ಶುಕ್ರವಾರ, ಫೆಬ್ರವರಿ 21, 2020
18 °C
ಕೊಳವೆ ಬಾವಿ ಇದ್ದರೂ ವಿದ್ಯುತ್ ಸಂಪರ್ಕ ಕೊಡದ ಇಲಾಖೆ l ಎಸ್ಕಾಂಗಳ ನಿರ್ಲಕ್ಷ್ಯ

ಪರಿಶಿಷ್ಟರಿಗೆ ಇಲ್ಲ ‘ಕಲ್ಯಾಣ’ ಗಂಗೆ

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಷ್ಟೇ ಭಗೀರಥ ಪ್ರಯತ್ನ ಮಾಡಿದರೂ ಗಂಗೆ ದಲಿತರ ಹೊಲದಲ್ಲಿ ಹಸಿರು ಮೂಡಿಸಿಲ್ಲ. ಭೂರಮೆ ತಣಿಸಬೇಕಾದ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆಯಲು ‘ಕಂಬ’ ಸುತ್ತಿ ಹೈರಾಣಾಗಿ ಪರಿತಪಿಸುವುದು ಮಾತ್ರ ನಿಂತಿಲ್ಲ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಮುದಾಯದವರ ಕೃಷಿ ಭೂಮಿಗೆ ನೀರು ಹರಿಸುವ ಸಲುವಾಗಿ ಜಾರಿಮಾಡಿದ ‘ಗಂಗಾ ಕಲ್ಯಾಣ‘ ಯೋಜನೆಯಲ್ಲಿ ಕೊರೆಸಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ಸತಾಯಿಸುತ್ತಿವೆ. ಎಂದಿನಂತೆ ‘ನಾಳೆ ಬಾ’ ಎಂದು ರೈತರನ್ನು ಸಾಗಹಾಕುತ್ತಿವೆ. ಈ ವಿಳಂಬ ನೀತಿಯಿಂದಾಗಿ ರೈತರಿಗೆ ತಲುಪದಂತಾಗಿದೆ.

ಈ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿರುವ ಸುಮಾರು 13 ಸಾವಿರ ಮಂದಿ ನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ನಾಳೆ, ನಾಡಿದ್ದು ವಿದ್ಯುತ್ ಸಂಪರ್ಕ ಸಿಗಬಹುದು, ಕೊಳವೆಯಿಂದ ನೀರು ಹರಿಸಿ ಹೊಲದಲ್ಲಿ ಹಸಿರು ಮೂಡಿಸಬಹುದು ಎಂಬ ಕನಸು ಹೊತ್ತುಕೊಂಡೇ ದಿನಗಳನ್ನು ದೂಡುತ್ತಿದ್ದಾರೆ. ‘ಕರೆಂಟ್’ ಕೊಡಿ ಎಂದು ಮೊರೆ ಇಡುತ್ತಿದ್ದರೂ ಸ್ಪಂದನೆ ಮಾತ್ರ ಸಿಗದಾಗಿದೆ.

ವಿದ್ಯುತ್ ಕೊರತೆಯೂ ಇಲ್ಲ: ಈ ಬಾರಿ ರಾಜ್ಯದಲ್ಲಿ ವಿದ್ಯುತ್ ಕೊರತೆಯೂ ಇಲ್ಲ. ಜಲ, ಶಾಖೋತ್ಪನ್ನ, ಸೌರ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಪ್ರಗತಿಯಾಗಿದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಕೆಯೂ ಆಗುತ್ತಿದೆ. ಆದರೂ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಪರಿಶಿಷ್ಟರ ಹೊಲಗಳಲ್ಲಿ ಕೊಳವೆಯಿಂದ ನೀರು ಚುಮ್ಮುತ್ತಿಲ್ಲ.

ಕಾಡಿದ ನೆರೆ: ಜೀವನವನ್ನೇ ಬೀದಿಗೆ ತಳ್ಳಿದ ನೆರೆಯಿಂದಾಗಿ ಉತ್ತರ ಕರ್ನಾಟಕ ಭಾಗದ ರೈತರ ಬದುಕು ಹೈರಾಣಾಗಿದೆ. ಮನೆ ಮಠ, ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಪ್ರವಾಹದಿಂದ ಬೆಳೆ ಸಂಪೂರ್ಣ ನಾಶವಾಗಿದ್ದು, ಮತ್ತೆ ಜೀವನ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿದ್ದಾರೆ.

ಉತ್ತಮ ಮಳೆಯಿಂದಾಗಿ ಅಂತರ್ಜಲವೂ ಹೆಚ್ಚಳವಾಗಿದೆ. ನೆರವಿಗೆ ಬಂದ ಸರ್ಕಾರ ಸಹ ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ‘ಗಂಗಾ ಕಲ್ಯಾಣ’ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಿಕೊಟ್ಟಿದೆ. ಪಂಪ್, ಮೋಟಾರ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರತಿ ಫಲಾನುಭವಿಗೆ ಈ ಯೋಜನೆಯಲ್ಲಿ ₹50 ಸಾವಿರ ನೀಡುತ್ತಿದೆ. ಇದೇ ಹಣದಲ್ಲಿ ವಿದ್ಯುತ್ ಸರಬರಾಜು ಕಂಪನಿಗೆ ಠೇವಣಿ ಮೊತ್ತ ಪಾವತಿಸಲಾಗುತ್ತಿದೆ.

ಏನಿದು ಗಂಗಾ ಕಲ್ಯಾಣ?

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನರ ಕೃಷಿ ಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸುವ ಸಲುವಾಗಿ ‘ಗಂಗಾ ಕಲ್ಯಾಣ’ ಯೋಜನೆಯನ್ನು ಜಾರಿಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂಲಕ ಯೋಜನೆ ಕಾರ್ಯಗತಗೊಳಿಸಲಾಗಿದೆ.

ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆಮಾಡಿ, ಅಂತಹವರ ಹೊಲದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತದೆ. ಪಂಪ್, ಮೋಟಾರ್ ಅಳವಡಿಕೆ ಮಾಡಿ, ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.

***

ಠೇವಣಿ ಹಣವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ತುಂಬಲಾಗುತ್ತಿದೆ. ಶೀಘ್ರ ವಿದ್ಯುತ್ ಸಂಪರ್ಕ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ

– ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು