ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಪೊಲೀಸರ ಸೋಗಿನಲ್ಲಿ ವಂಚನೆ; ಎಂಟು ಮಂದಿ ಬಂಧನ

148 ಬ್ಯಾಂಕ್‌ ಖಾತೆಗಳ ಮುಟ್ಟುಗೋಲು
Published 2 ಡಿಸೆಂಬರ್ 2023, 0:32 IST
Last Updated 2 ಡಿಸೆಂಬರ್ 2023, 0:32 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈ ಅಪರಾಧ ವಿಭಾಗದ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ, ನಿಮ್ಮ ಹೆಸರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಪೂರೈಕೆ ಆಗುತ್ತಿದೆ ಎಂದು ಸುಳ್ಳು ಹೇಳಿ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಾಕಿಸಿಕೊಂಡು ವಂಚಿಸುತ್ತಿದ್ದ ಎಂಟು ಮಂದಿಯನ್ನು ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಸೀಂ, ಹಬೀಬುಲ್ಲ, ನಿಝಾಮುದ್ದೀನ್, ಮುಶ್ರಫ್ ಖಾನ್, ನೂರುಲ್ಲ ಖಾನ್, ಮೊಹಮದ್ ಉಮರ್, ಸೈಯದ್ ಅಹಮ್ಮದ್, ಸೈಯದ್ ಹುಸೇನ್ ಬಂಧಿತರು.

ಬಂಧಿತರಿಂದ ₹ 13.17 ಲಕ್ಷ ನಗದು, ವಿವಿಧ ಬ್ಯಾಂಕ್‌ ಖಾತೆಯಲ್ಲಿದ್ದ ₹19 ಲಕ್ಷವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ವಿವಿಧ ಬ್ಯಾಂಕ್‌ನ 148 ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕೃತ್ಯಕ್ಕೆ ಬಳಸಿದ 11 ಮೊಬೈಲ್, ಚೆಕ್‌ಬುಕ್, ಪಾಸ್‌ಬುಕ್, ಎಟಿಎಂ ಕಾರ್ಡ್‌ಗಳು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಎನ್‌ಸಿಆರ್‌ಬಿ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಸುಮಾರು 75 ಸೈಬರ್ ವಂಚನೆಯ ಪ್ರಕರಣಗಳು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಮುಂಬೈ ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿ ಫೆಡೆಕ್ಸ್‌ ಕೋರಿಯರ್‌ನಲ್ಲಿ ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ಗೆ ಮಾದಕ ವಸ್ತುಗಳು ಪೂರೈಕೆ ಆಗುತ್ತಿದೆ ಎಂದು ಹೇಳಿ ಸಹಾಯ ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಆರೋಪಿಗಳು ನ.10ರಂದು ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದರು. ನಿಮ್ಮ ಪತ್ನಿ ಹೆಸರಿನಲ್ಲಿ ಮಾದಕ ವಸ್ತು ಪೂರೈಕೆಯಾಗುತ್ತಿದೆ ಎಂದು ಹೇಳಿದ್ದರು. ಮಾದಕ ವಸ್ತು ಹಾಗೂ ದಾಖಲೆಗಳು ಸಿಕ್ಕಿವೆ ಎಂದು ಬೆದರಿಸಿದ್ದರು. ನಿಮ್ಮ ಹೆಸರಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗುತ್ತಿದೆ ಎಂದು ಹೇಳಿದ್ದರು. ಆ ವ್ಯಕ್ತಿಯ ಬ್ಯಾಂಕ್‌ ಖಾತೆ ಮಾಹಿತಿ ಪಡೆದಿದ್ದರು. ನಂತರ, ತನಿಖಾ ವಿಚಾರಣಾ ಸಲುವಾಗಿ ನೀವು ಮುಂಗಡ ಹಣ ನೀಡಬೇಕು. ತನಿಖೆ ಮುಗಿದ ನಂತರ ಆ ಮೊತ್ತವನ್ನು ವಾಪಸ್‌ ತಮ್ಮ ಖಾತೆಗೆ ಜಮಾ ಮಾಡುತ್ತೇವೆ ಎಂದು ನಂಬಿಸಿದ್ದರು. ಆರೋಪಿಗಳನ್ನು ಅಸಲಿ ಪೊಲೀಸರೆಂದು ನಂಬಿದ ವ್ಯಕ್ತಿಯು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ₹ 66 ಲಕ್ಷ ಜಮೆ ಮಾಡಿದ್ದರು. ನಂತರ ನೀವು ಕೊಟ್ಟಿರುವ ದುಡ್ಡು ಹಿಂತಿರುಗಿಸಲು ಇನ್ನಷ್ಟು ದುಡ್ಡು ಜಮೆ ಮಾಡುವಂತೆ ಸೂಚಿಸಿ ಹಣ ಪಡೆದು ವಂಚಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರಕರಣ ದಾಖಲಾದ ಮೇಲೆ ಸೈಬರ್‌ ತನಿಖೆ ಆರಂಭಿಸಿದ್ದರು. ದೂರುದಾರರ ಖಾತೆಯಿಂದ ದುಡ್ಡು ವರ್ಗಾವಣೆಯಾದ ಬ್ಯಾಂಕ್ ಖಾತೆ ಯಾವ ಪ್ರದೇಶದಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದ್ದರು. ದಾವಣಗೆರೆಯಲ್ಲಿ ಹಣ ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿತ್ತು. ದಾವಣಗೆರೆಗೆ ತೆರಳಿದ ಪೊಲೀಸರ ಒಂದು ತಂಡವು ಬ್ಯಾಂಕ್‌ನ ಸಿಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ಅದಾದ ಮೇಲೆ ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT