ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವ ಇಚ್ಛೆಯ ಮತಾಂತರಕ್ಕೆ ಕಾನೂನಿನ ದೌರ್ಜನ್ಯ: ಸಿದ್ದರಾಮಯ್ಯ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ *ಎಸ್‌.ಜಿ. ಸಿದ್ಧರಾಮಯ್ಯ ಅವರ ಆತ್ಮಕಥೆ ‘ಯರೆಬೇವು’ ಬಿಡುಗಡೆ
Last Updated 26 ಡಿಸೆಂಬರ್ 2021, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಮತಾಂತರಕ್ಕೆ ಕಾರಣವೇನು, ಅದಕ್ಕೆ ಪ್ರಚೋದನೆ ನೀಡುತ್ತಿರುವವರು ಯಾರು ಎಂಬುದನ್ನು ಪತ್ತೆಹಚ್ಚಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಅದರ ಬದಲು, ಸ್ವ ಇಚ್ಛೆಯಿಂದ ಮತಾಂತರ ಆಗುತ್ತಿರುವವರ ಮೇಲೆ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ಸರ್ಕಾರದ ನಡೆ ಖಂಡನಾರ್ಹ’ ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಹುರೂಪಿ ಪ್ರಕಾಶನ ಹಾಗೂ ಲಂಡನ್‌ನ ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅವರ ಆತ್ಮಕಥೆ ‘ಯರೆಬೇವು’ ಕೃತಿಯನ್ನು ಬಿಡುಗಡೆ ಮಾಡಿ, ಅವರಿಗೆ ‘ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿ ₹ 25 ಸಾವಿರ ನಗದು ಒಳಗೊಂಡಿದೆ.

‘ಬಲಾತ್ಕಾರದ ಮತಾಂತರವನ್ನು ನಾನು ಕೂಡ ವಿರೋಧಿಸುತ್ತೇನೆ. ಸಂವಿಧಾನದಲ್ಲಿ ಬಲಾತ್ಕಾರದ ಮತಾಂತರ ತಡೆಯಲು ಅವಕಾಶವಿದೆ. ಹೀಗಾಗಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾಯ್ದೆ ತರುವ ಅಗತ್ಯವಾದರೂ ಏನಿದೆ? ಪ್ರಜ್ಞಾವಂತರು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಬೇಕು. ಬೌದ್ಧ ಧರ್ಮ, ಜೈನ ಧರ್ಮ, ಲಿಂಗಾಯತ ಧರ್ಮ, ಸಿಖ್ ಧರ್ಮ ಇವೆಲ್ಲವೂ ಹಿಂದೂ ಧರ್ಮದ ಭಾಗವೆಂದು ಪ್ರತಿಪಾದಿಸಲಾಗುತ್ತಿದೆ. ಈ ಬೆಳವಣಿಗೆ ಅಪಾಯಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಗಜ್ಯೋತಿ ಬಸವೇಶ್ವರರು ವೈದಿಕ ಧರ್ಮ, ಗೊಡ್ಡು ಸಂಪ್ರದಾಯವನ್ನು ಒಪ್ಪಿಕೊಂಡಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತೆ ಪ್ರಮಾಣ ಶೇ 18 ರಷ್ಟಿತ್ತು. ಆ ಪ್ರಮಾಣ ಈಗ ಶೇ 78ಕ್ಕೆ ಏರಿಕೆಯಾಗಿದೆ. ಆದರೆ, ಕಡಿಮೆ ಆಗಬೇಕಾದ ಅನಿಷ್ಠ ಪದ್ಧತಿಗಳು ಹೆಚ್ಚಾಗಿ, ಈ ಸಮಾಜವನ್ನು ಕಾಡುತ್ತಿವೆ. ಈಗ ಸತ್ಯವನ್ನು ನೇರವಾಗಿ ಹೇಳುವುದೇ ಕಷ್ಟವಾಗಿದೆ.ಅಭಿವ್ಯಕ್ತಿ ಸ್ವಾತಂತ್ರ್ಯ ಕಷ್ಟದಲ್ಲಿದ್ದು, ಸತ್ಯ ಕೆಲವರಿಗೆ ಕಹಿ ಆಗುತ್ತದೆ. ಹಂಸಲೇಖ ಅವರು ವಾಸ್ತವಾಂಶವನ್ನು ತೆರೆದಿಟ್ಟಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.

ಪರಿಕಲ್ಪನೆ ಬದಲು

ಸಾಹಿತಿ ಮರುಳಸಿದ್ದಪ್ಪ, ‘ಹುಟ್ಟಿನಿಂದ ಲಿಂಗಾಯತರಾದವರು ಮಾತ್ರ ಬಸವಣ್ಣನ ವಾರಸುದಾರರಲ್ಲ. ಬಸವತತ್ವ ಮತ್ತು ಶರಣ ಧರ್ಮವು ಈಗ ಅಡ್ಡ ರಸ್ತೆಯಲ್ಲಿ ಬಂದು ನಿಂತಿದೆ. ಕನ್ನಡ ನಾಡಿನಲ್ಲಿ ವೈದಿಕ ಸಂಸ್ಕೃತಿಗೆ ಪರ್ಯಾಯವಾಗಿ ಶರಣ ಸಂಸ್ಕೃತಿ ಹುಟ್ಟು ಹಾಕಲಾಗಿದೆ. ಈ ಸಂಸ್ಕೃತಿಯಿಂದ ಇಷ್ಟ ಧರ್ಮದ ಪರಿಕಲ್ಪನೆ ಹಾಗೂ ದೇವರ ಬೆಗೆಗಿನ ವ್ಯಾಖ್ಯಾನ ಬದಲಾಯಿತು’ ಎಂದು ತಿಳಿಸಿದರು.

‘ಬೆಕ್ಕಿನ ರೂಪಕಗಳು ಹಂಸಲೇಖ ಅವರ ಮೇಲೆ ದಾಳಿ ಮಾಡಿದವು. ಆ ರೂಪಕಗಳು ಮುಂದಿನ ದಿನಗಳಲ್ಲಿಮಸೀದಿ, ಚರ್ಚ್, ಬಸದಿಗಳ ಮೇಲೆಯೂ ದಾಳಿ ನಡೆಸಬಹುದು’ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದಎಸ್.ಜಿ. ಸಿದ್ಧರಾಮಯ್ಯ, ‘ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಭಿವ್ಯಕ್ತಿ ಸ್ವಾತಂತ್ಯ ಇಲ್ಲವಾಗಿದೆ. ವಿಚಾರವಂತ ಸಾಹಿತಿಗಳು ಕೂಡ ವೈಯಕ್ತಿಕ ದೌರ್ಬಲ್ಯಗಳಿಂದ ಬಾಯಿ ಮುಚ್ಚಿಕೊಂಡಿದ್ದಾರೆ. ದೇಶದ ಮೊದಲ ಪ್ರಧಾನಿ ನೆಹರು ಅವರ ಕೊಡುಗೆಗಳನ್ನು ಕಡೆಗಣಿಸಿ, ಕಳೆದ 10 ವರ್ಷಗಳಲ್ಲಿಯೇ ಎಲ್ಲವೂ ಆಗಿದೆಯೆಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಂಗಾಯಣ– ರಾಜಕೀಯ ಬೇಡ’

ಮೈಸೂರು ರಂಗಾಯಣದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ರಂಗಾಯಣವನ್ನು ಮುಂದಕ್ಕೆ ಕೊಂಡೊಯ್ಯಬೇಕು. ಹಿಂದಕ್ಕೆ ಎಳೆಯುವ ಕೆಲಸ ಮಾಡುತ್ತಿರುವುದು ತಪ್ಪು. ಇಲ್ಲಿ ರಾಜಕೀಯ ಬೆರೆಸಬಾರದು’ ಎಂದು ಹೇಳಿದರು.

‘ಕನ್ನಡ ಸಾಹಿತ್ಯ ಪರಿಷತ್ತು, ಅಕಾಡೆಮಿಗಳು, ಪ್ರಾಧಿಕಾರಗಳು ಮತ್ತು ರಂಗಾಯಣಗಳಲ್ಲಿ ಇದುವರೆಗೆ ರಾಜಕೀಯ ಹಸ್ತಕ್ಷೇಪ ಇರಲಿಲ್ಲ. ಅವುಗಳ ಸ್ವಾಯತ್ತತೆಗೆ ಯಾವುದೇ ರಾಜಕೀಯ ಪಕ್ಷಗಳು ಧಕ್ಕೆ ತಂದಿರಲಿಲ್ಲ. ಆದರೆ, ಸಾಹಿತ್ಯ ಪರಿಷತ್ತಿನ ಈ ಬಾರಿಯ ಚುನಾವಣೆಯಲ್ಲಿ ಕೋಮುವಾದಿ ಪಕ್ಷವೊಂದು ನೇರವಾಗಿ ಸ್ಪರ್ಧಿಯೊಬ್ಬರಿಗೆ ಬೆಂಬಲ ನೀಡಿತು. ರಂಗಾಯಣವೂ ಸ್ವಾಯತ್ತತೆ ಕಳೆದುಕೊಳ್ಳುತ್ತಿದೆ. ನಾವು ಅಧಿಕಾರದಲ್ಲಿದ್ದಾಗ ಎಂದೂ ಓಲೈಕೆ ರಾಜಕಾರಣ ಮಾಡಿರಲಿಲ್ಲ’ ಎಂದು ತಿಳಿಸಿದರು.

ನನ್ನ ಪೋಲಿ ಆಟಗಳಿಗೆ ಚರಿತ್ರೆಯಿದೆ: ಹಂಸಲೇಖ

‘ನಾನು ವೇದಿಕೆಯೊಂದರಲ್ಲಿ ಆಡಿದ ಮಾತುಗಳು ವಿವಾದಕ್ಕೆ ಒಳಗಾದಾಗ ಎಸ್‌.ಜಿ. ಸಿದ್ಧರಾಮಯ್ಯ ಅವರು ಬೆಂಬಲಕ್ಕೆ ನಿಂತು, ಧೈರ್ಯ ತುಂಬಿದರು. ಬ್ಲಡ್‌ ಫ್ರೈ ಬಗ್ಗೆ ಮಾತನಾಡಿದ್ದಕ್ಕೆ ಬ್ಲಡ್‌ ತಿನ್ನುವುದನ್ನು ಮರೆತವರು ಸಹ ನನ್ನ ಮೇಲೆ ಮುಗಿಬಿದ್ದರು. ‘ನುಡಿದರೆ ಮುತ್ತಿನ ಹಾರದಂತೆ ಇರಬೇಕು’ ಎಂದು ಹೇಳಲಾಗುತ್ತದೆ. ಆದರೆ, ಕೆಲ ಸಂದರ್ಭದಲ್ಲಿ ಮಾತು ಕುದಿಯುವ ಸಲಾಕೆಯೂ ಆಗುತ್ತದೆ. ನಾನು ಭಯಸ್ತನಲ್ಲ. ಮಾಗಡಿ ರಸ್ತೆಯಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದಿದ್ದೇನೆ. ಅದಕ್ಕೊಂದು ಚರಿತ್ರೆಯೇ ಇದೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT