದ ಮೆಟ್ರೊ ನಗರಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಫುಡ್‌ ಡೆಲಿವರಿ ಮಾಡುತ್ತಿದ್ದಾರೆ. ಕಂಪನಿಗಳು ಲಾಭದಲ್ಲಿದ್ದರೂ, ನೌಕರರಿಗೆ ಸೌಲಭ್ಯ ನೀಡುತ್ತಿಲ್ಲ’ ಎಂದು ಯುಎಫ್‌ಡಿಪಿಯು ಸಲಹೆಗಾರ ಡಾ.ಜಿ.ಶಶಿಕುಮಾರ್‌ ದೂರಿದರು.

ಕಾನೂನು ತಜ್ಞ ಪ್ರೊ. ಬಾಬು ಮ್ಯಾಥ್ಯೂ, ಯುಎಫ್‌ಡಿಪಿಯು ಅಧ್ಯಕ್ಷ ವಿನಯ್‌ ಸಾರಥಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT