ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಾಶಂಕರ್‌ ಆಟದ ಮೈದಾನದ ಗೇಟ್‌ ಕಾಮಗಾರಿ: ತನಿಖೆಗೆ ಬಿಬಿಎಂಪಿ ಸಮಿತಿ

ವಾರದೊಳಗೆ ವರದಿ ನೀಡುವಂತೆ ಸೂಚಿಸಿದ ತುಷಾರ್ ಗಿರಿನಾಥ್
Published : 23 ಸೆಪ್ಟೆಂಬರ್ 2024, 16:08 IST
Last Updated : 23 ಸೆಪ್ಟೆಂಬರ್ 2024, 16:08 IST
ಫಾಲೋ ಮಾಡಿ
Comments

ಬೆಂಗಳೂರು: ಮಲ್ಲೇಶ್ವರದ ರಾಜಾಶಂಕರ್‌ ಆಟದ ಮೈದಾನದಲ್ಲಿ ಗೇಟ್‌ ಅಳವಡಿಸಿರುವ ಕಾಮಗಾರಿ ಗುಣಮಟ್ಟದ ಕುರಿತು ತನಿಖೆ ನಡೆಸಲು ಬಿಬಿಎಂಪಿಯ ಮೂವರು ಮುಖ್ಯ ಎಂಜಿನಿಯರ್‌ಗಳ ಸಮಿತಿಯನ್ನು ರಚಿಸಲಾಗಿದೆ.

‘ಮೈದಾನದಲ್ಲಿ ಆಟವಾಡಲು ತೆರಳಿದ್ದ ಬಾಲಕ, ಗೇಟ್‌ ಬಿದ್ದು ಮೃತಪಟ್ಟಿದ್ದಾನೆ. ಈ ಮೈದಾನದಲ್ಲಿ ಗೇಟ್‌ ಅಳವಡಿಕೆಯಲ್ಲಿ ಕಳಪೆ ಕಾಮಗಾರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ತನಿಖೆ ನಡೆಸಿ, ಒಂದು ವಾರದಲ್ಲಿ ವರದಿ ಸಲ್ಲಿಸಬೇಕು’ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೋಮವಾರ ಆದೇಶ ಹೊರಡಿಸಿದ್ದಾರೆ.

ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌ ಹರಿದಾಸ್‌ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ತಾಂತ್ರಿಕ ಮತ್ತು ಜಾಗೃತ ಕೋಶದ (ಟಿವಿಸಿಸಿ) ಮುಖ್ಯ ಎಂಜಿನಿಯರ್‌ ವಿಶ್ವನಾಥ್‌, ಗುಣ ನಿಯಂತ್ರಣ ಮತ್ತು ಗುಣ ಭರವಸೆ ವಿಭಾಗದ ಮುಖ್ಯ ಎಂಜಿನಿಯರ್‌ ರಾಘವೇಂದ್ರ ಪ್ರಸಾದ್‌ ಸದಸ್ಯರಾಗಿದ್ದಾರೆ.

‘ಗೇಟ್‌ ಅಳವಡಿಕೆಯ ಕಾಮಗಾರಿ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಕಳಪೆ ಕಾಮಗಾರಿಯಾಗಿದೆ ಎಂದು ಹಿಂದೆ ಯಾರಾದರೂ ದೂರಿದ್ದರೆ ಅದನ್ನು ಸಾಕ್ಷಿ ಸಹಿತ ಸಮಿತಿಗೆ ನೀಡಲಿ. ಅದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತುಷಾರ್‌ ಗಿರಿನಾಥ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಆರೋಪ: ‘ರಾಜಾಶಂಕರ್‌ ಆಟದ ಮೈದಾನದಲ್ಲಿನ ಗೇಟ್‌ ಸುರಕ್ಷಿತವಾಗಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಪಾಲಿಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಇಂಡಿಯಾ (ಕಮ್ಯೂನಿಸ್ಟ್‌) ಪದಾಧಿಕಾರಿಗಳು ಆರೋಪಿಸಿದ್ದಾರೆ. 

ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಪತ್ರ ನೀಡಿರುವ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ. ಜ್ಞಾನಮೂರ್ತಿ, ‘ಸುತ್ತಮುತ್ತಲಿನ ಬಡ ಹಾಗೂ ಕೆಳ ಮಧ್ಯಮ ವರ್ಗದ ಮಕ್ಕಳೇ ಹೆಚ್ಚು ಆಟವಾಡಲು ಬರುವ ಈ ಮೈದಾನದ ಸುರಕ್ಷತೆ ಬಗ್ಗೆ ಕಾಳಜಿ ವಹಿಸದಿರುವುದು ಪಾಲಿಕೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ. ದುರಂತಕ್ಕೆ ಕಾರಣರಾದವರಿಗೆ ಶಿಕ್ಷೆ ವಿಧಿಸಬೇಕು. ನಗರದಲ್ಲಿರುವ ಎಲ್ಲಾ ಆಟದ ಮೈದಾನಗಳು ಮತ್ತು ಉದ್ಯಾನಗಳ ನಿರ್ವಹಣೆ ಸೂಕ್ತವಾಗಿರಬೇಕು. ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT