ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸಮುಕ್ತ ಶಿವಾಜಿನಗರ’ ವಿಶೇಷ ಅಭಿಯಾನ

Last Updated 17 ಡಿಸೆಂಬರ್ 2020, 16:29 IST
ಅಕ್ಷರ ಗಾತ್ರ

ಬೆಂಗಳೂರು: ಶಿವಾಜಿನಗರ ವಾರ್ಡ್‌ನಲ್ಲಿ ಕಸ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲುಬಿಬಿಎಂಪಿಯು ‘ಕಸಮುಕ್ತ ಶಿವಾಜಿ ನಗರ’ ಅಭಿಯಾನವನ್ನು ಹಮ್ಮಿಕೊಂಡಿದೆ.

ಈ ಅಭಿಯಾನದ ಅನುಷ್ಠಾನದ ಕುರಿತು ಪೌರಕಾರ್ಮಿಕರು, ಕಸ ವಿಲೇವಾರಿ ಗುತ್ತಿಗೆದಾರರು, ಆಟೊಟಿಪ್ಪರ್ ಚಾಲಕರು/ಸಹಾಯಕರು, ಸ್ವಯಂಸೇವಕರು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳಿಗೆ ಶಿವಾಜಿನಗರದಲ್ಲಿ ಗುರುವಾರ ತರಬೇತಿ ನೀಡಲಾಯಿತು.

ಶಾಸಕ ರಿಜ್ವಾನ್ ಹರ್ಷದ್, ‘ಕಸ ವಿಲೇವಾರಿ ಮಾಡುವುದು ಕೇವಲ ಪಾಲಿಕೆಯ ಜವಾಬ್ದಾರಿ ಅಲ್ಲ. ಶಿವಾಜಿನಗರ ವಾರ್ಡನ್ನು ಶುಚಿಯಾಗಿಡಲು ನಾಗರಿಕರೂ ಪಾಲಿಕೆಗೆ ನೆರವಾಗಬೇಕು’ ಎಂದರು.

‘ರಸಲ್ ಮಾರುಕಟ್ಟೆ ಇರುವ ಈ ವಾರ್ಡ್‌ನಲ್ಲಿ ಹೆಚ್ಚು ವಾಣಿಜ್ಯ ಪ್ರದೇಶಗಳಿದ್ದು, ಇಲ್ಲಿ ಹೆಚ್ಚು ಕಸ ಉತ್ಪತ್ತಿ ಆಗುತ್ತದೆ. ಹಾಗಾಗಿ ಸಮರ್ಪಕ ಕಸ ವಿಲೇವಾರಿ ಪ್ರಕ್ರಿಯೆಗೆ ಈ ವಾರ್ಡ್‌ನಿಂದಲೇ ಚಾಲನೆ ನೀಡಲಾಗುತ್ತಿದೆ. ಇನ್ನು ಪಾಲಿಕೆಯ ಪೌರಕಾರ್ಮಿಕರು ನಿತ್ಯ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಲಿದ್ದಾರೆ. ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಕಸ ಹಾಕಿದವರಿಗೆ ದಂಡ ವಿಧಿಸಲಾಗುತ್ತದೆ. ಜೊತೆಗೆ ಬೀದಿಗಳ ಕಸ ಗುಡಿಸಲಾಗುತ್ತದೆ. ಕಸ ಸುರಿಯುವ ಸ್ಥಳಗಳನ್ನು (ಬ್ಲ್ಯಾಕ್ ಸ್ಪಾಟ್) ಗುರುತಿಸಿ ಸ್ವಚ್ಛಮಾಡಿ ಆ ಸ್ಥಳವನ್ನು ಸುಂದರೀಕರಣ ಮಾಡಲಾಗವುದು’ ಎಂದರು

ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್, ‘ಕಸ ವಿಲೇವಾರಿಗಾಗಿ ಪಾಲಿಕೆಯು ಶಿವಾಜಿನಗರ ವಾರ್ಡ್‌ನಲ್ಲಿ ತಳಮಟ್ಟದ ಯೋಜನೆ ರೂಪಿಸಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಪ್ರತಿ 750 ಮನೆಗಳಿಗೆ ಒಂದರಂತೆ ಬ್ಲಾಕ್ ರಚಿಸಲಾಗಿದೆ. ಈಗಾಗಲೇ 200 ಸ್ವಯಂಸೇವಕರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳು, ಸಾರ್ವಜನಿಕರು ಸಹಕಾರ ನೀಡಿದರೆ ಶೀಘ್ರವೇ ಇಲ್ಲಿನ ಕಸದ ಸಮಸ್ಯೆ ನಿವಾರಣೆಯಾಗಲಿದೆ’ ಎಂದರು.

‘ಕಸ ಸಂಗ್ರಹಿಸುವ ಆಟೊಟಿಪ್ಪರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಯಾವ ಆಟೋ ಎಲ್ಲಿಗೆ ಯಾವ ಸಮಯಕ್ಕೆ ತಲುಪಿದೆ ಎಂಬುದನ್ನು ಕಚೇರಿಯಲ್ಲೇ ಕುಳಿತು ನೋಡಬಹುದು. ಆಟೊಗಳಲ್ಲಿ ಧ್ವನಿವರ್ಧಕಗಳ ಮೂಲಕ ಸ್ಥಳೀಯ ನಾಗರಿಕರಿಗೆ ಅರಿವು ಮೂಡಿಸಲಾಗುತ್ತದೆ’ ಎಂದರು.

ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್‌ ಖಾನ್, ‘ಆಟೊ ಟಿಪ್ಪರ್ ಚಾಲಕರು/ಸಹಾಯಕರು ಕಸ ಸಂಗ್ರಹಿಸಲು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮನೆಗಳಿಗೆ ಹೋಗಬೇಕು. ಹಸಿ, ಒಣ ಹಾಗೂ ನೈರ್ಮಲ್ಯ (ಸ್ಯಾನಿಟರಿ) ಕಸಗಳನ್ನು ಬೇರ್ಪಡಿಸಿ ಕೊಡುವ ಬಗ್ಗೆ ಮಾಹಿತಿ ನೀಡಬೇಕು. ಯಾವ ದಿನ ಒಣ ಕಸ ಸಂಗ್ರಹಿಸಲಾಗುತ್ತದೆ ಎಂಬ ಮುಂಚಿತವಾಗಿ ತಿಳಿಸಬೇಕು’ ಎಂದು ಸಿಬ್ಬಂದಿಗೆ ನಿರ್ದೇಶನ ನೀಡಿದರು.

‘ಅಭಿಯಾನದಲ್ಲಿ ಕೈಜೋಡಿಸಿ’

‘ಕಸಮುಕ್ತ ಶಿವಾಜಿನಗರ ಅಭಿಯಾನದ ಹೆಚ್ಚಿನ ಮಾಹಿತಿಗೆ ProjectShivajinagar.org ನೋಡಬಹುದು. ಸ್ವಯಂಸೇವಕರಾಗಲು ಬಯಸುವವರು 8884414425 ವಾಟ್ಸ್‌ ಆ್ಯಪ್ ಮೂಲಕ ಸಂದೇಶ ಕಳುಹಿಸಬಹುದು’ ಎಂದು ರಿಜ್ವಾನ್‌ ಅರ್ಷದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT