ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಶ್ರವಣದೋಷವುಳ್ಳ 15 ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ

Published 31 ಮಾರ್ಚ್ 2024, 15:58 IST
Last Updated 31 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ಕೆ.ಆರ್.ಪುರ: ’ಯಾವುದೇ ಜಾತಿ, ಧರ್ಮ ಭೇದಭಾವವಿಲ್ಲದೇ ಅತ್ಯಂತ ಕಡು ಬಡತನದ ಹಿನ್ನಲೆ ಹೊಂದಿರುವ ಮಕ್ಕಳನ್ನು ಗುರುತಿಸಿ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ’ ಎಂದು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ಮಳವಳ್ಳಿ ಹೇಳಿದರು.

ಸರ್ವಜ್ಞನಗರ ಸಮೀಪದ ಲಿಂಗರಾಜಪುರದ ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರವಣದೋಷವುಳ್ಳ 15 ಮಕ್ಕಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

‘ಶ್ರವಣದೋಷವುಳ್ಳ ಮಕ್ಕಳು ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಲು ಲ್ಯಾಪ್‌ಟಾಪ್‌ನಂತಹ ಪರಿಕರಗಳು ಅವಶ್ಯಕವಾಗಿವೆ. ಇಂಥ ಮಕ್ಕಳು ಸಮಾಜದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂಬ ಉದ್ದೇಶದೊಂದಿಗೆ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಮನವಿಗೆ ಸ್ಪಂದಿಸಿ ಹದಿನೈದು ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ’ ಎಂದು ಹೇಳಿದರು.

‘ಕೋವಿಡ್‌ ಕಾಲದಲ್ಲಿ 2019ರಲ್ಲಿ ಆರಂಭಗೊಂಡ ಉಚಿತ ಲ್ಯಾಪ್‌ಟಾಪ್ ವಿತರಣೆ ಕಾರ್ಯ ಇಲ್ಲಿಯವರೆಗೆ ಬಂದಿದೆ. ಒಟ್ಟು ಒಂದು ಸಾವಿರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸುವ ಗುರಿ ಇದೆ. ಇಲ್ಲಿಯವರೆಗೆ 365 ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ‘ ಎಂದು ವಿವರಿಸಿದರು.

‘ಗ್ರಾಮೀಣ ಮಕ್ಕಳು, ಪೌರ ಕಾರ್ಮಿಕರು, ಕೂಲಿ ಕಾರ್ಮಿಕರು, ಆಟೊ ಚಾಲಕರ ಮಕ್ಕಳು, ಗಾರ್ಮೆಂಟ್ ಇನ್ನಿತರ ವಲಯಗಳಲ್ಲಿ ಕೆಲಸ ಮಾಡುವ ಆರ್ಥಿಕವಾಗಿ ಹಿಂದುಳಿದಿರುವ  ಕುಟುಂಬದ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಿದ್ದೇನೆ. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸಿ ಲ್ಯಾಪ್‌ಟಾಪ್ ವಿತರಿಸಬೇಕು‘ ಎಂದು ಹೇಳಿದರು.

ಈ ಸಂಧರ್ಭದಲ್ಲಿ  ವಾಕ್ ಮತ್ತು ಶ್ರವಣ ಸಂಸ್ಥೆಯ ಅಡಳಿತ ಅಧಿಕಾರಿ ಜಯರಾಮ್, ತಾಯಂದಿರ ತರಬೇತಿ ಕೇಂದ್ರದ ಸಮನ್ವಯ ಅಧಿಕಾರಿ ರತ್ನಶೆಟ್ಟಿ ಮತ್ತು ಮಕ್ಕಳ ಪೋಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT