ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ವಿದೇಶಿ ಮಹಿಳೆ ಹತ್ಯೆ ಪ್ರಕರಣ : ವೇಶ್ಯಾವಾಟಿಕೆ ಜಾಲ ಪತ್ತೆ

ಶೇಷಾದ್ರಿಪುರ ಠಾಣೆ ಪೊಲೀಸರ ತನಿಖೆ- ಪಂಚತಾರಾ ಹೋಟೆಲ್‌ ಮಾಲೀಕ, ಏಜೆಂಟ್ ವಿರುದ್ಧ ಎಫ್‌ಐಆರ್
Published 28 ಏಪ್ರಿಲ್ 2024, 0:30 IST
Last Updated 28 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಂಚತಾರಾ ಹೋಟೆಲ್‌ವೊಂದರ ಕೊಠಡಿಯಲ್ಲಿ ನಡೆದಿದ್ದ ವಿದೇಶಿ ಮಹಿಳೆಯೊಬ್ಬರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಶೇಷಾದ್ರಿಪುರ ಠಾಣೆ ಪೊಲೀಸರು, ಅಂತರರಾಷ್ಟ್ರೀಯ ಮಟ್ಟದ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಮಾಡಿದ್ದಾರೆ.

‘ಶೇಷಾದ್ರಿಪುರ ಠಾಣೆ ವ್ಯಾಪ್ತಿಯಲ್ಲಿರುವ ಹೋಟೆಲ್‌ನ ಕೊಠಡಿಯಲ್ಲಿ ಮಾರ್ಚ್ 13ರಂದು ತಡರಾತ್ರಿ ವಿದೇಶಿ ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಕೃತ್ಯ ಎಸಗಿದ್ದ ಹೋಟೆಲ್‌ ಸಿಬ್ಬಂದಿಯಾದ ಅಸ್ಸಾಂ ರಾಜ್ಯದ ಚರೈಡಿಯೊ ಜಿಲ್ಲೆಯ ರಾಬರ್ಟ್ ಹಾಗೂ ಅಮ್ರಿತ್ ಎಂಬುವವರನ್ನು ಬಂಧಿಸಲಾಗಿತ್ತು. ಜೊತೆಗೆ, ಮಹಿಳೆಯ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕಿದಾಗ ವೇಶ್ಯಾವಾಟಿಕೆ ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಉಜ್ಬೇಕಿಸ್ತಾನ್ ಪ್ರಜೆಯಾದ ಮಹಿಳೆಯನ್ನು ಬೆಂಗಳೂರಿನ ಏಜೆಂಟ್‌ ರಾಹುಲ್ ಎಂಬಾತ ವೇಶ್ಯಾವಾಟಿಕೆಗೆಂದು ಕರೆಸಿದ್ದ. ತಾನೇ ಕೊಠಡಿ ಮಾಡಿಕೊಟ್ಟಿದ್ದ. ಅದೇ ಕೊಠಡಿಗೆ ಗ್ರಾಹಕರನ್ನು ಕಳುಹಿಸಿ ಹಣ ಸಂಪಾದಿಸುತ್ತಿದ್ದ’ ಎಂದು ತಿಳಿಸಿವೆ.

‘ಕೊಲೆ ಪ್ರಕರಣದ ತನಿಖೆ ನಡೆಸಿದಾಗ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ವೇಶ್ಯಾವಾಟಿಕೆ ಜಾಲದ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ರಾಹುಲ್ ಹಾಗೂ ಕೃತ್ಯಕ್ಕೆ ಸ್ಥಳ ಒದಗಿಸಿದ್ದ ಹೋಟೆಲ್ ಮಾಲೀಕನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

20ಕ್ಕೂ ಹೆಚ್ಚು ಬಾರಿ ಭೇಟಿ: ‘ವಿದೇಶಿ ಮಹಿಳೆ 20ಕ್ಕೂ ಹೆಚ್ಚು ಬಾರಿ ನಗರಕ್ಕೆ ಬಂದಿದ್ದರು. ಆರೋಪಿ ರಾಹುಲ್, ವಿಮಾನದ ಟಿಕೆಟ್ ವ್ಯವಸ್ಥೆ ಮಾಡುತ್ತಿದ್ದ. ತನ್ನದೇ ಗುರುತಿನ ಚೀಟಿಗಳನ್ನು ಬಳಸಿ ಕೊಠಡಿ ಕಾಯ್ದಿರಿಸುತ್ತಿದ್ದ. ಅದೇ ಕೊಠಡಿಯಲ್ಲಿ ಮಹಿಳೆ ಉಳಿದುಕೊಳ್ಳುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗ್ರಾಹಕ ನೀಡಿದ್ದ ಮಾಹಿತಿ: ‘ಹಣ ದೋಚುವ ಉದ್ದೇಶದಿಂದ ಆರೋಪಿಗಳಾದ ರಾಬರ್ಟ್ ಹಾಗೂ ಅಮ್ರಿತ್, ವಿದೇಶಿ ಮಹಿಳೆಯನ್ನು ಕೊಂದು ಪರಾರಿಯಾಗಿದ್ದರು. ಮೃತದೇಹ ನೋಡಿದ್ದ ಹೋಟೆಲ್‌ನ ವ್ಯವಸ್ಥಾಪಕರು ಠಾಣೆಗೆ ಮಾಹಿತಿ ನೀಡಿದ್ದರು. ಆದರೆ, ಹೋಟೆಲ್ ಸಿಬ್ಬಂದಿಯೇ ಕೊಲೆ ಮಾಡಿರುವುದು ಆರಂಭದಲ್ಲಿ ಗೊತ್ತಾಗಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜರೀನಾ ಮೊಬೈಲ್ ಪರಿಶೀಲನೆ ನಡೆಸಿದಾಗ, ವಾಟ್ಸ್‌ಆ್ಯಪ್‌ ಕರೆಗಳು ಬಂದಿತ್ತು ಗೊತ್ತಾಗಿತ್ತು. ಅದೇ ಸುಳಿವು ಆಧರಿಸಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಾಗ, ಆತ ಗ್ರಾಹಕನೆಂಬುದು ಗೊತ್ತಾಗಿತ್ತು. ಏಜೆಂಟ್ ರಾಹುಲ್‌ಗೆ ₹ 7 ಸಾವಿರ ಹಣ ನೀಡಿದ್ದ ಆತ, ಹೋಟೆಲ್‌ನಲ್ಲಿ ಜರೀನಾ ಅವರನ್ನು ಭೇಟಿಯಾಗಿದ್ದ. ಆತನ ಹೇಳಿಕೆ ಆಧರಿಸಿ ರಾಹುಲ್‌ನನ್ನು ಪತ್ತೆ ಮಾಡಲಾಯಿತು. ನಂತರ, ಸಿಬ್ಬಂದಿ ಮೇಲೆ ಅನುಮಾನ ಬಂದಿತ್ತು. ಹೆಚ್ಚಿನ ತನಿಖೆ ನಡೆಸಿದಾಗ ಸಿಬ್ಬಂದಿ ರಾಬರ್ಟ್ ಹಾಗೂ ಅಮ್ರಿತ್ ಸಿಕ್ಕಿಬಿದ್ದರು. ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡರು’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT