ಬೆಂಗಳೂರು: ಮನೆ ಎದುರು ವಾಯುವಿಹಾರ ಮಾಡುತ್ತಿದ್ದ ವೃದ್ಧೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸುಬ್ರಹ್ಮಣ್ಯಪುರ ನಿವಾಸಿ ಮಂಜುನಾಥ್ ಅಲಿಯಾಸ್ ಮಾಸ್ ಮಂಜ ಹಾಗೂ ಚಿಕ್ಕಮಗಳೂರಿನ ಯತೀಶ್ ಬಂಧಿತರು. ಇವರಿಬ್ಬರು ಆಗಸ್ಟ್ 13ರಂದು ಬೆಳಿಗ್ಗೆ ವೃದ್ಧೆಯ ಸರ ಕಿತ್ತೊಯ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದೆ. 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ಬೈಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮಂಜುನಾಥ್ ಹಾಗೂ ಯತೀಶ್, ಅಪರಾಧ ಹಿನ್ನೆಲೆಯುಳ್ಳವರು. ಇವರ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ’ ಎಂದರು.
ಜೈಲಿನಲ್ಲಿ ಪರಿಚಯ
‘ಕೆಲ ಪ್ರಕರಣಗಳಲ್ಲಿ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿಯೇ ಅವರಿಬ್ಬರು ಪರಿಚಯವಾಗಿದ್ದರು. ಜಾಮೀನು ಮೇಲೆ ಹೊರಗೆ ಹೋಗುತ್ತಿದ್ದಂತೆ ಕಳ್ಳತನ ಮಾಡೋಣವೆಂದು ಜೈಲಿನಲ್ಲೇ ಸಂಚು ರೂಪಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕದ್ದ ಬೈಕ್‌ನಲ್ಲಿ ಕೃತ್ಯ
‘ಒಂದೂವರೆ ತಿಂಗಳ ಹಿಂದೆಯಷ್ಟೇ ಇಬ್ಬರೂ ಜೈಲಿನಿಂದ ಹೊರಗೆ ಬಂದಿದ್ದರು. ಸರಗಳ್ಳತನ ಮಾಡಲು ಸಜ್ಜಾಗಿದ್ದ ಇಬ್ಬರೂ ಚನ್ನಪಟ್ಟಣಕ್ಕೆ ಹೋಗಿ ಬೈಕ್ ಕದ್ದಿದ್ದರು. ಅದೇ ಬೈಕ್‌ನಲ್ಲಿ ನಗರಕ್ಕೆ ಬಂದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಯಾವ ಪ್ರದೇಶದಲ್ಲಿ ಸರಗಳ್ಳತನ ಮಾಡಬೇಕು? ಸಿ.ಸಿ.ಟಿ.ವಿ ಕ್ಯಾಮೆರಾಗಳು ಎಲ್ಲೆಲ್ಲಿವೆ? ಎಂಬಿತ್ಯಾದಿ ಮಾಹಿತಿ ಕಲೆಹಾಕಿದ್ದರು. ಮನೆಯಿಂದ ಹೋಗಿ ಕಳ್ಳತನ ಮಾಡಿದರೆ, ಪೊಲೀಸರಿಗೆ ಸುಳಿವು ಸಿಗಬಹುದೆಂದು ತಿಳಿದಿದ್ದರು. ಅದೇ ಕಾರಣಕ್ಕೆ ಆಗಸ್ಟ್ 13ರಂದು ರಾತ್ರಿ ಪಾಳು ಬಿದ್ದ ಮನೆಯೊಂದರಲ್ಲಿ ಉಳಿದುಕೊಂಡಿದ್ದರು.’
‘ಮರುದಿನ ಬೆಳಿಗ್ಗೆ ಅದೇ ಮನೆಯಿಂದ ಗಿರಿನಗರಕ್ಕೆ ಬಂದು ವೃದ್ಧೆಯ ಚಿನ್ನದ ಸರ ಕದ್ದೊಯ್ದಿದ್ದರು. ಬೈಕ್ ಚಲಾಯಿಸುತ್ತಿದ್ದ ಆರೋಪಿ, ಹೆಲ್ಮೆಟ್ ಧರಿಸಿದ್ದ. ಹಿಂಬದಿಯಲ್ಲಿ ಕುಳಿತಿದ್ದ ಇನ್ನೊಬ್ಬ ಆರೋಪಿ, ಮಾಸ್ಕ್ ಮಾತ್ರ ಧರಿಸಿದ್ದ’ ಎಂದು ಹೇಳಿವೆ.
ದೇವರಿಗೆ ಮುಡಿ
‘ಆರೋಪಿಗಳು ಚಿನ್ನದ ಸರವನ್ನು ಅಡವಿಟ್ಟು, ಹಣ ಪಡೆದಿದ್ದರು. ಕಳ್ಳತನ ಯಶಸ್ವಿಯಾದರೆ ಮುಡಿ ನೀಡುವುದಾಗಿ ಆರೋಪಿ ಮಂಜುನಾಥ್ ಹರಕೆ ಹೊತ್ತಿದ್ದ. ಹೀಗಾಗಿ, ಯತೀಶ್ ಹಾಗೂ ನಾಲ್ವರು ಸ್ನೇಹಿತರ ಜೊತೆ ಕಾರಿನಲ್ಲಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮಂಜುನಾಥ್ ಹಾಗೂ ಇತರರು, ದೇವರಿಗೆ ಮುಡಿ ನೀಡಿದ್ದರು. ನಂತರ, ನಾಗಮಲೈಗೆ ಹೋಗಿ ವಾಪಸು ಬೆಂಗಳೂರಿಗೆ ಬಂದಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
ಬೈಕ್ ಬಿಟ್ಟು 2 ಕಿ.ಮೀ ನಡಿಗೆ
‘ಕೃತ್ಯದ ಬಗ್ಗೆ ಸುಳಿವು ಸಿಗಬಾರದೆಂದು ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿದ್ದರು. ವೃದ್ಧೆ ಸರ ಕಿತ್ತುಕೊಂಡು ಹಲವೆಡೆ ಸುತ್ತಾಡಿದ್ದ ಅವರು, ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿದ್ದರು. ಅಲ್ಲಿಂದ 2 ಕಿ.ಮೀ ನಡೆದುಕೊಂಡು ನಿರ್ಜನ ಪ್ರದೇಶದ ಮೂಲಕ ಪರಾರಿಯಾಗಿದ್ದರು. ಮೊಬೈಲ್ ಸಹ ಬಳಕೆ ಮಾಡುತ್ತಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.