ಶನಿವಾರ, ಜೂನ್ 19, 2021
21 °C
ರಾಜೀವ್‌ ಗಾಂಧಿ ವಸತಿ ನಿಗಮವನ್ನು ನಂಬಿ ರೋಸಿ ಹೋಗಿರುವ ಯೋಧರು

ಮನೆಗಾಗಿ 10 ವರ್ಷಗಳಿಂದ ಕಾದಿರುವ ಮಾಜಿ ಸೈನಿಕರು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ 74 ಮಾಜಿ ಯೋಧರಿಗೆ ರಿಯಾಯಿತಿ ದರದಲ್ಲಿ ವಸತಿ ಸೌಲಭ್ಯ ಒದಗಿಸಲು ರಾಜೀವ್‌ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಹತ್ತು ವರ್ಷಗಳಿಂದ ಸತಾಯಿಸುತ್ತಿದ್ದಾರೆ.

ಕೊಡತಿ ಗ್ರಾಮ ವ್ಯಾಪ್ತಿಯಲ್ಲಿದ್ದ ಸರ್ಕಾರಿ ಜಾಗದಲ್ಲಿ ನಿವೇಶನ ಪಡೆದುಕೊಳ್ಳಲು ಮಾಜಿ ಸೈನಿಕರ ತಂಡ 2010ರಲ್ಲಿ ಮುಂದಾಯಿತು.  ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರ್ಥಿಕವಾಗಿ ದುರ್ಬಲರಾದ ಅಂಗವಿಕಲರು, ಹಿರಿಯ ನಾಗರಿಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭಾಗ್ಯ, ಸಂಪದ, ಯಶಸ್ಸು (ಬಿಎಸ್‌ವೈ) ಯೋಜನೆಯನ್ನೂ ಅದೇ ವರ್ಷ ಆರಂಭಿಸಲಾಯಿತು. ಈ ಯೋಜನೆಗೂ ಸರ್ಕಾರ ಅದೇ ಜಾಗವನ್ನು ಗುರುತಿಸಿತು. ಹಾಗಾಗಿ ನಿಗಮದ ಅಧಿಕಾರಿಗಳು ಮಾಜಿ ಸೈನಿಕರಿಗೆ ನಿವೇಶನಗಳ ಬದಲಿಗೆ ಮನೆಗಳನ್ನು ರಿಯಾಯಿತಿ ದರದಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಸರ್ಕಾರ ಮತ್ತು ನಿಗಮದ ಅಧಿಕಾರಿಗಳು ಬದಲಾದಂತೆ ಯೋಜನೆ ನನೆಗುದಿಗೆ ಬಿತ್ತು.

‘ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವಧಿಯಲ್ಲಿ ಮನೆಗಳು ನಿರ್ಮಾಣವಾದವು. ಮೊದಲಿಗೆ ₹5.43 ಲಕ್ಷ ಪಾವತಿಸಿದರೆ ಸಾಕು ಎಂದು ತಿಳಿಸಿದ್ದ ನಿಗಮ, ಮನೆ ನಿರ್ಮಾಣವಾದ ನಂತರ ₹9.11 ಲಕ್ಷ ಪಾವತಿಸಬೇಕು ಎಂದು ಸೂಚಿಸಿತು. ಬ್ಯಾಂಕ್ ಹಾಗೂ ಇತರೆಡೆ ಸಾಲ ಮಾಡಿ ಅದನ್ನೂ ಪಾವತಿಸಿದ್ದೇವೆ’ ಎಂದು ಮಾಜಿ ಸೈನಿಕರು ಹೇಳಿದರು.

‘ಐದು ವರ್ಷ ಮಾರಾಟ ಮಾಡಬಾರದು ಎಂಬ ಷರತ್ತು ವಿಧಿಸಿ ನೋಂದಣಿಯನ್ನೂ ನಿಗಮ ಮಾಡಿಕೊಟ್ಟಿದೆ. ಮನೆಗಳ ಕೀಲಿಗಳನ್ನೂ ನಮಗೆ ಹಸ್ತಾಂತರ ಮಾಡಿತ್ತು. ಸಣ್ಣಪುಟ್ಟ ನವೀಕರಣ ಮಾಡಿಸಿಕೊಂಡು ಗೃಹ ಪ್ರವೇಶ ಮಾಡಲು ಸಜ್ಜಾಗಿದ್ದೆವು. ಅಷ್ಟರಲ್ಲಿ ಅಧಿಕಾರಿಗಳು ಬೇರೆ ಬೀಗ ಹಾಕಿದ್ದಾರೆ’ ಎಂದರು.

‘ವಾಸಸ್ಥಳ ದೃಢೀಕರಣ, ಸ್ವಂತ ಮನೆ ಇಲ್ಲದಿರುವ ಬಗ್ಗೆ ದೃಢೀಕರಣಗಳನ್ನೂ ನೀಡಿದ್ದೇವೆ. ಕಂದಾಯ ಇಲಾಖೆ ಅಧಿಕಾರಿಗಳು ನಮ್ಮ ಮನೆಗಳಿಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡು ಹೋದರು. ಆದರೂ, ಮನೆಗಳಿಗೆ ಪ್ರವೇಶ ದೊರೆತಿಲ್ಲ’ ಎಂದರು.

‘ವಾರ್ಷಿಕ ಆದಾಯ ₹1 ಲಕ್ಷಕ್ಕೂ ಕಡಿಮೆ ಇರಬೇಕು ಎಂಬುದರ ಕುರಿತು ಅಫಿಡವಿಟ್‌ ಸಲ್ಲಿಸಬೇಕು ಎಂದು ಅಧಿಕಾರಿಗಳು ಕೇಳಿದ್ದಾರೆ. ಮಾಜಿ ಸೈನಿಕರಿಗೆ ನಿವೃತ್ತಿ ವೇತನ ಬರುತ್ತಿದೆ. ಅಫಿಡವಿಟ್ ಸಲ್ಲಿಸುವುದು ಹೇಗೆ’ ಎಂದು ಅವರು ಪ್ರಶ್ನಿಸಿದರು. 

‘ಖಾಲಿ ನಿವೇಶನ ಅಥವಾ ಜಮೀನು ಪಡೆದಿದ್ದರೆ 10 ವರ್ಷದಲ್ಲಿ ಅದರ ಬೆಲೆ ಮೂರ್ನಾಲ್ಕು ಪಟ್ಟು ಜಾಸ್ತಿ ಆಗುತ್ತಿತ್ತು. ನಿಗಮವನ್ನು ನಂಬಿ ಇತ್ತ ಹಣವೂ ಇಲ್ಲ, ಮನೆಯೂ ಇಲ್ಲ, ನಿವೇಶನವೂ ಇಲ್ಲ ಎಂಬ ಸ್ಥಿತಿಗೆ ಬಂದಿದ್ದೇವೆ’ ಎಂದು ಹೇಳಿದರು.

‘ಮನೆ ಹಂಚಿಕೆ ವಿಷಯದಲ್ಲಿ ರಾಜಕೀಯ ಕಾರಣಗಳು ಇರಬಹುದು. ದೇಶಕ್ಕಾಗಿ ಜೀವ ಕೊಡಲು ಸಿದ್ಧರಾಗಿ ಹೋಗಿದ್ದ ನಾವು ಗಡಿ ಕಾದಿದ್ದೇವೆ. ವಾಪಸ್ ಬರುವಾಗ ಜೀವ ಉಳಿದಿದ್ದರೂ ಯೌವ್ವನ ಉಳಿದಿರಲಿಲ್ಲ. ಯೋಧರಾದ ನಮಗೆ ರಾಜಕೀಯ ಬೇಕಿಲ್ಲ. ಕೊನೆಗಾಲದಲ್ಲಾದರೂ ಮನೆ ಸಿಕ್ಕರೆ ಸಾಕು’ ಎಂದರು.

ಆಶ್ರಯ ಸಮಿತಿಗೆ ವರದಿ
‘ಶ್ರೀಮಂತರಿಗೆ, ಸ್ವಂತ ಮನೆ ಇದ್ದವರಿಗೆ ಮನೆ ಹಂಚಲಾಗಿದೆ ಎಂಬ ದೂರುಗಳು ಬಂದ ಕಾರಣ ತಹಶೀಲ್ದಾರ್‌ ಅವರಿಂದ ವರದಿ ಪಡೆದಿದ್ದೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾದ್‌ ಮನೋಹರ್ ಹೇಳಿದರು.

‘ವರದಿಯನ್ನು ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿ ಮುಂದೆ ಇರಿಸಿದ್ದೇವೆ. ಸಮಿತಿಯ ನಿರ್ಧಾರ ಆಧರಿಸಿ ಮನೆ ಹಂಚಲಾಗುವುದು. ಮಾಜಿ ಸೈನಿಕರಿಗೆ ಆದಾಯದ ಮಿತಿ ಅನ್ವಯವಾಗುವುದಿಲ್ಲ. ಸ್ವಂತ ಮನೆ ಇಲ್ಲದವರಿಗೆ ಮನೆ ಸಿಗಲಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು