ಬೆಂಗಳೂರು: ‘ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಬೇಕು’ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
ಶಿವಮೊಗ್ಗ–ಯಶವಂತಪುರ ರೈಲಿನಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ, ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಘಟನೆಯಿಂದ ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರ ಆತಂಕ ಹೆಚ್ಚಿಸಿದೆ. ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಬೇಕು ಎಂದು ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎ.ಶಾಂತಾ ಒತ್ತಾಯಿಸಿದ್ದಾರೆ.
ನಗರದ ಅರಣ್ಯ ಭವನದಲ್ಲಿ ಕೆಲಸ ಮಾಡುತ್ತಿದ್ದ ಜಿ.ಅನ್ನಪೂರ್ಣ ಅವರು ಇಲಾಖೆ ಪರೀಕ್ಷೆಯ ಮೇಲ್ವಿಚಾರಣೆಗಾಗಿ ಶಿವಮೊಗ್ಗಕ್ಕೆ ತೆರಳಿ ರೈಲಿನಲ್ಲಿ ವಾಪಸ್ ಬರುತ್ತಿದ್ದರು. ಆಗ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆ. ಈ ಘಟನೆಯು ರೈಲ್ವೆ ಇಲಾಖೆಯ ವೈಫಲ್ಯ ತೋರಿಸುತ್ತದೆ ಎಂದು ದೂರಿದ್ದಾರೆ.
ಅನ್ನಪೂರ್ಣ ಅವರು ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಅದೇ ಬೋಗಿಯಲ್ಲಿ ಘಟನೆ ನಡೆದಿದೆ. ಮಹಿಳಾ ಬೋಗಿಗಳು ಮಹಿಳೆಯರಿಗೆ ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಬೇಕು. ರೈಲ್ವೆ ಪ್ರಯಾಣದ ವೇಳೆ ಸುರಕ್ಷತೆ ಹೆಚ್ಚಿಸಬೇಕು. ರಜಾ ದಿನಗಳಲ್ಲಿ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಬೇಕು. ಮಹಿಳಾ ಬೋಗಿಗಳನ್ನು ರೈಲಿನ ಮಧ್ಯಭಾಗದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.