ಬುಧವಾರ, ಮಾರ್ಚ್ 3, 2021
23 °C

ಸಂಘಗಳಿಗೆ ಅನುದಾನ ಸ್ಥಗಿತ: ಇದೇ 10ಕ್ಕೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಘ–ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿರುವ ಅನುದಾನ ಸ್ಥಗಿತಗೊಳಿಸಲಾಗುವುದು ಎಂಬರ್ಥದಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ನೀಡಿರುವ ಹೇಳಿಕೆ ವಿರೋಧಿಸಿ ಇದೇ 10ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ನಿರ್ಧರಿಸಿದ್ದಾರೆ. 

ಅಂದು ಬೆಳಿಗ್ಗೆ 11ಕ್ಕೆ ನಗರದ ಪುರಭವನದ ಎದುರು ಮತ್ತು ಅದೇ ದಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಗರದಲ್ಲಿ ಗುರುವಾರ ನಡೆದ ತೀರ್ಮಾನ ಕೈಗೊಳ್ಳಲಾಯಿತು. ‘ಸಂಘ ಸಂಸ್ಥೆಯವರೆಲ್ಲ ಕಳ್ಳರು– ಸುಳ್ಳರು ಎನ್ನುವಂತೆ ಸಚಿವರು ಮಾತನಾಡಿದ್ದಾರೆ. ಈ ಹೇಳಿಕೆಗೆ ಅವರು ಕ್ಷಮೆ ಕೋರಬೇಕು’ ಎಂದೂ ಸಭೆಯಲ್ಲಿ ಆಗ್ರಹಿಸಲಾಯಿತು. 

ನಿರ್ದೇಶಕ ಸಿ. ಬಸವಲಿಂಗಯ್ಯ, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಮೊದಲಿನಿಂದಲೂ ನಿರ್ಲಕ್ಷಿಸಲಾಗುತ್ತಿದೆ. ಐದಾರು ವರ್ಷಗಳಲ್ಲಿ ಏಳು ಕಾರ್ಯದರ್ಶಿಗಳು ಬದಲಾಗಿದ್ದಾರೆ. ಈಗ, ಅನುದಾನಕ್ಕಾಗಿ ಜಿಲ್ಲಾಧಿಕಾರಿ ಮುಂದೆ ಹೋಗಬೇಕು ಎಂಬ ನಿಯಮ ರೂಪಿಸಿದರೆ, ಇಲಾಖೆಯ ಕಥೆ ಮುಗಿದಂತೆಯೇ ಎಂದೇ ಹೇಳಬೇಕಾಗುತ್ತದೆ. ಸರ್ಕಾರದ ಈ ನಿರ್ಧಾರಕ್ಕೆ ನಮ್ಮ ವಿರೋಧವಿದೆ’ ಎಂದು ಹೇಳಿದರು. 

‘ಸುಳ್ಳು ಅಥವಾ ನಕಲಿ ಸಂಘ–ಸಂಸ್ಥೆಗಳು ಇವೆ ಎಂದಾದಲ್ಲಿ, ಇಲಾಖೆಯ ಸಹಾಯಕ ನಿರ್ದೇಶಕರುಗಳು ಅವುಗಳ ಹೆಸರನ್ನು ಬಹಿರಂಗಗೊಳಿಸಲಿ. ಅಕ್ರಮವಾಗಿ ಅನುದಾನ ಪಡೆದ ಸಂಸ್ಥೆಗಳ ಪಟ್ಟಿ ಪ್ರಕಟಿಸಲಿ. ಅದನ್ನು ಬಿಟ್ಟು ಎಲ್ಲ ಸಂಘ–ಸಂಸ್ಥೆಗಳು ಕಳ್ಳ
ಸಂಸ್ಥೆಗಳು ಎಂದು ಸಾರ್ವತ್ರೀಕರಣಗೊಳಿಸುವುದು ತಪ್ಪು’ ಎಂದು ಅಭಿಪ್ರಾಯಪಟ್ಟರು.

‘ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೇ ಸಂಸ್ಕೃತಿ ಇಲ್ಲ. ಅಕಾಡೆಮಿಗಳ ಅಧ್ಯಕ್ಷರನ್ನೂ ಅವರು ಕಳ್ಳರಂತೆ ನೋಡುತ್ತಿದ್ದಾರೆ. ಇಂತಹ ಸಚಿವರು ನಮಗೆ ಬೇಡ’ ಎಂದು ಕಲಾವಿದ ಜೋಗಿಲ ಸಿದ್ದರಾಜು ಹೇಳಿದರು. 

‘ಪ್ರಸಕ್ತ ಸಾಲಿನ ಅನುದಾನವನ್ನು ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿದೆ. ಈ ಅನುದಾನ ಪಡೆಯಲು ಯಾವುದೇ ನಿಯಮ ಅನ್ವಯವಾಗುವುದಿಲ್ಲ. ಮುಂದಿನ ವರ್ಷಕ್ಕೆ ಮಾತ್ರ ನಿಯಮ ಅನ್ವಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇನ್ನು ಒಂದು ತಿಂಗಳಲ್ಲಿ ಸರ್ಕಾರ ತನ್ನ ಸಾಂಸ್ಕೃತಿಕ ನೀತಿ ಪ್ರಕಟಿಸಲಿದೆ’ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್‌ ತಿಳಿಸಿದರು.

‘ಅನುದಾನ ವಿಚಾರವೂ ಒಳಗೊಂಡಂತೆ, ಸಾಂಸ್ಕೃತಿಕ ಕ್ಷೇತ್ರ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ಹಾಗೂ ತೀರ್ಮಾನ ತೆಗೆದುಕೊಳ್ಳಲು ಎಲ್ಲ ಕಲಾವಿದರ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಹೇಳಿದರು. 

ಕಲಾವಿದರ ಜಟಾಪಟಿ 
ಒಂದೊಂದು ಕ್ಷೇತ್ರದ ಕಲಾವಿದರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರಿಂದ ಸಭೆಯು ಗೊಂದಲದ ಗೂಡಾಯಿತು. 

‘ಕಲಾವಿದರಲ್ಲಿ ಒಗ್ಗಟ್ಟು ಇರಬೇಕು. ಅದು ಬಿಟ್ಟು ಕೊರಳ ಪಟ್ಟಿ ಹಿಡಿಯುವ ರೀತಿಯಲ್ಲಿ ಕೂಗಾಡುವುದು ಸರಿಯಲ್ಲ’ ಎಂದು ಶ್ರೀನಿವಾಸ ಕಪ್ಪಣ್ಣ ಬೇಸರ ವ್ಯಕ್ತಪಡಿಸುವ ಮಟ್ಟಿಗೆ ಸಭೆಯಲ್ಲಿ ಗಲಾಟೆ ನಡೆಯಿತು. 

ಪ್ರತಿಭಟನೆಯ ಸ್ವರೂಪ, ಸರ್ಕಾರದ ವಿರುದ್ಧ ತೆಗೆದುಕೊಳ್ಳಬೇಕಾದ ನಿರ್ಧಾರ, ಆನ್‌ಲೈನ್‌ನಲ್ಲಿ ಮಾಹಿತಿ ಭರ್ತಿ ವಿಚಾರ ಸೇರಿದಂತೆ ಹಲವು ಅಂಶಗಳ ಕುರಿತು ಚರ್ಚೆಯ ವೇಳೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಭೆ ವಿಫಲವಾಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು