ಶುಕ್ರವಾರ, ಏಪ್ರಿಲ್ 16, 2021
29 °C

ಪಾದಚಾರಿ ಮಾರ್ಗಕ್ಕೆ ನುಗ್ಗಿದ ಲಾರಿ; ಶಿಕ್ಷಕಿ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಟರಾಯನ‍‍ಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಗೂಡ್ಸ್ ಲಾರಿಯೊಂದು ಮೈ ಮೇಲೆ ಹರಿದು ಶಿಕ್ಷಕಿ ವಿದ್ಯಾ (40) ಮೃತಪಟ್ಟಿದ್ದಾರೆ.

‘ನಾಗರಬಾವಿ ನಿವಾಸಿಯಾದ ವಿದ್ಯಾ, ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಪತಿ ಹಾಗೂ ಮಗಳ ಜೊತೆ ವಾಸವಿದ್ದರು. ಮನೆಗೆ ಬೇಕಾದ ದಿನಸಿ ತರಲು ಭಾನುವಾರ ಬೆಳಿಗ್ಗೆ ಅಂಗಡಿಗೆ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

‘ನಾಗರಬಾವಿ ವೃತ್ತದ ಪಾದಚಾರಿ ಮಾರ್ಗದಲ್ಲಿ ವಿದ್ಯಾ ನಡೆದುಕೊಂಡು ಹೊರಟಿದ್ದರು. ಅದೇ ಸಂದರ್ಭದಲ್ಲೇ ವೇಗವಾಗಿ ಬಂದಿದ್ದ ಗೂಡ್ಸ್ ಲಾರಿ, ಪಾದಚಾರಿ ಮಾರ್ಗಕ್ಕೆ ನುಗ್ಗಿ ವಿದ್ಯಾ ಅವರಿಗೆ ಗುದ್ದಿತ್ತು. ಲಾರಿ ಚಕ್ರವು ವಿದ್ಯಾ ಅವರ ತಲೆ ಹಾಗೂ ದೇಹದ ಮೇಲೆ ಹರಿದಿತ್ತು. ತೀವ್ರ ರಕ್ತಸ್ರಾವದಿಂದ ವಿದ್ಯಾ ಸ್ಥಳದಲ್ಲೇ ಮೃತಪಟ್ಟರು’ ಎಂದೂ ತಿಳಿಸಿದರು.

ಚಾಲಕ ಪರಾರಿ: ‘ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿದ್ದ ಚಾಲಕ, ಕೃತ್ಯದ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಪೊಲೀಸರು ಹೇಳಿದರು.

‘ರಸ್ತೆಯಲ್ಲಿ ಹೊರಟಿದ್ದ ಲಾರಿಯನ್ನು ಚಾಲಕ, ಏಕಾಏಕಿ ಪಾದಚಾರಿ ಮಾರ್ಗಕ್ಕೆ ನುಗ್ಗಿಸಿದ್ದ. ಆತ ಮದ್ಯ ಕುಡಿದಿದ್ದನಾ ಅಥವಾ ಲಾರಿ ಬ್ರೇಕ್ ಫೇಲ್‌ ಆಗಿತ್ತಾ ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ’ ಎಂದೂ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು