ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆಯಿಂದ ನೀರು

ಮೂರಂಡಹಳ್ಳಿ– ಮಾರ್ಜೇನಹಳ್ಳಿಯಲ್ಲಿ ಚುನಾವಣಾ ಪ್ರಚಾರ: ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಭರವಸೆ
Last Updated 4 ಮೇ 2018, 10:37 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಆಡಳಿತ ನಡೆಸಲು ಪಕ್ಷಕ್ಕೆ ಮತ್ತೊಮ್ಮೆ ಅವಕಾಶ ಕೊಟ್ಟರೆ ಮೇಕೆದಾಟು ಯೋಜನೆಯಿಂದ ಜಿಲ್ಲೆಗೆ ಕುಡಿಯುವ ನೀರು ತರುತ್ತೇವೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಭರವಸೆ ನೀಡಿದರು.

ತಾಲ್ಲೂಕಿನ ಮೂರಂಡಹಳ್ಳಿ ಮತ್ತು ಮಾರ್ಜೇನಹಳ್ಳಿ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಸೈಯದ್ ಜಮೀರ್ ಪಾಷ ಪರ ಗುರುವಾರ ಪ್ರಚಾರ ನಡೆಸಿ ಮಾತನಾಡಿ, ‘ಮೇಕೆದಾಟು ಯೋಜನೆಯಿಂದ ನೀರು ತರಲು ಯಾವುದೇ ಅಡೆತಡೆ ಎದುರಾದರೂ ಕಾನೂನು ಮೀರಿ ಯೋಜನೆ ಜಾರಿಗೊಳಿಸುತ್ತೇವೆ’ ಎಂದು ತಿಳಿಸಿದರು.

‘ರಾಜ್ಯದ ಹಿತದೃಷ್ಟಿಯಿಂದ ಜನ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವಿದೆ. ಪಕ್ಷವು 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಭರವಸೆಗಳ ಪೈಕಿ ಶೇ 99ರಷ್ಟು ಬೇಡಿಕೆ ಈಡೇರಿಸಿದೆ. ಸಮಯಾವಕಾಶ ಸಮಸ್ಯೆಯ ಕಾರಣಕ್ಕೆ ಜನರ ಕೆಲ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗಿಲ್ಲ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನಾಯಕತ್ವದಲ್ಲಿ ಪಕ್ಷವು 5 ವರ್ಷದಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಮತ ಯಾಚಿಸಬೇಕು. ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಕ್ತಿ ಮೀರಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಜನ ಮರೆತಿಲ್ಲ: ‘ಈ ಹಿಂದೆ 1998ರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ವಿಭಜನೆಗೂ ಮುನ್ನ ನಾನು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನ ಮರೆತಿಲ್ಲ. ಈಗಲೂ ಕ್ಷೇತ್ರ ಪ್ರವಾಸ ಮಾಡಿದಾಗ ಜನ ಆ ಕೆಲಸಗಳನ್ನು ನೆನಪಿಸುತ್ತಾರೆ’ ಎಂದು ಜಮೀರ್‌ ಪಾಷಾ ಹೇಳಿದರು.

‘ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ಈಗ ಜನ ಸೇವೆಗಾಗಿ ರಾಜಕೀಯ ಪ್ರವೇಶಿಸಿದ್ದು, ಮತದಾರರು ನನ್ನನ್ನು ಬೆಂಬಲಿಸಬೇಕು. ಕಾಂಗ್ರೆಸ್‌ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸರ್ಕಾರದ ಪ್ರತಿಪರ ಯೋಜನೆಗಳಿಂದ ಜನರ ಜೀವನ ಮಟ್ಟ ಸುಧಾರಿಸಿದೆ. ದೇಶದ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ಕಾಂಗ್ರೆಸ್ ಪಕ್ಷದಿಂದ ಮಾತ್ರ ಏಕತೆ ಕಾಪಾಡಲು ಸಾಧ್ಯ. ಶಾಂತಿ ಮತ್ತು ನೆಮ್ಮದಿ ಜೀವನಕ್ಕೆ, ಸುಭದ್ರ ಆಡಳಿತಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು’ ಎಂದರು.

‘ಒಂದು ವರ್ಷದಿಂದ ಕ್ಷೇತ್ರದಲ್ಲಿ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಜನ ರಾಜಕೀಯ ಬದಲಾವಣೆ ಬಯಸಿದ್ದಾರೆ. ಕ್ಷೇತ್ರದ ಬಾಕಿ ಸಮಸ್ಯೆಗಳ ಪರಿಹಾರಕ್ಕಾಗಿ ಮತದಾರರು ನನಗೆ ಮತ ಹಾಕಬೇಕು. ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಎಐಸಿಸಿ ಸಮಿತಿ ವೀಕ್ಷಕ ರಾಮುಸುಬ್ಬು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್‌ಶಂಕರ್, ಎಸ್ಸಿ ಘಟಕದ ಅಧ್ಯಕ್ಷ ಜಯದೇವ್, ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಜೆ.ಕೆ.ಜಯರಾಮ್‌ ಪಾಲ್ಗೊಂಡಿದ್ದರು.

**
ದೇಶ ಹಾಗೂ ರಾಜ್ಯದ ಜನರ ನೆಮ್ಮದಿಗಾಗಿ ಎಲ್ಲೆಡೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್‌ನಿಂದ ಮಾತ್ರ ನವ ಭಾರತ ನಿರ್ಮಾಣ ಸಾಧ್ಯ
– ವಿ.ಆರ್‌.ಸುದರ್ಶನ್‌, ಕೆಪಿಸಿಸಿ ಉಪಾಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT