ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌ಪಿಜಿ ಸಿಲಿಂಡರ್ ಸ್ಫೋಟ: ಬಾಲಕಿ ಸೇರಿ ನಾಲ್ವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ

Published : 16 ಸೆಪ್ಟೆಂಬರ್ 2024, 16:15 IST
Last Updated : 16 ಸೆಪ್ಟೆಂಬರ್ 2024, 16:15 IST
ಫಾಲೋ ಮಾಡಿ
Comments

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಾಗಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡು, ಬಾಲಕಿ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಸಂಜಯ್‌ಗಾಂಧಿ ನಗರದಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಆರು ಮನೆಗಳಿಗೆ ಹಾನಿಯಾಗಿದೆ.

ಘಟನೆಯಲ್ಲಿ ಅಣ್ಣಾದೊರೈ (45) ಹಾಗೂ ಪಕ್ಕದ ಮನೆ ನಿವಾಸಿಗಳಾದ ಇಂದ್ರೇಶ್ (34), ಅವರ ಪತ್ನಿ ರೇಖಾ (30) ಮತ್ತು ಮಗಳು ಶಿವಾಂಗಿ (7) ಗಾಯಗೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಣ್ಣಾದೊರೈ ಅವರ ಸ್ಥಿತಿ ಗಂಭೀರವಾಗಿದೆ. ಇತರೆ ಮೂವರಿಗೆ ಶೇಕಡಾ 30ರಷ್ಟು ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದರು.

ಸ್ಫೋಟದಿಂದಾಗಿ ಐದಾರು ಮನೆಗಳ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಗೆ ನೆರವಾದರು.

ಸಂಜಯ್‌ಗಾಂಧಿ ನಗರದ ಕೋಳಗೇರಿಯಲ್ಲಿ ತಮಿಳುನಾಡಿನ ಅಣ್ಣಾದೊರೈ ಹಾಗೂ ಇಂದ್ರೇಶ್ ಕುಟುಂಬ ವಾಸಿಸುತ್ತಿವೆ. ಅಣ್ಣಾದೊರೈ ಒಬ್ಬರೇ ವಾಸವಾಗಿದ್ದು, ಕೆಲಸಕ್ಕೆ ಹೋಗುತ್ತಿಲ್ಲ. ಮನೆ ಸಮೀಪದಲ್ಲಿರುವ ಸಹೋದರಿ ನಿತ್ಯ ಬಂದು ಅಡುಗೆ ಮಾಡಿಕೊಟ್ಟು ಹೋಗುತ್ತಾರೆ. ಭಾನುವಾರ ರಾತ್ರಿ ಅಣ್ಣಾದೊರೈ ಸಹೋದರಿ, ಅಡುಗೆ ಮಾಡಿ, ವಾಪಸ್ ಹೋಗಿದ್ದರು ಎಂದು ಪೊಲೀಸರು ತಿಳಿಸಿದರು.

ಮುಂಜಾನೆ 4 ಗಂಟೆ ಸುಮಾರಿಗೆ ಅಣ್ಣಾದೊರೈ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ಅಕ್ಕ-ಪಕ್ಕದ ನಿವಾಸಿಗಳಿಗೆ ಸೋರಿಕೆಯಾದ ಅನಿಲದ ವಾಸನೆ ಗೊತ್ತಾಗಿದೆ. ಆದರೆ ಯಾರ ಮನೆಯಲ್ಲಿ ಸೋರಿಕೆಯಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಮುಂಜಾನೆ 6.50ಕ್ಕೆ ಎಚ್ಚರಗೊಂಡ ಅಣ್ಣಾದೊರೈ ವಿದ್ಯುತ್‌ ಬಲ್ಬ್‌ ಸ್ವಿಚ್‌ ಆನ್ ಮಾಡಿರುವ ಸಾಧ್ಯತೆಯಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊಂಡು, ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಅಡುಗೆ ಅನಿಲ ಸ್ಪೋಟದಿಂದಾಗಿ ಮನೆಯ ಗೋಡೆ ಕುಸಿದು ಬಿದ್ದಿದೆ
ಅಡುಗೆ ಅನಿಲ ಸ್ಪೋಟದಿಂದಾಗಿ ಮನೆಯ ಗೋಡೆ ಕುಸಿದು ಬಿದ್ದಿದೆ

ಆರು ಮನೆಗಳಿಗೆ ಹಾನಿ

ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಮನೆಯ ಗೋಡೆ ಕುಸಿದಿದೆ. ಬಳಿಕ ಅಕ್ಕ-ಪಕ್ಕದ ಐದಾರು ಮನೆಗಳಿಗೂ ಬೆಂಕಿಯ ತೀವ್ರತೆ ವ್ಯಾಪಿಸಿದೆ . ಮನೆಗಳಲ್ಲಿದ್ದ ಸೋಫಾ ಕಪಾಟು ಅಡುಗೆ ಮನೆಯ ಪರಿಕರಗಳು ಸುಟ್ಟು ಹೋಗಿವೆ. ಸ್ಫೋಟದ ತೀವ್ರತೆಗೆ ಮನೆ ಮುಂದೆ ನಿಲುಗಡೆ ಮಾಡಿದ್ದ ಐದು ದ್ವಿಚಕ್ರ ವಾಹನಗಳು ಸುಮಾರು 10-15 ಅಡಿ ದೂರದಲ್ಲಿ ಬಿದ್ದಿವೆ ಎಂದು ಸ್ಥಳೀಯ ನಿವಾಸಿ ಮುರುಗೇಶ್ ತಿಳಿಸಿದರು.

ಸಚಿವ ಜಮೀರ್ ಭೇಟಿ

ಅಡುಗೆ ಅನಿಲ ಸಿಲಿಂಡರ್‌ ಸ್ಫೋಟದಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿದ ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌, ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು.

ಹಾನಿಗೆ ಒಳಗಾದ ಬ್ಲಾಕ್‌ ಅನ್ನು ಪರಿಶೀಲಿಸಿ, ‘ಬ್ಲಾಕ್‌ನಲ್ಲಿ ಒಟ್ಟು 12 ಮನೆಗಳಿವೆ. ಅವಘಡದಲ್ಲಿ ಆರು ಮನೆಗಳಿಗೆ ಹಾನಿಯಾಗಿದ್ದು, ಉಳಿದ ಆರು ಮನೆಗಳು ಶಿಥಿಲಗೊಂಡಿವೆ. ಹೀಗಾಗಿ ಎಲ್ಲ ಮನೆಗಳನ್ನು ಕೆಡವಿ, 12 ಮನೆಗಳನ್ನೂ ಹೊಸದಾಗಿ ನಿರ್ಮಿಸಿಕೊಡುತ್ತೇವೆ’ ಎಂದು ಹೇಳಿದರು.

ಇದೇ ಕೊಳೆಗೇರಿಯಲ್ಲಿ, 1994ರಲ್ಲಿ ಹುಡ್ಕೊ ಮೂಲಕ ನಿರ್ಮಿಸಿದ 130 ಮನೆಗಳು ಶಿಥಿಲವಾಗಿವೆ ಎಂಬ ಅಂಶವನ್ನು ಅಲ್ಲಿನ ನಿವಾಸಿಗಳು ಸಚಿವರ ಗಮನಕ್ಕೆ ತಂದರು. ‘ಮುಖ್ಯಮಂತ್ರಿಯ ಜೊತೆ ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಜಮೀರ್ ಹೇಳಿದರು.

ಅವಘಡದಲ್ಲಿ ಗಾಯಗೊಂಡಿದ್ದವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ, ವೈಯಕ್ತಿಕವಾಗಿ ಪರಿಹಾರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT