ಸೋಮವಾರ, ಮೇ 17, 2021
29 °C

ಕೃಷಿಮೇಳದಲ್ಲಿ ಪಶುಲೋಕದ ಅನಾವರಣ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಘೇಂಡಾಮೃಗವನ್ನು ಹೋಲುವ ಭಾರಿ ಗಾತ್ರದ ಹಂದಿಗಳು, ಆಳೆತ್ತರ ಬೆಳೆದ ದೇವಣಿ ಹಸು, ಆಕರ್ಷಕ ಕೊಂಬುಗಳಿರುವ ಕಾಂಕ್ರೇಜ್‌ ದನ, ದಷ್ಟ ಪುಷ್ಟವಾದ ಡಾರ್ಪರ್ ತಳಿಯ ಕುರಿಗಳು, ಮುದ್ದು ಮುದ್ದಾದ ಮೊಲಗಳು, ಗುಂಡು ಗುಂಡಗಿನ ಬಂಡೂರು ತಳಿಯ ಕುರಿಗಳು...

‘ಕೃಷಿ ಮೇಳದ 2019’ರ ಆವೃತ್ತಿಯಲ್ಲಿ ಜನರನ್ನು ಸೆಳೆಯುತ್ತಿರುವ ಜಾನುವಾರುಗಳಿವು. ನಗರ ನಿವಾಸಿಗಳಿಗೆ ತರಹೇವಾರಿ ಜಾನುವಾರುಗಳನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶವನ್ನು ಕೃಷಿಮೇಳ ಕಲ್ಪಿಸಿದೆ.

ಹೆದರುತ್ತಲೇ ದನಗಳ ಮೈಸವರುತ್ತಾ, ಅವುಗಳಿಗೆ ಹುಲ್ಲು ಹಾಕುತ್ತಾ, ಅವು ಕೊಂಬು ಅಲ್ಲಾಡಿಸಿದಾಗ ದೂರ ಓಡುತ್ತಾ, ಸ್ವಂತಿ (ಸೆಲ್ಫಿ) ತೆಗೆದುಕೊಳ್ಳುತ್ತಾ ಜನ ಸಂಭ್ರಮಿಸಿದರು. ವಾಣಿಜ್ಯ ಮಳಿಗೆಗಳಿಗಿಂತಲೂ ಹೆಚ್ಚು ಜನಜಂಗುಳಿ ಇದ್ದುದು ಪಶುಸಂಗೋಪನಾ ಮಳಿಗೆಗಳ ಬಳಿ.

ಸ್ವರ್ಣಭೂಮಿ ಟ್ರಸ್ಟ್‌ನವರು ದೇವಣಿ, ಮೃತ್‌ಮಹಲ್‌, ಮಲೆನಾಡು ಗಿಡ್ಡ ಮುಂತಾದ ದೇಸಿ ತಳಿಯ ಹಸುಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಸುಮಾರು 6 ಅಡಿ ಎತ್ತರದ ದೇವಣಿ ತಳಿಯ ಹಸು ನೋಡುಗರ ಕಣ್ಸೆಳೆಯುವಂತಿತ್ತು. 

‘ದೇವಣಿ ತಳಿಯ ಹಸುಗಳು ಬೀದರ್‌ ಭಾಗದಲ್ಲಿ ಮಾತ್ರವೇ ಉಳಿದಿವೆ. ಈ ಹಸು ಹೊತ್ತಿಗೆ 4 ಲೀಟರ್‌ ಹಾಲು ಕೊಡುತ್ತದೆ. ದೇಸಿ ತಳಿಯ ಹಸುಗಳ ಸಂರಕ್ಷಣೆಗಾಗಿಯೇ ನಾವು ಚಿತ್ರದುರ್ಗದ ಬಳಿ ಗೋಶಾಲೆ ನಡೆಸುತ್ತಿದ್ದೇವೆ. ನಮ್ಮಲ್ಲಿ ದೇಸಿ ತಳಿಗಳ 300ಕ್ಕೂ ಹೆಚ್ಚು ಜಾನುವಾರುಗಳಿವೆ’ ಎಂದು ಭರತ್‌ ಮಾಹಿತಿ ನೀಡಿದರು.

ಹಾಲು, ಗೋಮೂತ್ರ, ಸೆಗಣಿಯಿಂದ ತಯಾರಿಸಲಾದ ಉತ್ಪನ್ನಗಳು ಮಾರಾಟಕ್ಕಿದ್ದವು. ಸ್ವರ್ಣಭೂಮಿ ಗೋಶಾಲ ಟ್ರಸ್ಟ್‌ನವರಂತೂ ಗೋ ಅರ್ಕ, ಹಲ್ಲುಜ್ಜುವ ಪುಡಿ, ಊದು ಬತ್ತು, ಸೆಗಣಿ ಗಣಪತಿ, ವಿಭೂತಿ... ಹೀಗೆ ಒಟ್ಟು 45 ಬಗೆಯ ಸಾಮಗ್ರಿಗಳನ್ನು ಮಾರಾಟಕ್ಕಿಟ್ಟಿದ್ದರು.

 ಕ್ರೇಜ್‌ ಹುಟ್ಟಿಸಿದ ಕಾಂಕ್ರೇಜ್‌: ಹೆಸರಘಟ್ಟದ ಶ್ರೀರಾಮ ಗೋಶಾಲೆಯವರು ಗುಜರಾತ್‌ನ ಕಾಂಕ್ರೇಜ್‌ ತಳಿಯ ಹಸುವನ್ನು ಪ್ರದರ್ಶಿಸಿದ್ದರು. ಮನಮೋಹಕ ಕೊಂಬುಗಳನ್ನು ಹೊಂದಿರುವ ಆಳೆತ್ತರದ ಈ ಹಸುವಿನ ಜೊತೆ ಸ್ವಂತಿ ತೆಗೆದುಕೊಳ್ಳಲು ಅನೇಕರಿಗೆ ಆಸೆ. ಆದರೆ, ಜನಜಂಗುಳಿ ಕಂಡು ಬೆದರಿದ್ದ ಈ ಹಸು ಯಾರೇ ಹತ್ತಿರ ಬಂದರೂ ಕೊಂಬಿನಿಂದ ತಿವಿಯಲು ಮುಂದಾಗುತ್ತಿತ್ತು. ಹಸು ಒಮ್ಮೆಲೆ ಮುನ್ನುಗ್ಗಿದ್ದರಿಂದ ಶಾಲಾ →ವಿದ್ಯಾರ್ಥಿಗಳ ಗುಂಪು →ದಿಕ್ಕಾಪಾಲಾಗಿ ಓಡಿತು.

‘ಕಾಂಗ್ರೇಜ್‌ ತಳಿಯ ದನಗಳು ದಿನಕ್ಕೆ 6ರಿಂದ 7 ಲೀಟರ್ ಹಾಲು ಕೊಡುತ್ತದೆ. ನಮ್ಮ ಬಳಿ ಒಂದು ಹೋರಿ ಹಾಗೂ ಒಂದು ಹಸು ಇದೆ. ದೇಸಿ ಹಸುಗಳ ಹಾಲಿನಲ್ಲಿ ಎ–2 ಪೌಷ್ಟಿಕ ಅಂಶ ಜಾಸ್ತಿ. ಕೊಬ್ಬಿನಂಶ ಕಡಿಮೆ.

ಹಾಗಾಗಿ, ಇವು ಸುಲಭವಾಗಿ ಜೀರ್ಣವಾಗುತ್ತವೆ. ನಮ್ಮ ಗೋಶಾಲೆಯಲ್ಲಿ ದೇಸಿ ತಳಿಯ ಹಳ್ಳಿಕಾರ್‌, ಅಮೃತಮಹಲ್‌, ಗಿರ್‌ ತಳಿಯ ಹಸುಗಳನ್ನು ಸಾಕುತ್ತಿದ್ದೇವೆ’ ಎಂದು ಶ್ರೀರಾಮ ಗೋಶಾಲೆಯ ಲೀಲಶ್ರೀ ತಿಳಿಸಿದರು.

ರೈತಸ್ನೇಹಿ ಹಳ್ಳಿಕಾರ್‌: ಮಂಡ್ಯದ ಕಲ್ಲಹಳ್ಳಿಯ ಪಟೇಲ್‌ ಶಿವರುದ್ರೇಗೌಡರು ಹಳ್ಳಿಕಾರ್‌ ತಳಿಯ ಹಸುಗಳನ್ನು ಕೃಷಿಮೇಳಕ್ಕೆ ತಂದಿದ್ದರು.

‘ಈ ತಳಿಯ ಹೋರಿಗಳು ಉಳುಮೆಗೆ ಹೇಳಿ ಮಾಡಿಸಿದವು. ಕೃಷಿಕನ ಮಾತನ್ನು ಬಲುಬೇಗ ಅರ್ಥ ಮಾಡಿಕೊಳ್ಳುತ್ತವೆ. ಸಣ್ಣ ಮುಖ, ಸಣ್ಣ ಬಾಲ, ಕೋಲುಮುಖ ಉದ್ದದೇಹದ ಈ ತಳಿಯರಾಜ್ಯದಲ್ಲಿ ವ್ಯಾಪಕವಾಗಿ ಕೃಷಿ ಕಾರ್ಯಕ್ಕೆ ಬಳಕೆಯಾಗುತ್ತಿದ್ದವು. ದನವು ದಿನಕ್ಕೆ 6 ಲೀಟರ್‌ನಷ್ಟು ಹಾಲು ಕೊಡುತ್ತದೆ. ಈಗ ಇವುಗಳ ಸಂತತಿಯೂ ಕಡಿಮೆಯಾಗುತ್ತಿದೆ. ಇದರ ಜೋಡಿಗೆ ₹ 3.5 ಲಕ್ಷ ಬೆಲೆ ಇದೆ’ ಎಂದು ಅವರು ಮಾಹಿತಿ ನೀಡಿದರು.

₹ 3 ಲಕ್ಷ ಬೆಲೆ ಬಾಳುವ ಡಾರ್ಪರ್‌ ಕುರಿ

ಅಲ್ಲಿ ಸಾನಿಯನ್‌, ಶಾಮಿ, ಅವಾಸಿ, ಜಮುನಾಪಾರಿ ಮುಂತಾದ ಚಿತ್ತಾಕರ್ಷಕ ಕುರಿಗಳಿದ್ದರೂ ಹೆಚ್ಚಿನ ಜನರ ಗಮನಸೆಳೆದುದು ಡಾರ್ಪರ್‌ ತಳಿಯ ಕುರಿ. ಇದಕ್ಕೆ ಕಾರಣವೂ ಇದೆ. ಕಪ್ಪು ಕತ್ತಿನ, ಗುಂಡಗಿನ ದೇಹದ ಈ ಕುರಿಯ ಪ್ರತಿ ಕೆ.ಜಿ. ಮಾಂಸಕ್ಕೆ ₹ 3 ಸಾವಿರ ಬೆಲೆ ಇದೆ. 

ರೈತರಂತೂ ಈ ಕುರಿಯನ್ನು ಸಾಕುವುದು ಹೇಗೆ?  ವರ್ಷಕ್ಕೆ ಎಷ್ಟು ಕೆ.ಜಿ. ತೂಕ ಬರುತ್ತದೆ? ಮರಿಗಳು ಎಲ್ಲಿ ಸಿಗುತ್ತವೆ? ಇವುಗಳಿಗೆ ಕಾಯಿಲೆ ಏನಾದರೂ ಬರುತ್ತದೆಯೇ... ಹೀಗೆ ತರಹೇವಾರಿ ಪ್ರಶ್ನೆಗಳು ಎದುರಾದರೂ ಕನಕಪುರ ತಾಲ್ಲೂಕಿನ ಚಿಕ್ಕದೇವರಹಳ್ಳಿಯಲ್ಲಿರುವ ಮೆಟ್ರೊ ಫಾರ್ಮ್‌ನ ಸಿಬ್ಬಂದಿ ತಾಳ್ಮೆಯಿಂದಲೇ ಉತ್ತರಿಸಿದರು.

‘ಡಾರ್ಪರ್‌ ಕುರಿ ಮೂಲತಃ ದಕ್ಷಿಣ ಆಫ್ರಿಕಾದ ತಳಿ. ಇದರ ಮಾಂಸ ಬಲು ರುಚಿಕರ. ಶುದ್ಧತಳಿಯ ಕುರಿಗೆ ಬಲು ಬೇಡಿಕೆ ಇದೆ. ಇವುಗಳ ಮಿಶ್ರ ತಳಿಯ ಕುರಿಯ ಮಾಂಸಕ್ಕೂ ಕೆ.ಜಿ.ಗೆ ₹ 1 ಸಾವಿರ ಬೆಲೆ ಇದೆ. ಈ ಕುರಿ ಗರಿಷ್ಠ 150 ಕೆ.ಜಿಯಿಂದ 160 ಕೆ.ಜಿ.ವರೆಗೂ ತೂಗುತ್ತದೆ. ನಾವು ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಕುರಿ ಒಟ್ಟು 110 ಕೆ.ಜಿ ತೂಕ ಇದ್ದು, ಅದರ ಬೆಲೆ ₹ 3.30 ಲಕ್ಷ’ ಎಂದು ಸಿಬ್ಬಂದಿ ತಿಳಿಸಿದರು.

‘ಬಿಳಿಬಣ್ಣದ, ಗಿಳಿ ಮೂಗಿನ ಹಾಗೂ ಮುಖ ಭಾಗದಲ್ಲಿ ಉದ್ದನೆಯ ಕೂದಲು ಹೊಂದಿರುವಜಮುನಾಪಾರಿ ತಳಿಯ ಮೇಕೆಗೂ ಬೇಡಿಕೆ ಹೆಚ್ಚು ಇದೆ. ಈ ತಳಿಯ ಗಂಡು ಕುರಿಯ ಮಾಂಸಕ್ಕೆ ಕೆ.ಜಿ.ಗೆ₹ 600 ರವರೆಗೆ ಬೆಲೆ ಇದೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು