ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಗ್ರಂಥಾಲಯ | 3.79 ಕೋಟಿ ಸದಸ್ಯತ್ವ: ಸತೀಶ್ ಕುಮಾರ್ ಮಾಹಿತಿ

ಎರಡನೇ ಭಾರತೀಯ ಗ್ರಂಥಾಲಯ ಅಧಿವೇಶನ
Published 10 ಫೆಬ್ರುವರಿ 2024, 14:34 IST
Last Updated 10 ಫೆಬ್ರುವರಿ 2024, 14:34 IST
ಅಕ್ಷರ ಗಾತ್ರ

ಬೆಂಗಳೂರು: ‘ಡಿಜಿಟಲ್‌ ಗ್ರಂಥಾಲಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಈವರೆಗೆ 3.79 ಕೋಟಿ ಜನರು ಇದರ ಸದಸ್ಯರಾಗಿದ್ದಾರೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ತಿಳಿಸಿದರು. 

‘ಸೆಕೆಂಡ್‌ ಇಂಡಿಯನ್ ಲೈಬ್ರರಿ ಕಾಂಗ್ರೆಸ್’ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡನೇ ಭಾರತೀಯ ಗ್ರಂಥಾಲಯ ಅಧಿವೇಶನದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಕೋವಿಡ್ ಕಾಣಿಸಿಕೊಂಡ ಬಳಿಕ ಡಿಜಿಟಲ್ ಗ್ರಂಥಾಲಯಕ್ಕೆ ಆದ್ಯತೆ ನೀಡಲಾಯಿತು. ಮೂರು ಹಂತಗಳಲ್ಲಿ 447 ಕೇಂದ್ರಗಳಲ್ಲಿ ಡಿಜಿಟಲ್ ಗ್ರಂಥಾಲಯ ಪ್ರಾರಂಭಿಸಲಾಗಿದೆ. ಈ ಸೇವೆಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸೇರಿ ವಿವಿಧ ಭಾಷೆಗಳಲ್ಲಿನ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 10 ಲಕ್ಷಕ್ಕೂ ಅಧಿಕ ವಿಡಿಯೊಗಳನ್ನು ಡಿಜಿಟಲ್ ಗ್ರಂಥಾಲಯದಡಿ ಒದಗಿಸಲಾಗಿದೆ’ ಎಂದರು.

ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಅವರು, ‘ಜಾಗತಿಕರಣದಿಂದ ಭಾಷೆ, ಸಾಹಿತ್ಯ ಹಾಗೂ ಶಿಕ್ಷಣ ಬದಲಾಗಿದೆ. ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಜನರು ಅತಿಯಾಗಿ ಅವಲಂಬಿಸಿದ್ದು, ಅದರಲ್ಲಿ ಬಂದ ವಿಷಯಗಳ ಸತ್ಯಾಸತ್ಯತೆ ಪರಿಶೀಲಿಸದೆಯೇ ಫಾರ್ವರ್ಡ್ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಇಂತಹ ಪ್ರವೃತ್ತಿಯಿಂದಾಗಿ ಪುಸ್ತಕಗಳನ್ನು ಓದುವುದು ಕಡಿಮೆಯಾಗಿ, ಗ್ರಂಥಾಲಯಗಳು ಮಹತ್ವ ಕಳೆದುಕೊಳ್ಳುತ್ತಿವೆ. ಗ್ರಂಥಾಲಯವು ವಿಮರ್ಶಾತ್ಮಕ ಪ್ರಜ್ಞೆ ಬೆಳೆಸಲು ಸಹಕಾರಿಯಾಗಿದೆ. ಗ್ರಂಥಾಲಯಗಳನ್ನು ಮೇಲ್ದರ್ಜೆಗೆ ಏರಿಸಿ, ಡಿಜಿಟಲೀಕರಣಕ್ಕೆ ಆದ್ಯತೆ ನೀಡಬೇಕಿದೆ. ಈ ಪ್ರಕ್ರಿಯೆಯಿಂದ ಜಗತ್ತಿನ ಎಲ್ಲೆಡೆ ಸಾಹಿತ್ಯ ಕೃತಿಗಳು ಲಭ್ಯವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭಾ ಸದಸ್ಯ, ಕೇರಳದ ವಿ.ಶಿವದಾಸನ್ ಅವರು, ‘ವೈವಿಧ್ಯತೆಯಲ್ಲಿ ಏಕತೆ ದೇಶದ ವೈಶಿಷ್ಟ್ಯ. ಈ ವೈವಿಧ್ಯತೆಗಳ ಬಗ್ಗೆ ತಿಳಿಯಲು ಗ್ರಂಥಾಲಯಗಳು ಸಹಕಾರಿ. ಗ್ರಂಥಾಲಯಗಳಿಗೆ ಸರ್ಕಾರಗಳು ಹೆಚ್ಚಿನ ಅನುದಾನ ಒದಗಿಸಬೇಕು. ಗ್ರಾಮೀಣ ಭಾಗದ ಗ್ರಂಥಾಲಯಗಳನ್ನು ಬಲಪಡಿಸಬೇಕು’ ಎಂದು ಹೇಳಿದರು. ಬಳಿಕ ವಿವಿಧ ಗೋಷ್ಠಿಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT