ಶನಿವಾರ, ಜುಲೈ 31, 2021
21 °C

ಮಾಗಡಿ ರಸ್ತೆಯಲ್ಲಿ ಆತಂಕ: ಜಲಮಂಡಳಿ ಕಾಮಗಾರಿ ವೇಳೆ ವಾಲಿದ 4 ಅಂತಸ್ತಿನ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 106ರಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದು ವಾಲಿದೆ. ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಮಾಗಡಿ ರಸ್ತೆಯಲ್ಲಿನ ಕಾಳಮ್ಮನ ದೇವಸ್ಥಾನದ ತಿರುವಿನಲ್ಲಿರುವ ಈ ಕಟ್ಟಡವು ಜಲಮಂಡಳಿಯಿಂದ ಕೈಗೆತ್ತಿಕೊಳ್ಳಲಾಗಿದ್ದ ಕಾಮಗಾರಿಯ ನಂತರ ಎರಡು ಇಂಚು ಪಕ್ಕಕ್ಕೆ ವಾಲಿದೆ. ಆದರೆ, ಕೇವಲ 15X20 ಅಡಿ ವಿಸ್ತೀರ್ಣದಲ್ಲಿ ನಾಲ್ಕು ಅಂತಸ್ತುಗಳನ್ನು ಈ ಕಟ್ಟಡ ಹೊಂದಿದ್ದು, ಇಷ್ಟು ಕಡಿಮೆ ಜಾಗದಲ್ಲಿ ನಾಲ್ಕು ಮಹಡಿಗಳನ್ನು ನಿರ್ಮಿಸಲು ಅನುಮತಿ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಕಾಮಗಾರಿ ವೇಳೆ ಕಟ್ಟಡದ ಪಾಯ ಕಿತ್ತು ಬಂದಿದ್ದು, ಕಟ್ಟಡವು ಬೀಳದಂತೆ ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದೆ. ಅಕ್ಕಪಕ್ಕದಲ್ಲಿಯೇ ಹಲವು ಮನೆಗಳು ಇವೆ.

‘ಮಳೆ ನೀರುಗಾಲುವೆಯ ಪಕ್ಕದಲ್ಲಿಯೇ ಈ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ಕಟ್ಟಡ ನಿರ್ಮಾಣವಾಗುವುದಕ್ಕೆ ಮೊದಲೇ ಜಲಮಂಡಳಿಯ ಒಳಚರಂಡಿ ಪೈಪ್‌ಗಳನ್ನು ಅಳವಡಿಸಲಾಗಿದೆ. ಅಲ್ಲಿಯ ಹಳೆಯ ಪೈಪ್‌ಗಳನ್ನು ತೆಗೆದು ಹೊಸ ಪೈಪ್‌ಗಳನ್ನು ಹಾಕುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿಯ ನಂತರವೇ ಕಟ್ಟಡಕ್ಕೆ ಸಮಸ್ಯೆಯಾಗಿದೆ ಎನ್ನುವುದು ಹೌದು. ಕಟ್ಟಡದಲ್ಲಿದ್ದವರನ್ನು ಕೂಡಲೇ ಸ್ಥಳಾಂತರಿಸಲಾಗಿದೆ. ಕೆಲವು ದುರಸ್ತಿ ಕಾರ್ಯ ಕೈಗೊಂಡರೆ ಎಲ್ಲವೂ ಸರಿಯಾಗುತ್ತದೆ ಎಂದು ಎಂಜಿನಿಯರ್‌ಗಳು ಹೇಳಿದ್ದಾರೆ’ ಎಂಬುದಾಗಿ ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಂಜಿನಿಯರ್‌ಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅವರ ವರದಿ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಅವರು ಹೇಳಿದರು. 

‘ಅರ್ಧ ಸೈಟ್‌ಗಿಂತ ಕಡಿಮೆ ಜಾಗದಲ್ಲಿ ದೊಡ್ಡ ಕಟ್ಟಡ ನಿರ್ಮಿಸಲಾಗಿದೆ. ಅಡಿಪಾಯಕ್ಕೆ ಸ್ವಲ್ಪ ಹಾನಿಯಾಗುತ್ತಿದ್ದಂತೆ ಕಟ್ಟಡ ವಾಲಿಕೊಂಡಿದೆ. ಬಿಬಿಎಂಪಿಯವರು ಇದಕ್ಕೆ ಪರವಾನಗಿ ನೀಡಿದ್ದೇ ಅಚ್ಚರಿ ಎನಿಸುತ್ತಿದೆ. ಕಟ್ಟಡ ಬಿದ್ದಿದ್ದರೆ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗುತ್ತಿತ್ತಲ್ಲದೆ, ಸಾವು–ನೋವು ಸಂಭವಿಸುವ ಅಪಾಯವೂ ಇತ್ತು’ ಎಂದು ಸ್ಥಳೀಯರೊಬ್ಬರು ಆತಂಕ
ವ್ಯಕ್ತಪಡಿಸಿದರು. 

ಕಟ್ಟಡದ ಮಾಲೀಕ ಗೋವಿಂದನ್, ‘ಕಟ್ಟಡವನ್ನು 360 ಚದರ ಅಡಿ (18X20) ವಿಸ್ತೀರ್ಣದಲ್ಲಿ ಕಟ್ಟಲಾಗಿದೆ. 25 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದ್ದು, ಇದಕ್ಕೆ ಯಾವುದೇ ಪರವಾನಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಆಗ ಇರಲಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

’ಕಟ್ಟಡ ಚೆನ್ನಾಗಿಯೇ ಇತ್ತು. ಜಲಮಂಡಳಿಯೂ ಒಳ್ಳೆಯ ಉದ್ದೇಶದಿಂದಲೇ ಕಾಮಗಾರಿ ಕೈಗೆತ್ತಿಕೊಂಡಿತ್ತು. ಆದರೆ, ಜೆಸಿಬಿ ಯಂತ್ರದ ಮೂಲಕ ಕೆಲಸ ಮಾಡುತ್ತಿದ್ದ ಕಾರ್ಮಿಕರ ತಪ್ಪಿನಿಂದ ಈ ಎಡವಟ್ಟು ಆಗಿದೆ. ಜೆಸಿಬಿಯಿಂದ ಅಡಿಪಾಯಕ್ಕೆ ಹಾನಿಯಾಗಿದ್ದು, ಕಟ್ಟಡ ವಾಲಿಕೊಂಡಿದೆ’ ಎಂದೂ ಅವರು ಹೇಳಿದರು.

‘ಕಟ್ಟಡ ನಿರ್ಮಾಣ ಎಂಜಿನಿಯರ್‌ಗಳು ಬಂದು ಪರಿಶೀಲನೆ ಮಾಡಿದ್ದಾರೆ. ಇದು 15–20 ವರ್ಷಗಳ ಹಿಂದೆ ಕಟ್ಟಿರುವ ಕಟ್ಟಡ. ಆಗ ಯಾವ ನಿಯಮಗಳು ಇದ್ದವು, ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ನಂತರ, ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡಲಾಗುವುದು’ ಎಂದು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು