ಶುಕ್ರವಾರ, ಆಗಸ್ಟ್ 19, 2022
27 °C

ಬೇಸಿಗೆ ಆರಂಭ: ಹಣ್ಣುಗಳ ದರ ದಿಢೀರ್ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೇಸಿಗೆ ಆರಂಭಗೊಂಡಿರುವುದರಿಂದ ಒಂದು ವಾರದಿಂದ ಹಣ್ಣಿನ ದರಗಳು ದಿಢೀರ್ ಏರಿಕೆ ಕಂಡಿವೆ. ಇನ್ನೊಂದು ವಾರದಲ್ಲಿ ಹಣ್ಣಿನ ದರಗಳು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. 

ಬೇಸಿಗೆಯಲ್ಲಿ ಜನರು ಹಣ್ಣುಗಳನ್ನು ಹೆಚ್ಚು ಸೇವಿಸುತ್ತಾರೆ. ಹಣ್ಣಿನ ನೇರ ಸೇವನೆಗಿಂತ ಹಣ್ಣುಗಳಿಂದ ತಯಾರಿಸುವ ಪಾನೀಯ ಸೇವನೆಗೆ ಮಳಿಗೆಗಳ ಎದುರು ಜನರ ದಂಡೇ ಸೇರಿರುತ್ತದೆ.

ಮಧ್ಯಾಹ್ನದ ಸುಡುಬಿಸಿಲಿಗೆ ಆಹಾರದ ಬದಲು ಹಣ್ಣಿನ ಸಲಾಡ್‌ ಸವಿಯುವವರೂ ಹೆಚ್ಚು. ಇದರಿಂದ ಬೇಸಿಗೆ ಬಂತೆಂದರೆ ಹಣ್ಣಿನ ವ್ಯಾಪಾರ ಗರಿಗೆರದರುತ್ತದೆ. ಬೇಸಿಗೆ ಇರುವ ಸುಮಾರು ನಾಲ್ಕು ತಿಂಗಳವರೆಗೆ ಹಣ್ಣುಗಳಿಗೆ ಬೇಡಿಕೆ ಇರುತ್ತದೆ.

‘ಹಬ್ಬಗಳನ್ನು ಹೊರತುಪಡಿಸಿದರೆ, ಹಣ್ಣುಗಳಿಗೆ ಬೇಡಿಕೆ ಬರುವುದು ಬೇಸಿಗೆಯಲ್ಲಿ ಮಾತ್ರ. ಹಬ್ಬದ ನಡುವೆ 2–3 ದಿನ ಮಾತ್ರ ಹಣ್ಣಿನ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಹಾಗಾಗಿ, ವರ್ಷದಲ್ಲಿ ಹಣ್ಣಿನ ವ್ಯಾಪಾರಕ್ಕೆ ಬೇಸಿಗೆ ಸೂಕ್ತಕಾಲ’ ಎಂದು ಸಿಂಗೇನ ಅಗ್ರಹಾರದ ಎಪಿಎಂಸಿ ಮಾರುಕಟ್ಟೆಯ ಹಣ್ಣಿನ ಸಗಟು ವರ್ತಕ ಸೈಯದ್ ಖಾಜಿಂ ಅಗಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ವಾರದಿಂದ ಹಣ್ಣುಗಳ ದರ ದಿಢೀರ್ ಏರಿದೆ. ಕಲ್ಲಂಗಡಿ, ದಾಳಿಂಬೆ, ಕಿತ್ತಳೆ, ಮೂಸಂಬಿ, ಸಪೋಟ ಬೇಸಿಗೆಯಲ್ಲಿ ಹೆಚ್ಚು ಖರೀದಿಯಾಗುವ ಹಣ್ಣುಗಳು. ಮಾವು ಈಗ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ವಿವಿಧ ತಳಿಗಳ ಮಾವು ಪ್ರತಿ ಕೆ.ಜಿಗೆ ₹60ರಿಂದ ₹170ರವರೆಗೆ ಮಾರಾಟವಾಗುತ್ತಿದೆ. 10 ದಿನಗಳ ಹಿಂದೆ ಕಲ್ಲಂಗಡಿ ಹಾಗೂ ಪಪ್ಪಾಯ ಸಗಟು ದರ ಪ್ರತಿ ಕೆ.ಜಿಗೆ ₹8 ಇತ್ತು. ಈಗ ಎರಡೂ ಹಣ್ಣುಗಳ ದರ ಹೆಚ್ಚಿದೆ’ ಎಂದು ಮಾಹಿತಿ ನೀಡಿದರು.

‘ಬೇಸಿಗೆ ಆರಂಭದಲ್ಲೇ ದರ ಹೆಚ್ಚಳ ಕಂಡಿದೆ. ಆದರೆ, ಮಾರುಕಟ್ಟೆಯಲ್ಲಿ ಈಗ ಬೇಡಿಕೆ ಇರುವಷ್ಟು ಹಣ್ಣುಗಳು ಪೂರೈಕೆಯಾಗುತ್ತಿಲ್ಲ. ಇದರಿಂದ ಮುಂದಿನ ಎರಡು ವಾರಗಳಲ್ಲಿ ಹಣ್ಣಿನ ದರಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದೂ ಹೇಳಿದರು.

ತರಕಾರಿ ದರಗಳಲ್ಲಿ ಏರಿಳಿತ:ಎರಡು ವಾರದಿಂದ ತರಕಾರಿ ದರಗಳಲ್ಲಿ ಏರಿಳಿತ ಬರುತ್ತಿದ್ದು, ಶುಂಠಿ, ಈರುಳ್ಳಿ, ಟೊಮೆಟೊ, ಆಲೂಗಡ್ಡೆ ಸೇರಿದಂತೆ ಹಲವು ತರಕಾರಿಗಳ ಬೆಲೆ ಕಡಿಮೆಯಾಗಿದೆ. ಬೆಳ್ಳುಳ್ಳಿ, ಬಟಾಣಿ ಹಾಗೂ ಹಸಿ ಮೆಣಸಿನಕಾಯಿ ದುಬಾರಿಯಾಗಿವೆ.

‘ಶಿವರಾತ್ರಿ ವೇಳೆ ತರಕಾರಿ ದರಗಳು ಏರಿದ್ದವು. ಮರುದಿನದಿಂದಲೇ ದರಗಳು ಕುಸಿದಿವೆ. ಯುಗಾದಿವರೆಗೆ ತರಕಾರಿ ದರಗಳು ಏರುಪೇರು ಸಾಮಾನ್ಯ’ ಎಂದು ತರಕಾರಿ ವ್ಯಾಪಾರಿ ಭಾಸ್ಕರ್ ತಿಳಿಸಿದರು.

ಮಾರ್ಚ್‌ ಮೊದಲ ವಾರದಲ್ಲಿ ಕೊತ್ತಂಬರಿ ಸೊಪ್ಪಿನ ದರ ಕೆ.ಜಿ.ಗೆ ₹140ರಷ್ಟಿತ್ತು, ಈಗ ₹50ಕ್ಕೆ ಕುಸಿದಿದೆ. ಸದ್ಯ ಎಲ್ಲ ಸೊಪ್ಪಿನ ದರಗಳು ಕಡಿಮೆಯಾಗಿದ್ದು, ಮೆಂತ್ಯ, ದಂಟು, ಸಬ್ಬಕ್ಕಿ, ಪಾಲಕ್ ಹಾಗೂ ಕೊತ್ತಂಬರಿ ಸೊಪ್ಪು ಪ್ರತಿ ಕಟ್ಟಿಗೆ ₹15 ದಾಟಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು