ಮಂಗಳವಾರ, ಆಗಸ್ಟ್ 9, 2022
20 °C

ಕಾರ್ಮಿಕರ ಬೀದಿಗೆ ತಳ್ಳಿದ ಕಂಪನಿ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಿಲ್ಲ ಎಂಬ ನೆಪ ಹೇಳಿ ಕಾರ್ಮಿಕರನ್ನು ವಜಾಗೊಳಿಸಿದ ಅರವಿಂದ್ ಗಾರ್ಮೆಂಟ್ಸ್‌ ಕಾರ್ಖಾನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನೂರಾರು ಕಾರ್ಮಿಕರು, ಮಂಗಳವಾರ ಕಾರ್ಖಾನೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. 

ಭಟ್ಟರಹಳ್ಳಿ ಸಮೀಪದ ಈ ಕಾರ್ಖಾನೆಯು ಕಾರ್ಮಿಕರಿಂದ ಬಲವಂತವಾಗಿ ರಾಜೀನಾಮೆ ಪಡೆಯುತ್ತಿದೆ ಎಂದು ಆರೋಪಿಸಿದ ಮಹಿಳಾ ಕಾರ್ಮಿಕರು, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

‘ಕಾರ್ಖಾನೆಯಲ್ಲಿ 750ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಕೆಲಸಕ್ಕೆ ಬಂದಿಲ್ಲದಿರುವುದರಿಂದ ನಷ್ಟವಾಗಿದೆ. ಕಂಪನಿ ಮುಚ್ಚುತ್ತೇವೆ ಎಂದು ಹೇಳಿ 350ಕ್ಕೂ ಹೆಚ್ಚು ಕಾರ್ಮಿಕರಿಂದ ಬಲವಂತವಾಗಿ ರಾಜೀನಾಮೆ ಬರೆಸಿಕೊಂಡಿದ್ದಾರೆ’ ಎಂದು  ಕನ್ನಡ ರಣಧೀರ ಪಡೆ ಉಪಾಧ್ಯಕ್ಷ ಆನಂದಗೌಡ ಆರೋಪಿಸಿದರು.

‘ಬೆಂಗಳೂರು ಗ್ರಾಮಾಂತರ ಭಾಗದ ಹಲವು ಕಡೆಯಿಂದ ಮಹಿಳೆಯರು ಕಾರ್ಖಾನೆಗೆ ಕೆಲಸಕ್ಕೆ ಬರುತ್ತಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಸಾರಿಗೆ ವ್ಯವಸ್ಥೆ ಇರದ ಕಾರಣ ಕೆಲಸಕ್ಕೆ ಹಾಜರಾಗಿಲ್ಲ. ಇದನ್ನೇ ನೆಪವಾಗಿರಿಸಿಕೊಂಡು ಎರಡು ತಿಂಗಳ ಸಂಬಳವೂ ಕೊಡದೆ ಕೆಲಸದಿಂದ ತೆಗೆದು ಹಾಕಿದ್ದಾರೆ’ ಎಂದು ಕಾರ್ಮಿಕರು ಅಳಲು ತೋಡಿಕೊಂಡರು. 

ರಾಜೀನಾಮೆ ಕೇಳಿಲ್ಲ: ‘ಲಾಕ್‌ಡೌನ್‌ನಿಂದಾಗಿ ಕಾರ್ಖಾನೆಯಲ್ಲಿ ಕೆಲಸ ಕಡಿಮೆಯಾಗಿದ್ದು, ಸದ್ಯ ಕಂಪನಿ ನಷ್ಟದಲ್ಲಿದೆ. ಆದರೆ, ಕಾರ್ಖಾನೆ ಮುಚ್ಚಲಾಗುವುದು ಎಂದು ನಾವು ಹೇಳಿಲ್ಲ. ನೌಕರರ ರಾಜೀನಾಮೆಯನ್ನೂ ಕೇಳಿಲ್ಲ. ಕೆಲವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದಾರೆ’ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಾಗೇಶ್‌ ತಿಳಿಸಿದರು. 

‘ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳಿಗೆ ಬೇಡಿಕೆ ಹೆಚ್ಚಾದ ನಂತರ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು