ಬೆಂಗಳೂರು: ಮನೆ ಎದುರು ಹಾಗೂ ರಸ್ತೆ ಬದಿಯಲ್ಲಿ ರಾತ್ರಿ ವೇಳೆ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಎಂಜಿನ್–ಚಾಸ್ಸಿ ಸಂಖ್ಯೆಯನ್ನು ತಿದ್ದುಪಡಿ ಮಾಡಿ ಒಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ ಸ್ನೇಹಿತರಿಬ್ಬರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸಪಟ್ಟಣದ ರಾಘವೇಂದ್ರ(25) ಹಾಗೂ ಗಂಗಾವತಿಯ ಸಾಯಿತೇಜ(25) ಬಂಧಿತರು. ಇಬ್ಬರೂ ನಗರದ ಹುಣಸಮಾರನಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ‘ಬಂಧಿತರಿಂದ ₹26 ಲಕ್ಷ ಮೌಲ್ಯದ 25 ದ್ವಿಚಕ್ರ ವಾಹನ, ಆರು ಮೊಬೈಲ್ ಫೋನ್, ಎರಡು ಲ್ಯಾಪ್‌ಟಾಪ್ ಹಾಗೂ ಒಂದು ಕಲರ್ ಪ್ರಿಂಟರ್ ಜಪ್ತಿ ಮಾಡಲಾಗಿದೆ’ ಎಂದರು.
‘ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚು ವರದಿ ಆಗುತ್ತಿದ್ದವು. ಆರೋಪಿಗಳ ಪತ್ತೆಗೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಬ್ಬರೂ ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಅರ್ಧಕ್ಕೆ ವ್ಯಾಸಂಗ ಬಿಟ್ಟು ಐಷಾರಾಮಿ ಜೀವನಕ್ಕಾಗಿ ಕಳ್ಳತನಕ್ಕೆ ಇಳಿದಿದ್ದರು’ ಎಂದು ಹೇಳಿದರು.
ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರ, ಯಲಹಂಕ ಉಪನಗರ, ಕೊಡಿಗೆಹಳ್ಳಿ, ಕೊತ್ತನೂರು, ಹೆಣ್ಣೂರು, ಕೆ.ಆರ್.ಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು 12 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.
ಆಂಧ್ರಪ್ರದೇಶಕ್ಕೂ ತೆರಳಿ ಕಳ್ಳತನ:
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಕಡಪ ಜಿಲ್ಲೆಗಳಲ್ಲಿ ರಾತ್ರಿ ವೇಳೆ ನಿಲುಗಡೆ ಮಾಡಿದ್ದ ದುಬಾರಿ ಬೆಲೆಯ ದ್ವಿಚಕ್ರ ವಾಹನಗಳನ್ನೇ ಕಳ್ಳತನ ಮಾಡುತ್ತಿದ್ದರು. ಇಬ್ಬರೂ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡಿದ್ದರಿಂದ ತಾಂತ್ರಿಕ ಜ್ಞಾನ ಹೊಂದಿದ್ದರು. ಆ ಜ್ಞಾನವನ್ನು ಕಳ್ಳತನ ಕೃತ್ಯಕ್ಕೆ ಬಳಕೆ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.
‘ಹುಣಸಮಾರನಹಳ್ಳಿಯ ಬಾಡಿಗೆ ಮನೆಯಲ್ಲಿ ಕಲರ್ ಪ್ರಿಂಟರ್ ಇಟ್ಟುಕೊಂಡು ನೋಂದಣಿ ಪ್ರಮಾಣ ಪತ್ರ, ವಿಮೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಅನುಮಾನ ಬಾರದಂತೆ ಸೃಷ್ಟಿಸುತ್ತಿದ್ದರು. ಆರ್‌ಟಿಒ ನೀಡುವ ಸ್ಮಾರ್ಟ್ ಕಾರ್ಡ್‌ಗಳಂತೆಯೇ ನಕಲಿ ದಾಖಲೆಗಳು ಇರುತ್ತಿದ್ದವು. ಅಲ್ಲದೇ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನಗಳ ಬಿಡಿಭಾಗಗಳನ್ನು ಬಿಚ್ಚಿ ಬೇರೊಂದು ವಾಹನಕ್ಕೆ ಜೋಡಣೆ ಮಾಡುತ್ತಿದ್ದರು. ಅಸಲಿ ಸ್ಟಿಕರ್ ಸಹ ಬದಲಾವಣೆ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಎಂಜಿನ್ ಮತ್ತು ಚಾಸ್ಸಿ ಸಂಖ್ಯೆಯನ್ನು ತಿದ್ದುಪಡಿ ಮಾಡಿದ ನಂತರ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಒಎಲ್‌ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಖರೀದಿಗೆ ಆಸಕ್ತಿ ತೋರಿದವರನ್ನು ಖುದ್ದು ಭೇಟಿ ಮಾಡುತ್ತಿದ್ದರು. ಖರೀದಿದಾರರಿಗೆ ನಕಲಿ ದಾಖಲೆಗಳನ್ನು ಅಸಲಿಯೆಂದು ತೋರಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
20 ದ್ವಿಚಕ್ರ ಜಪ್ತಿ ಪೀಣ್ಯ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ವೆಂಕಟೇಶ್(39) ಎಂಬಾತನನ್ನು ಬಂಧಿಸಿದ್ಧಾರೆ. ಆರೋಪಿಯಿಂದ ₹5 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಾಗಸಂದ್ರ ಜಾಲಹಳ್ಳಿ ಹಾಗೂ ಪೀಣ್ಯ ಮೆಟ್ರೊ ನಿಲ್ದಾಣದ ಬಳಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ. ಆರೋಪಿಯ ಬಂಧನದಿಂದ ಪೀಣ್ಯ ಬ್ಯಾಡರಹಳ್ಳಿ ಚಂದ್ರಾ ಲೇಔಟ್ ನಂದಿನಿ ಲೇಔಟ್ ಪುಟ್ಟೇನಹಳ್ಳಿ ಹುಳಿಮಾವು ಮಾದನಾಯಕನಹಳ್ಳಿ ಕುಮಾರಸ್ವಾಮಿ ಲೇಔಟ್ ಸೇರಿದಂತೆ 11 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.