ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ: ಏಪ್ರಿಲ್‌ನಿಂದ ಪಾವತಿಯಾಗಿಲ್ಲ ಹಣ

ಹಣ ಬಿಡುಗಡೆಯಲ್ಲೂ ತಾರತಮ್ಯ: ಗುತ್ತಿಗೆದಾರರ ಆರೋಪ
Last Updated 17 ಅಕ್ಟೋಬರ್ 2021, 19:16 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆದಾರ ರಿಗೆ ಆರು ತಿಂಗಳಿನಿಂದ ಹಣ ಪಾವತಿ ಆಗಿಲ್ಲ. ಕಸ ವಿಲೇವಾರಿ ವ್ಯವಸ್ಥೆ ಮೇಲೂ ಇದರ ದುಷ್ಪರಿಣಾಮ ಉಂಟಾಗುತ್ತಿದೆ.

ಒಂದೆಡೆ ಡೀಸೆಲ್‌ ದರ ಲೀಟರ್‌ಗೆ ₹ 100ರ ಗಡಿ ದಾಟಿದೆ. 2021 ಏಪ್ರಿಲ್‌ನಿಂದ ಹಣ ಪಾವತಿ ಆಗಿಲ್ಲ. ಕಸ ಸಾಗಿಸುವ ವಾಹನಗಳ ನಿರ್ವಹಣೆಯೂ ಕಷ್ಟವಾಗಿದೆ. ಇನ್ನೂ ಹಣ ಪಾವತಿ ಆಗದಿದ್ದರೆ ಕಸ ವಿಲೇವಾರಿ ಕಷ್ಟವಾಗಬಹುದು ಎಂದು ಕೆಲವು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ.

ಒಂದೆರಡು ದಿನ ಕಸ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯದಿದ್ದರೂನಗರದಲ್ಲಿ ಎಲ್ಲೆಡೆ ಕಸದ ರಾಶಿಗಳು ಕಾಣಿಸಿಕೊಳ್ಳುತ್ತವೆ. ಮಾರುಕಟ್ಟೆ ಆಸುಪಾಸಿನ ಪ್ರದೇಶ ಗಳಂತೂ ಗಬ್ಬೆದ್ದು ನಾರುತ್ತ‌ವೆ. ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬಗಳ ಸಂದರ್ಭದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಬ್ಬದ ಸಂದರ್ಭದಲ್ಲಿ ಉತ್ಪತ್ತಿಯಾದ ಹೆಚ್ಚು ವರಿ ಕಸವನ್ನು ವಿಲೇ ಮಾಡುವಷ್ಟರಲ್ಲಿ ಬಿಬಿಎಂಪಿ ಹೈರಾಣಾಗಿತ್ತು. ಪಾವತಿ ವಿಳಂಬದಿಂದ ಬೇಸತ್ತು ಕಸ ವಿಲೇವಾರಿ ಸ್ಥಗಿತಗೊಳಿಸುವುದಕ್ಕೂ ಗುತ್ತಿಗೆದಾರರು ಚಿಂತನೆ ನಡೆಸಿದ್ದಾರೆ.

‘ಕಸ ವಿಲೇವಾರಿ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ನಿರ್ವಹಿಸುವ ಗುತ್ತಿಗೆದಾರರಿಗೆ ಬಿಬಿಎಂಪಿಯಲ್ಲಿ ಆದ್ಯತೆ ಮೇರೆಗೆ ಹಣ ಪಾವತಿ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಭೂಭರ್ತಿ ಕೇಂದ್ರಗಳಿಗೆ ಕಸ ಸಾಗಿಸುವ ಗುತ್ತಿಗೆದಾರರ ಪಾವತಿ ತೀರಾ ವಿಳಂಬವಾಗಿದೆ. ಆಯುಧ ಪೂಜೆ ಸಂದರ್ಭದಲ್ಲಿ ಕಾರ್ಮಿಕರಿಗೆ ಬೋನಸ್‌ ನೀಡುವ ಸಂಪ್ರದಾಯವಿದೆ. ಈ ಬಾರಿ ಅದೂ ಸಾಧ್ಯವಾಗಿಲ್ಲ. ಡೀಸೆಲ್‌ ಬೆಲೆ ಏರಿಕೆಯ ಹೊರೆಯನ್ನೂ ನಾವು ತಾಳಿಕೊಳ್ಳಬೇಕಿದೆ. ದೀಪಾವಳಿ ವೇಳೆಗಾದರೂ ಬಿಬಿಎಂಪಿ ಬಾಕಿ ಮೊತ್ತ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದರು.

‘ಹಣ ಬಿಡುಗಡೆ ವೇಳೆ ಬಿಬಿಎಂಪಿ ಅಧಿಕಾರಿಗಳು ತಾರತಮ್ಯ ನಡೆಸುತ್ತಿದ್ದಾರೆ. ಕೆಲವು ಗುತ್ತಿಗೆದಾರ
ರಿಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೆಯೇ ಹಣ ಪಾವತಿ ಆಗುತ್ತಿದೆ. ಇನ್ನು ಕೆಲವರಿಗೆ ವಿನಾಕಾರಣ ಪಾವತಿ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ದೂರು ಹೇಳಿಕೊಂಡಾಗ ಹಿರಿಯ ಅಧಿಕಾರಿಗಳು ಹಣ ಬಿಡುಗಡೆ ಮಾಡುವುದಾಗಿ ಭರವಸೆಯನ್ನೇನೋ ನೀಡುತ್ತಾರೆ. ಆದರೆ, ಸಮಸ್ಯೆ ಮಾತ್ರ ಹಾಗೆಯೇ ಮುಂದುವರಿಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಸ ಸಾಗಣೆ ಕಷ್ಟ’ ಎಂದು ಬಿಬಿಎಂಪಿ ಸ್ವಚ್ಛತಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ದೂರಿದರು.

‘ನಗರೋತ್ಥಾನ ಹಾಗೂ ಸರ್ಕಾರದ ಇತರ ಕಾರ್ಯಕ್ರಮಗಳ ಸಲುವಾಗಿ ನಗರಾಭಿವೃದ್ಧಿ ಇಲಾಖೆಯು ಇತ್ತೀಚೆಗೆ ₹ 550 ಕೋಟಿ ಮೊತ್ತವನ್ನು ಬಿಬಿಎಂಪಿಗೆ ಬಿಡುಗಡೆ ಮಾಡಿದೆ.ಆದರೂ, ರಸ್ತೆ ಗುಂಡಿ ಮುಚ್ಚುವುದು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಅನುದಾನ ಬಿಡುಗಡೆಗೆ ಮೀನಮೇಷ ಎಣಿಸಲಾಗುತ್ತಿದೆ’ ಎಂದು ಗುತ್ತಿಗೆದಾರರೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT