ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಕ್ರೋಶ ಜನಾಂದೋಲನ ಸ್ವರೂಪ ಪಡೆಯಲಿ’

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಮತ
Last Updated 15 ಡಿಸೆಂಬರ್ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಇವತ್ತು ಘೋರ ಪರಿಸ್ಥಿತಿ ಇದೆ. ಈಗ ಜಯಪ್ರಕಾಶ ನಾರಾಯಣ, ಲೋಹಿಯಾರಂತಹ ನಾಯಕರು ಬೇಕು. ಅಂತಹ ನಾಯಕರನ್ನು ತಯಾರು ಮಾಡುವ ಕೆಲಸವನ್ನು ಸಮಾಜವಾದಿ ಆಂದೋಲನ ನಿರ್ವಹಿಸಬೇಕು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

ಭಾನುವಾರ ಇಲ್ಲಿ ನಡೆದ ‘ಪರ್ಯಾಯ ವ್ಯವಸ್ಥೆಗಾಗಿ ರಾಷ್ಟ್ರಮಟ್ಟದ ಸಮಾಜವಾದಿ ಸಮಾಗಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಇವತ್ತು ದೇಶದ ಪರಿಸ್ಥಿತಿ ಇನ್ನೊಂದು ಕ್ರಾಂತಿ ಸಂಭವಿಸಲು ಪೂರಕವಾಗಿದೆ. ಜನರ ಆಕ್ರೋಶವನ್ನು ಜನಾಂದೋಲನವನ್ನಾಗಿ ಸಂಘಟಿಸುವ ರಾಷ್ಟ್ರೀಯ ನಾಯಕರ ಕೊರತೆ ಇದೆ. ಆದರೆ, ನಿಮ್ಮ ಚಳವಳಿ ಅಹಿಂಸಾತ್ಮಕವಾಗಿರಬೇಕು’ ಎಂದು ಅವರು ಹೇಳಿದರು.

ಸಮಾಜವಾದಿ ಮುಖಂಡ ರಾಂಚಿಯ ಡಾ.ಸುನಿಲಂ, ‘ಸಂಘ ಪರಿವಾರದವರು ಗಾಂಧೀಜಿಯನ್ನು ಗುಂಡಿಟ್ಟು ಕೊಂದಿರಬಹುದು. ಆದರೆ, ಈಗ ಮೋದಿ ಸರ್ಕಾರ ಗಾಂಧೀಜಿ ಮೌಲ್ಯಗಳ ಹತ್ಯೆ ಮಾಡಲು ಹೊರಟಿದೆ. ಇದಕ್ಕೆ ಸಮಾಜವಾದಿಗಳು ಅವಕಾಶ ನೀಡುವುದಿಲ್ಲ' ಎಂದರು.

ನಿರ್ಣಯ: ‘ಜನವಿರೋಧಿ, ರಾಷ್ಟ್ರವಿರೋಧಿ ಕಾನೂನುಗಳಾದ ರಾಷ್ಟ್ರೀಯ ಪೌರತ್ವ ನೋಂದಣಿ
ಯನ್ನು ಮತ್ತುಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ತಕ್ಷಣ ರದ್ದುಗೊಳಿಸಬೇಕು’ ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು.

ಡಾ.ಸ್ವಾಮಿನಾಥನ್ ವರದಿ, ನ್ಯಾ. ವರ್ಮಾ ಮತ್ತು ನ್ಯಾ.ಸಾಚಾರ್ ವರದಿಯ ಜಾರಿ ಮಾಡಬೇಕು ಎಂಬುದು ಸೇರಿ ಏಳು ಪ್ರಮುಖ ನಿರ್ಣಯಗಳನ್ನು ಸ್ವೀಕರಿಸಲಾಯಿತು.‌

ಸಮಾಜವಾದಿ ಮುಖಂಡ ಬಿ.ಆರ್. ಪಾಟೀಲ, ಲೇಖಕಿ ಬಿ.ಟಿ. ಲಲಿತಾ ನಾಯಕ್, ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್, ವೀರಸಂಗಯ್ಯ, ಕಾರ್ಮಿಕ ಮುಖಂಡ ಮೈಕಲ್ ಫರ್ನಾಂಡಿಸ್, ದಸಂಸ ರಾಜ್ಯ ಮುಖಂಡ ಶ್ರೀಧರ ಕಲಿವೀರ, ಲೇಖಕಿ ವಿಜಯಮ್ಮ, ಎನ್. ಗಾಯತ್ರಿ, ತೆಲಂಗಾಣದ ಮುಖಂಡ ನೈನಿ ನರಸಿಂಹ ರೆಡ್ಡಿ, ಸಮಾಜವಾದಿ ಚಳವಳಿಯ ನೇತಾರರಾದ ನವದೆಹಲಿಯ ಪ್ರೊ. ರಾಜ್ ಕುಮಾರ್, ಪ್ರೊ.ಆನಂದ್ ಕುಮಾರ್, ರಮಾಶಂಕರ್ ಸಿಂಗ್, ಬಿಹಾರದ ಗೌತಮ್ ರಾಣಾ ಇದ್ದರು. ಟಿ.ಎನ್‌.ಪ್ರಕಾಶ್ ಮತ್ತು ಆಲಿಬಾಬಾ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT