ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಗಳಿಗೆ ತೆರಳಿ ಲಸಿಕೆ ನೀಡಿ’: ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ರಾಜ್ಯವ್ಯಾಪಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
Last Updated 10 ಜೂನ್ 2021, 21:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲರಿಗೂ ಉಚಿತವಾಗಿ ಹಾಗೂ ಕಾಲಮಿತಿಯೊಳಗೆ ಲಸಿಕೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ರಾಜ್ಯವ್ಯಾಪಿ ಗುರುವಾರ ಪ್ರತಿಭಟನೆ ನಡೆಸಿತು.

‘ಕನ್ನಡಿಗರನ್ನು ಕೋವಿಡ್‌ ಎರಡನೇ ಅಲೆಯಿಂದ ರಕ್ಷಿಸಿ, ಇಲ್ಲವೇ ಅಧಿಕಾರದಿಂದ ತೊಲಗಿ’, ‘ಲಸಿಕೆ ಪಡೆಯುವುದು ಪ್ರತಿಯೊಬ್ಬರ ಹಕ್ಕು’, ‘ಜಾತಿ ಆಧಾರದಲ್ಲಿ ಲಸಿಕೆ ನೀಡುವುದನ್ನು ನಿಲ್ಲಿಸಿ’.. ಹೀಗೆ ವಿವಿಧ ಬರಹಗಳನ್ನು ಹೊಂದಿದ್ದ ಭಿತ್ತಿಪತ್ರಗಳನ್ನು ಹಿಡಿದು ಸಂಘಟನೆಯ ಕಾರ್ಯಕರ್ತರು ಪ್ರತಿಭಟಿಸಿದರು.

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿ, ತಹಶೀಲ್ದಾರ್‌, ಗ್ರಾಮ ಪಂಚಾಯಿತಿ ಹಾಗೂ ನಾಡ ಕಚೇರಿಗಳ ಎದುರು ಸೇರಿದ್ದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಕೋವಿಡ್‌ ಲಸಿಕೆ ಉಚಿತವಾಗಿ ನೀಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಶೇ25ರಷ್ಟು ಲಸಿಕೆ ಕೊಳ್ಳಲು ಅವಕಾಶ ನೀಡಲಾಗಿದ್ದು, ಇದನ್ನು ಕೂಡಲೇ ರದ್ದುಪಡಿಸಬೇಕು. ಶೇ100ರಷ್ಟು ಲಸಿಕೆಯನ್ನು ಸರ್ಕಾರದ ವತಿಯಿಂದಲೇಉಚಿತವಾಗಿ ನೀಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಅಕ್ಟೋಬರ್‌ನಲ್ಲಿ ಕೋವಿಡ್‌ ಮೂರನೇ ಅಲೆ ಶುರುವಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಸೆಪ್ಟೆಂಬರ್‌ ಒಳಗೆ ಎಲ್ಲರಿಗೂ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯದೆಲ್ಲೆಡೆ ಕೋವಿಡ್‌ ಲಸಿಕೆ ಬೂತ್‌ ಸ್ಥಾಪಿಸಬೇಕು. ಮನೆ ಮನೆಗೆ ತೆರಳಿ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು. ಲಸಿಕೆ ನೋಂದಣಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬೇಕು. ಹಳ್ಳಿಗಳಲ್ಲಿ ವಾಸಿಸುತ್ತಿರುವ ಬಹುತೇಕ ಕುಟುಂಬಗಳಿಗೆ ಸ್ಮಾರ್ಟ್‌ಫೋನ್‌ಗಳ ಬಳಕೆ ಗೊತ್ತಿಲ್ಲ. ಹೀಗಾಗಿ ಅವರು ಆನ್‌ಲೈನ್‌ ನೋಂದಣಿ ಮಾಡುವುದು ಕಷ್ಟ. ಅಂತಹವರ ಬವಣೆ ನೀಗಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರವು ಮೊದಲ ಹಂತದ ಲಸಿಕೆ ಹಂಚಿಕೆ ವೇಳೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವೆಸಗಿದೆ. ಆಮ್ಲಜನಕ, ವೆಂಟಿಲೇಟರ್‌, ರೆಮ್‌ಡಿಸಿವಿರ್‌ ಹಂಚಿಕೆ ವೇಳೆಯೂ ತಾರತಮ್ಯ ನೀತಿ ಅನುಸರಿಸಿದೆ. ಇನ್ನು ಮುಂದೆ ಲಸಿಕೆಯು ವೈಜ್ಞಾನಿಕ ಹಾಗೂ ಜನಸಂಖ್ಯೆ ಆಧಾರದಲ್ಲಿ ಹಂಚಿಕೆಯಾಗಬೇಕು’ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT