ಶನಿವಾರ, ಆಗಸ್ಟ್ 24, 2019
27 °C
‘ಬಿಬಿಎಂಪಿ ಕಸ ನಿರ್ವಹಣೆ ಬೈಲಾ 2019’ ಕರಡು ಪ್ರಕಟ * ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡಿದರೆ ಕಟ್ಟಬೇಕು ₹ 500 ದಂಡ

ಬೆಂಗಳೂರಿನ ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮ– ಸಜ್ಜಾಗಿದೆ ನಿಯಮ

Published:
Updated:

ಬೆಂಗಳೂರು: ನಗರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿರುವ ಪಾಲಿಕೆ, ಈ ಸಲುವಾಗಿ ‘ಬಿಬಿಎಂಪಿ ಕಸ ನಿರ್ವಹಣೆ ಬೈಲಾ 2019’ರ ಕರಡು ರೂಪಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಮತ್ತು ಮನೆಗಳ ಕಸವನ್ನು ಬೇರ್ಪಡಿಸಿ ಕೊಡದವರಿಗೆ ಭಾರಿ ದಂಡ ವಿಧಿಸುವುದೂ ಸೇರಿ, ಕಸ ನಿರ್ವಹಣೆ ವ್ಯವಸ್ಥೆಯನ್ನು ಸರಿದಾರಿಗೆ ತರುವ ಅನೇಕ ಪ್ರಸ್ತಾವಗಳು ಈ ಬೈಲಾದಲ್ಲಿವೆ.

ಸಭೆ ಸಮಾರಂಭ ನಡೆಸುವವರಿಂದ ಕಸ ನಿರ್ವಹಣೆಗೆ ಮುಂಚಿತವಾಗಿ ಠೇವಣಿ ಸಂಗ್ರಹಿಸುವುದು, ಪೌರ ಕಾರ್ಮಿಕರ ಸುರಕ್ಷತೆ, ಇ–ತ್ಯಾಜ್ಯ, ಕಟ್ಟಡ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಸಂಬಂಧಿಸಿದ ಅನೇಕ ಸುಧಾರಣಾ ಕ್ರಮಗಳನ್ನು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಒಟ್ಟು 57 ಪುಟಗಳ ಈ ಬೈಲಾ ಕರಡಿಗೆ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಅನುಮೋದನೆಯೂ ದೊರೆತಿದ್ದು, ಮುಂದಿನವಾರ ಈ ಕುರಿತು ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ. ‘ಈ ಕರಡಿನ ಕುರಿತು ಅಧಿಸೂಚನೆ ಪ್ರಕಟಿಸಿದ ಬಳಿಕ ಸಾರ್ವಜನಿಕರಿಂದ ಸಲಹೆ ಅಥವಾ ಆಕ್ಷೇಪಣೆಗಳನ್ನು ಸ್ವೀಕರಿಸಲು 15 ದಿನ ಕಾಲಾವಕಾಶ ನೀಡಲಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದಂಡನೆಗೆ ಸಂಬಂಧಿಸಿದಂತೆ ಕರಡಿನಲ್ಲಿ ಪ್ರಸ್ತಾಪಿಸಿರುವ ಪ್ರಮುಖ ಅಂಶಗಳು ಇಂತಿವೆ.

ಭಾರಿ ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿದರೆ, ಉಗುಳಿದರೆ ಅಥವಾ ಮಲ–ಮೂತ್ರ ವಿಸರ್ಜನೆ ಮಾಡಿದರೆ ಮೊದಲ ಬಾರಿ ₹ 500 ಹಾಗೂ ಎರಡನೇ ಬಾರಿ ಇಂತಹ ಅಪರಾಧವೆಸಗಿದರೆ ₹ 1,000 ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. 

ಮನೆ ಹಾಗೂ ಮಳಿಗೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ ನೀಡದಿದ್ದರೆ ಮೊದಲ ಬಾರಿ  ₹ 500 ಹಾಗೂ ಎರಡನೇ ಬಾರಿ ₹ 1000 ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಕಸ ಉತ್ಪಾದಿಸುವವರು ಇಂತಹ ತಪ್ಪೆಸಗಿದರೆ ₹ 1000ದಿಂದ ₹ 5000ರವರೆಗೆ ದಂಡ ವಿಧಿಸಲಾಗುತ್ತದೆ.

ವ್ಯಕ್ತಿ ಅಥವಾ ಸಂಸ್ಥೆ ಮೂರನೇ ಬಾರಿ ನಿಯಮ ಉಲ್ಲಂಘಿಸಿದರೆ ನಿಗದಿತ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚು ದಂಡ ವಿಧಿಸಲು ಅವಕಾಶವಿದೆ. ನಾಲ್ಕನೇ ಬಾರಿ ತಪ್ಪೆಸಗಿದರೆ, ಅಂತಹವರ ಮಳಿಗೆಗಳ ಪರವಾನಗಿ ರದ್ದುಪಡಿಸುವುದು ಹಾಗೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಪ್ರಸ್ತಾಪವೂ ಇದೆ. ಈ ದಂಡದ ಮೊತ್ತವನ್ನು ಹೆಚ್ಚು ಮಾಡುವುದಕ್ಕೂ ಅವಕಾಶವಿದೆ.

ಬಿಬಿಎಂಪಿ ಉದ್ಯೋಗಿಗಳು ಮನೆಯಲ್ಲಿ ಕಸ ವಿಂಗಡಣೆ ಮಾಡದಿದ್ದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು, ಸಂಬಳ ಕಡಿತ ಮಾಡುವುದಕ್ಕೆ ಅಥವಾ ಹಿಡಿದಿಟ್ಟುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಪಾಲಿಕೆಗೆ ಸೇವೆ ನೀಡುವ ಸಂಸ್ಥೆಗಳು ಬೈಲಾದ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದರೆ ಅವರಿಗೆ ₹ 50ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ. ಕಟ್ಟಡ ತ್ಯಾಜ್ಯದ ಸಮರ್ಪಕ ವಿಲೇವಾರಿ ಮಾಡದವರಿಗೂ ₹ 50 ಸಾವಿರ ದಂಡ ವಿಧಿಸುವ ಪ್ರಸ್ತಾಪವಿದೆ.

ಸ್ಥಳದಲ್ಲೇ ದಂಡ: ಸಾರ್ವಜನಿಕ ಸ್ಥಳದ ಸ್ವಚ್ಛತೆಗೆ ಧಕ್ಕೆ ತರುವವರನ್ನು ಪತ್ತೆ ಹಚ್ಚುವ ಸಲುವಾಗಿ ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಅವರು ತಪ್ಪಿತಸ್ಥರಿಗೆ ಸ್ಥಳದಲ್ಲೇ ದಂಡ ವಿಧಿಸಲಿದ್ದಾರೆ. ಅವರಿಗೆ ಡಿಜಿಟಲ್‌ ಸಾಧನ, ಸಮವಸ್ತ್ರ, ವಾಹನ, ವೈರ್‌ಲೆಸ್‌ ಉಪಕರಣ ಮತ್ತಿತರ ಸೌಲಭ್ಯ  ಒದಗಿಸಲಾಗುತ್ತದೆ. ವಿಧಿಸುವ ದಂಡದ ಪ್ರಮಾಣದ ಆಧಾರದಲ್ಲಿ ಪ್ರೋತ್ಸಾಹಧನವನ್ನು ನೀಡುವ ಪ್ರಸ್ತಾಪವೂ ಕರಡಿನಲ್ಲಿದೆ.  

ಭಾರಿ ಕಸ ಉತ್ಪತ್ತಿ ಮಾಡುವವರು ಸ್ವಯಂಘೋಷಣೆ ಮಾಡಿಕೊಳ್ಳಲು ಪಾಲಿಕೆ ಅವಕಾಶ ಕಲ್ಪಿಸಲಿದೆ. ಒಂದು ವೇಳೆ ಈ ರೀತಿ ಘೋಷಣೆ ಮಾಡಿಕೊಳ್ಳದವರು ಭಾರಿ ಕಸ ಉತ್ಪಾದಿಸುತ್ತಿರುವುದು ಕಂಡು ಬಂದರೆ ಅವರಿಗೆ ಪಾಲಿಕೆ ದಂಡ ವಿಧಿಸಲಿದೆ. ಭಾರಿ ಕಸ ಉತ್ಪಾದಿಸುವವರು ಖಾಸಗಿ ಏಜೆನ್ಸಿಯ ಸೇವೆ ಪಡೆಯಬಹುದು.

100ಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಸಭೆ ಸಮಾರಂಭ ನಡೆಸುವುದಾದರೆ ಇನ್ನು ಪಾಲಿಕೆಗೆ ಮುಂಚಿತವಾಗಿ ತಿಳಿಸುವುದು ಕಡ್ಡಾಯವಾಗಲಿದೆ. ಅವರು ಕಸವನ್ನು ಮೂಲದಲ್ಲೇ ವಿಂಗಡಣೆ ಮಾಡುವ ಬಗ್ಗೆ ಖಾತರಿ ನೀಡಬೇಕಾಗುತ್ತದೆ. ಹಾಗೂ ಕಾರ್ಯಕ್ರಮ ಮುಗಿದ 12 ಗಂಟೆಯ ಒಳಗೆ ಸ್ಥಳವನ್ನು ಸ್ವಚ್ಛಗೊಳಿಸಿ ಕಸವನ್ನು ನಿಯಮ ಪ್ರಕಾರ ವಿಲೇ ಮಾಡಬೇಕು. ಅವರು ನಿಗದಿತ ಶುಲ್ಕ ಪಾವತಿಸಿ ಇದಕ್ಕೆ ಬಿಬಿಎಂಪಿಯ ನೆರವು ಪಡೆಯಬಹುದು.

ವಾರ್ಡ್‌ ಸಮಿತಿಗಳಿಗೆ ಹೆಚ್ಚು ಹೊಣೆ
ಕಸ ವಿಲೇವಾರಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವವಲ್ಲಿ ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಹೊಣೆ ನಿಗದಿಪಡಿಸಲಾಗಿದೆ. ಈ ಸಮಿತಿಗಳು ಆಯಾ ವಾರ್ಡ್‌ನ ಅಗತ್ಯ ಗುರುತಿಸಿ ಯೋಜನೆ ರೂಪಿಸುವ ಮೂಲಕ ಈ ಬೈಲಾ ಅನುಷ್ಠಾನದಲ್ಲಿ ಪಾಲಿಕೆಗೆ ನೆರವಾಗಲಿವೆ. 

ಜನ ಸೇರಿಸುತ್ತೀರಾ, ಭದ್ರತಾ ಠೇವಣಿ ಇಡಿ
ಮೆರವಣಿಗೆ, ವಸ್ತುಪ್ರದರ್ಶನ, ಸರ್ಕಸ್‌, ಮೇಳಗಳು, ರಾಜಕೀಯ ರ‍್ಯಾಲಿಗಳು, ವಾಣಿಜ್ಯ, ಸಾಮಾಜಿಕ– ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಟನೆ, ಧರಣಿ ಮುಂತಾದವುಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರಿಸುವವರು (ಪಾಲಿಕೆಯ ಅಥವಾ ಪೊಲೀಸರ ಪೂರ್ವಾನುಮತಿ ಕಡ್ಡಾಯವಿರುವಂಥವು) 12 ಗಂಟೆಗಳ ಒಳಗೆ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಗೆ ಮುನ್ನ ಭದ್ರತಾ ಠೇವಣಿ ಸಂಗ್ರಹಿಸುವ ಹಾಗೂ ಕಾರ್ಯಕ್ರಮಕ್ಕೆ ಬಳಸಿದ ಸ್ಥಳವನ್ನು ಸ್ವಚ್ಛವಾಗಿ ಬಿಟ್ಟುಕೊಟ್ಟರೆ ಅದನ್ನು ಮರಳಿಸುವ, ಇಲ್ಲದಿದ್ದರೆ ಮುಟ್ಟುಗೋಲು ಹಾಕಿಕೊಳ್ಳುವ ಪ್ರಸ್ತಾಪವೂ ಇದೆ. ಸ್ಥಳವನ್ನು ಸ್ವಚ್ಛಗೊಳಿಸದಿದ್ದರೆ ದಂಡ ವಿಧಿಸಲಾಗುತ್ತದೆ. 

ಕಸ ನಿರ್ವಹಣೆ– ಸೇವಾ ಶುಲ್ಕ
ಪಾಲಿಕೆ ಕಸ ನಿರ್ವಹಣೆಗಾಗಿ ವರ್ಷಕ್ಕೆ ₹ 1000 ಕೋಟಿ ವೆಚ್ಚ ಮಾಡುತ್ತಿದ್ದರೆ, ಈ ಸೆಸ್‌ನಿಂದ ಕೇವಲ ₹ 40 ಕೋಟಿ ಸಂಗ್ರಹವಾಗುತ್ತಿದೆ. ಈ ವೆಚ್ಚದ ವ್ಯತ್ಯಾಸವನ್ನು ಸರಿದೂಗಿಸಲು ಪಾಲಿಕೆ ಕಸ ನಿರ್ವಹಣೆ ಸೇವಾ ಶುಲ್ಕ ವಿಧಿಸಲಿದೆ. ವಸತಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು, ಹಾಗೂ ಭಾರಿ ಪ್ರಮಾಣದಲ್ಲಿ ಕಸ ಉತ್ಪಾದಿಸುವವರಿಗೆ ಪ್ರತ್ಯೇಕ  ಶುಲ್ಕಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 31 ಬಗೆಯ ವಾಣಿಜ್ಯ ಮಳಿಗೆಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಪ್ರತ್ಯೇಕ ಸೇವಾ ಶುಲ್ಕ(ತಿಂಗಳಿಗೆ) ನಿಗದಿಪಡಿಸಲಾಗಿದೆ. ಈ ಶುಲ್ಕವನ್ನು ನಿಗದಿತ ಅವಧಿಗಿಂತ 3 ತಿಂಗಳ ಒಳಗೆ ಪಾವತಿಸದಿದ್ದರೆ ಶೇ 2ರಷ್ಟು ಸರ್ಚಾರ್ಜ್‌ ವಿಧಿಸಲಾಗುತ್ತದೆ.

ಪ್ರತ್ಯೇಕ ಖಾತೆ: ಸೇವಾ ಶುಲ್ಕ ಸಂಗ್ರಹಕ್ಕಾಗಿಯೇ ಪಾಲಿಕೆ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಲಿದೆ. ಈ ಹಣವನ್ನು ಕಸ ನಿರ್ವಹಣೆಯ ವೆಚ್ಚ ಸರಿದೂಗಿಸುವುದಕ್ಕೆ ಬಳಸಲಿದೆ.

ಕಸ ಸಾಗಣೆಗೆ  ಪರಿಸರ ಸ್ನೇಹಿ ವಾಹನ
ಪಾಲಿಕೆ ಮನೆ ಮನೆಯಿಂದ ಕಸ ಸಂಗ್ರಹಿಸಿ ಸಾಗಿಸುವ ವಾಹನಗಳು ಪರಿಸರ ಸ್ನೇಹಿ ಆಗಿರಬೇಕು. ಇದಕ್ಕೆ ಎಲೆಕ್ಟ್ರಿಕ್‌ ವಾಹನ ಅಥವಾ ಬ್ಯಾಟರಿಚಾಲಿತ ವಾಹನ ಬಳಸಬೇಕು.

ಕಸ ಸಾಗಿಸುವ ವಾಹನ ಆಟೊ ಟಿಪ್ಪರ್‌, ಕಾಂಪ್ಯಾಕ್ಟರ್‌ಗಳಲ್ಲಿ ಮಣ್ಣಿನಲ್ಲಿ ಕರಗುವ ಕಸ ಮತ್ತು ಕರಗದ ಕಸ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಬೇರೆ ಬೇರೆ ಕಂಪಾರ್ಟ್‌ಮೆಂಟ್‌ಗಳಿರಬೇಕು. 

ಕಸ ಸಾಗಿಸುವಾಗ ಅದನ್ನು ಮುಚ್ಚಿರಬೇಕು. ಕಸವನ್ನು ರಸ್ತೆಯಲ್ಲಿ ಚೆಲ್ಲಬಾರದು. ಅದು ಜನರಿಗೆ ಕಾಣಿಸುವಂತಿರಬಾರದು. ಅವುಗಳಿಂದ ಲೀಚೆಟ್‌ ಸೊರಿಕೆ ಆಗಬಾರದು.

ಆ ವಾಹನ ಎಲ್ಲಿ ಹೋಗುತ್ತಿದೆ ಎಂಬ ಬಗ್ಗೆ ನಿಗಾ ಇಡಲು ಅವುಗಳಲ್ಲಿನ ಜಿಪಿಎಸ್‌ ಅಳವಡಿಸಿರಬೇಕು.

ಕಸ ಕೊಡಲು ಆಗದವರಿಗೆ ಪ್ರತ್ಯೇಕ ವ್ಯವಸ್ಥೆ
ಮನೆಗೆ ಮನೆಗೆ ಬರುವ ಕಸ ಸಂಗ್ರಹಗಾರರಿಗೆ ಕಸ ನೀಡಲಾಗದಿದ್ದರೆ, ಅವುಗಳ ಸಂಗ್ರಹಕ್ಕೆಂದೇ ಪ್ರತ್ಯೇಕ ಸಂಗ್ರಹ ಕೇಂದ್ರಗಳನ್ನು ಆರಂಭಿಸಬೇಕು.

ಬೇರ್ಪಡಿಸಿದ ಕಸವನ್ನು ಮನೆ ಮನೆಯಿಂದ ಕಸ ಸಂಗ್ರಹಿಸುವವರಿಗೆ ಹಸ್ತಾಂತರಿಸಲು ಸಾಧ್ಯವಾಗದಿದ್ದರೆ ಅದನ್ನು ಸಾರ್ವಜನಿಕ ಸ್ಥಳದಲ್ಲಿ ಬಿಡುವಂತಿಲ್ಲ.

 ಕರಡಿನಲ್ಲಿರುವ ಪ್ರಮುಖ ಅಂಶಗಳು
* ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡುವವರು, ಒಮ್ಮೆ ವಿಂಗಡಣೆ ಮಾಡಿದ ಹಸಿ ಕಸವ ಮತ್ತು ಒಣ ಕಸವನ್ನು ಮತ್ತೆ ಮಿಶ್ರಣ ಮಾಡುವುದು ಕಂಡುಬಂದರೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತದೆ

* ಕಟ್ಟಡ ತ್ಯಾಜ್ಯವನ್ನು ನಿಯೋಜಿತ ಏಜೆನ್ಸಿಗಳಿಗೆ ನೀಡಬೇಕು. ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿಲೇ ಮಾಡಿದರೆ ಅದಕ್ಕೂ ಭಾರಿ ದಂಡ ವಿಧಿಸಲಾಗುತ್ತದೆ.

* ಭೂಭರ್ತಿ ಕೇಂದ್ರಗಳಿಗೆ ಆದಷ್ಟು ಕಡಿಮೆ ಪ್ರಮಾಣದಲ್ಲಿ ಕಸ ಹೋಗುವಂತೆ ನೋಡಿಕೊಳ್ಳಬೇಕು. ಪುನರ್ಬಳಕೆ ವಸ್ತು, ಗೊಬ್ಬರ ತಯಾರಿಸಬಹುದಾದ ಯಾವುದೇ ಕಸವು ಭೂಭರ್ತಿ ಕೇಂದ್ರವನ್ನು ಸೇರಬಾರದು

* ಸಾಮುದಾಯಿಕ ಕಸದ ತೊಟ್ಟಿಗಳನ್ನು ಅಲ್ಲಲ್ಲಿ ಸ್ಥಾಪಿಸಬೇಕು

* ಕಸವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸುವಂತಿಲ್ಲ.

* ಮುರಿದ ಕುರ್ಚಿ, ಕಪಾಟು, ಶೂ, ಕಂಪ್ಯೂಟರ್‌ ಟೇಬಲ್‌, ಹಾಸಿಗೆ, ಸೋಫ, ಪಾತ್ರೆಗಳು, ದಿಂಬು, ಮತ್ತಿತರ ಪರಿಸರ ಸಂಗ್ರಹಕ್ಕೆ ‍ಪಾಲಿಕೆ ದ್ವಿತೀಯ ಹಂತದ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಪ್ರತ್ಯೇಕ ಶೂಲ್ಕ ನಿಗದಿಪಡಿಸಬಹುದು

* ಭಾರಿ ಕಸ ಅಥವಾ ತೋಟಗಾರಿಕಾ/ ಉದ್ಯಾನ ಕಸ ಸಂಗ್ರಹಕ್ಕೆ ವಾರದಲ್ಲಿ ಒಂದು ದಿನವನ್ನು ನಿಗದಿಪಡಿಸಬೇಕು

* ಒಣ ಕಸ ಸಂಗ್ರಹಿಸುವ ಕೆಲಸವನ್ನು ಕಸ ಆಯುವ ಕೆಲಸದಲ್ಲಿ ತೊಡಗಿದ್ದವರಿಗೆ ಅಥವಾ ಸ್ವಸಹಾಯ ಸಂಘಗಳಿಗೆ ವಹಿಸಬೇಕು

* ಮನೆಯಲ್ಲಿ ಉತ್ಪಾದನೆಯಾಗುವ ಅಪಾಯಕಾರಿ ತ್ಯಾಜ್ಯ ಹಾಗೂ ಸ್ಯಾನಿಟರಿ ಸಂಗ್ರಹಣೆಗೆ ಪ್ರತ್ಯೇಕ ಕೇಂದ್ರಗಳನ್ನು ಆರಂಭಿಸಬೇಕು

Post Comments (+)