ಬೆಂಗಳೂರು:ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ 28 ವರ್ಷದ ಯುವತಿಯ ಕೈಯನ್ನು ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಮರುಜೋಡಿಸಿದ್ದಾರೆ.
ಆಯುರ್ವೇದಿಕ್ ಪೌಡರ್ ತಯಾರಿಕೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಯುವತಿಯ ಕೈ ಮೊಣಕೈ ಬಳಿ ಕತ್ತರಿಸಲ್ಪಟ್ಟಿತ್ತು. ಕೂಡಲೇ ತುಂಡಾದ ಕೈ ಜತೆಗೆ ಆಕೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಮೂಳೆಚಿಕಿತ್ಸಕ ಡಾ. ಸತ್ಯ ನೇತೃತ್ವದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಕೈ ಜೋಡಿಸಿದ್ದಾರೆ. ಗಾಯ ಸಂಪೂರ್ಣ ವಾಸಿಯಾಗಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಬಳಿಕ ಜೋಡಣೆಯಾದ ಕೈ ಮೊದಲಿನಂತೆ ಕೆಲಸ ಮಾಡಲಿದೆ ಎಂದು ಆಸ್ಪತ್ರೆ ತಿಳಿಸಿದೆ.
‘ತುಂಡಾದ ಕೈ ನುಜ್ಜುಗುಜ್ಜಾಗಿತ್ತು, ಇದರಿಂದಾಗಿ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. ಸ್ವಲ್ಪ ಪ್ರಮಾಣದಲ್ಲಿ ಕೈ ಕತ್ತರಿಸಿ, ಅಪಧಮನಿಗಳು, ರಕ್ತನಾಳಗಳು ಮತ್ತು ನರಗಳು ಮರುಸಂಪರ್ಕವಾಗುವಂತೆ ಜೋಡಿಸಲಾಯಿತು. ಸತತ ಆರು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಕತ್ತರಿಸಲ್ಪಟ್ಟ ಕೈನನ್ನು ಮರುಜೋಡಣೆ ಮಾಡಲಾಯಿತು’ ಎಂದು ಡಾ. ಸತ್ಯ ತಿಳಿಸಿದ್ದಾರೆ.
‘ತುಂಡಾದ ಅಂಗ ಕೆಲ ಗಂಟೆಗಳವರೆಗೂ ಬದುಕಿರಲಿದೆ. ನಿಗದಿತ ಅವಧಿಯೊಳಗೆ ಅಂಗವನ್ನು ತೇವಾಂಶವಿರುವ ಬಟ್ಟೆಯಲ್ಲಿ ಸುತ್ತಿ, ಜೋಪಾನವಾಗಿ ಆಸ್ಪತ್ರೆಗೆ ತಂದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಣೆ ಮಾಡಬಹುದು. ಕೆಲವರು ತುಂಡಾದ ಅಂಗವನ್ನು ಜೋಪಾನವಾಗಿಡಲು ತಣ್ಣನೆ ನೀರು ಅಥವಾ ಐಸ್ ಕ್ಯೂಬ್ ಡಬ್ಬದಲ್ಲಿ ಇಡುತ್ತಾರೆ. ಇದು ತಪ್ಪು ವಿಧಾನವಾಗಿದ್ದು, ಹೀಗೆ ಮಾಡುವುದರಿಂದ ಅಂಗದಲ್ಲಿನ ಸ್ನಾಯುಗಳು ಬೇಗ ಸಾಯುವ ಅಪಾಯ ಇರುತ್ತದೆ’ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ. ವಂಶಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.