ಬೆಂಗಳೂರು: ಬೆಂಗಳೂರು ಮೆಟ್ರೊದಲ್ಲಿ ಟಿಕೆಟ್ ಇಲ್ಲದೆ ಹೇಗೆ ಪ್ರಯಾಣಿಸಬಹುದು ಎನ್ನುವ ಬಗ್ಗೆ ವಿದೇಶಿ ಯುಟ್ಯೂಬರ್ ಒಬ್ಬರು ವಿಡಿಯೊ ಮಾಡಿ ಹಂಚಿಕೊಂಡಿದ್ದು, ವ್ಯಾಪಕ ಟೀಕೆಗೆ ಒಳಗಾಗಿದೆ.
ಸೈಪ್ರಸ್ ದೇಶದ ಯುಟ್ಯೂಬರ್ ಫಿಡಿಯಾಸ್ ಪನಾಯೊಟೌ ಬೆಂಗಳೂರಿನ ಗ್ರೀನ್ ಲೈನ್ ಮೆಟ್ರೊದಲ್ಲಿ ಟಿಕೆಟ್ ಪಡೆಯದೆ ಗೇಟ್ ದಾಟಿ ಪ್ರಯಾಣಿಸಿ, ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ, ‘ಭಾರತೀಯ ಮೆಟ್ರೊದಲ್ಲಿ ಹೇಗೆ ನುಸುಳಬಹುದು ಎನ್ನುವ ಮೂಲಕ ಆರಂಭಿಸಿ, ಮೆಟ್ರೊ ನಿಲ್ದಾಣದಲ್ಲಿದ್ದ ಇಬ್ಬರು ಪ್ರಯಾಣಿಕರ ಬಳಿ ಟಿಕೆಟ್ ಇಲ್ಲದೆ ಪ್ರಯಾಣಿಸಲು ಸಾಧ್ಯವೆ? ಎಂದು ಕೇಳಿದ್ದಾರೆ, ಅದಕ್ಕೆ ಉತ್ತರವಾಗಿ ಪ್ರಯಾಣಿಕರು, ಬಹುಷಃ ಸಾಧ್ಯವಿಲ್ಲ ಎಂದಿದ್ದಾರೆ, ಆಗ ಫಿಡಿಯಾಸ್ ನಾನು ಸಾಧ್ಯವಾಗಿಸುತ್ತೇನೆ ಎಂದು ಗೇಟ್ ಹಾರಿದ್ದಾರೆ, ನಂತರ ಹೊರಗೆ ಹೇಗೆ ಹೋಗುತ್ತೀರಿ ಎಂದು ಕೇಳಿದಾಗ ಅದು ಸರಿ, ಎಂದ ಫಿಡಿಯಾಸ್ ಒಳಗೆ ಬಂದಂತೆ ಗೇಟ್ ದಾಟಿ ಹೊರಬಂದಿದ್ದಾರೆ. ಮೆಟ್ರೊ ರೈಲಿನ ಒಳಗೆ ಕೂಡ ಪುಲ್‌ಅಪ್ ಮಾಡಿ, ಅಲ್ಲಿರುವ ಜನರೊಂದಿಗೆ ಮಾತನಾಡಿದ್ದಾರೆ.