ಭಾನುವಾರ, ಮಾರ್ಚ್ 26, 2023
23 °C
ಕೆ.ಗೊಲ್ಲಹಳ್ಳಿ ಪಂಚಾಯಿತಿ ವಿರುದ್ಧ ಉನ್ನತ ಮಟ್ಟದ ತನಿಖೆಯ ಭರವಸೆ

ಸರ್ಕಾರಿ ಹಣದಲ್ಲಿ ಗುತ್ತಿಗೆದಾರನ ಸ್ವಂತ ಕಾಮಗಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಂಗೇರಿ ಹೋಬಳಿ ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಕೋಟ್ಯಂತರ ರೂಪಾಯಿ ಅನುದಾನ ಬಳಸಿಕೊಂಡು ಗುತ್ತಿಗೆದಾರರೊಬ್ಬರ ಖಾಸಗಿ ಜಮೀನಿನಲ್ಲಿ ಸಮುದಾಯ ಭವನ, ಮನೆಗೆ ಕಾಂಪೌಂಡ್‌ ನಿರ್ಮಾಣ ಮತ್ತು ಕಾಂಕ್ರೀಟ್‌ ಮಿಕ್ಸರ್‌ ಘಟಕಕ್ಕೆ ಹೈಮಾಸ್ಟ್‌ ದೀಪ ಅಳವಡಿಸಿರುವ ಆರೋಪಗಳ ಕುರಿತು ರಾಜ್ಯಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಗಮನ ಸೆಳೆಯುವ ಸೂಚನೆ ಮಂಡಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ‘ಲಕ್ಷ್ಮಯ್ಯ ಎಂಬ ಗುತ್ತಿಗೆದಾರನ ಸ್ವಂತ ಕೆಲಸಗಳಿಗೆ ಸರ್ಕಾರದ ಅನುದಾನ ಬಳಕೆ ಮಾಡಲಾಗಿದೆ. ಈ ವ್ಯಕ್ತಿಯ ಹೆಸರಿನಲ್ಲಿರುವ ಖಾಸಗಿ ಆಸ್ತಿಯಲ್ಲಿ ₹ 4 ಕೋಟಿ ವೆಚ್ಚ ಮಾಡಿ ಬಸವೇಶ್ವರ ಸಮುದಾಯ ಭವನ ಎಂಬ ಕಟ್ಟಡ ನಿರ್ಮಿಸಲಾಗುತ್ತಿದೆ. ಇನ್ನೂ ₹ 4 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಆರೋಪಿಸಿದರು.

ಸಮುದಾಯ ಭವನ ನಿರ್ಮಾಣಕ್ಕೆ ಎಂಟು ಕಂತುಗಳಲ್ಲಿ ತಲಾ ₹ 50 ಲಕ್ಷ ನೀಡಲಾಗಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಶಿರಡಿ ಸಾಯಿಬಾಬಾ ಸೇವಾ ಸಮಿತಿ ಎಂಬ ಟ್ರಸ್ಟ್‌ ಹೆಸರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಗುತ್ತಿಗೆದಾರ ಲಕ್ಷ್ಮಯ್ಯ ಟ್ರಸ್ಟ್‌ನ ಸಂಚಾಲಕರಾದರೆ, ಅವರ ಪತ್ನಿ ಪಾರ್ವತಿ ಅಧ್ಯಕ್ಷೆ. ಅವರ ಮಗ ಅನಿಲ್‌ ಕುಮಾರ್‌ ಕಾರ್ಯದರ್ಶಿ. ಕುಟುಂಬದ ಆಸ್ತಿಗೆ ಸರ್ಕಾರದ ಅನುದಾನ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

‘ಸಮುದಾಯ ಭವನ ನಿರ್ಮಿಸುತ್ತಿರುವ ಆಸ್ತಿಯನ್ನು ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಸದರಿ ಆಸ್ತಿ ಈಗಲೂ ಲಕ್ಷ್ಮಯ್ಯ ಹೆಸರಿನಲ್ಲಿದೆ. ಅದನ್ನು ಆಧಾರವಾಗಿಟ್ಟು ಪಿಕಾರ್ಡ್‌ ಬ್ಯಾಂಕ್‌ನಲ್ಲಿ ₹ 6.70 ಲಕ್ಷ ಸಾಲ ಪಡೆದಿದ್ದಾರೆ. ಆದರೆ, ಆಸ್ತಿಯನ್ನು ಟ್ರಸ್ಟ್‌ನಿಂದ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದಂತೆ ದಾಖಲೆ ನೋಂದಣಿ ಮಾಡಲಾಗಿದೆ. ಇದು ಕೂಡ ಅಕ್ರಮ’ ಎಂದು ದೂರಿದರು.

ಇದೇ ವ್ಯಕ್ತಿಯ ಮನೆಗೆ ಕಾಂಪೌಂಡ್‌ ನಿರ್ಮಾಣಕ್ಕೆ ಸರ್ಕಾರದ ₹ 50 ಲಕ್ಷ ಅನುದಾನ ಬಳಸಲಾಗಿದೆ. ಈ ಕುರಿತು ಮಾಹಿತಿ ಕೋರಲಾಗಿತ್ತು. ಮನೆಯ ಒಳಭಾಗದಿಂದ ಫೋಟೊ ತೆಗೆದು ಅದನ್ನೇ ನೀಡಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದರು.

ದೀಪದಲ್ಲೂ ಅಕ್ರಮ: ಕೆ. ಗೊಲ್ಲಹಳ್ಳಿ ಗ್ರಾಮ ‍ಪಂಚಾಯಿತಿ ವ್ಯಾಪ್ತಿಯ ಶ್ರೀನಿವಾಸಪುರ ಗ್ರಾಮಕ್ಕೆ ₹ 50 ಲಕ್ಷ ವೆಚ್ಚದಲ್ಲಿ ಮೂರು ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಬಿಲ್‌ ಮಾಡಲಾಗಿದೆ. ವಾಸ್ತವದಲ್ಲಿ ಒಂದೇ ದೀಪವನ್ನು ಗ್ರಾಮದಲ್ಲಿ ಅಳವಡಿಸಲಾಗಿದೆ. ಉಳಿದ ಎರಡನ್ನು ಗುತ್ತಿಗೆದಾರ ಲಕ್ಷ್ಮಯ್ಯ ಒಡೆತನದ ಶ್ರೀರಂಗ ಕಾಂಕ್ರೀಟ್‌ ಮಿಕ್ಸರ್‌ ಕಾರ್ಖಾನೆಗೆ ಹಾಕಲಾಗಿದೆ. ವಿದ್ಯುತ್‌ ಬಿಲ್‌ ಅನ್ನು ಈಗಲೂ ಪಂಚಾಯಿತಿಯೇ ಭರಿಸುತ್ತಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಬಿಜೆಪಿಯ ತೇಜಸ್ವಿನಿ ಗೌಡ ಮಾತನಾಡಿ, ‘ವಿಪಕ್ಷ ಸದಸ್ಯರು ಮಾಡಿರುವ ಆರೋಪಗಳಲ್ಲಿ ಹುರುಳಿರುವಂತೆ ಕಾಣುತ್ತಿದೆ. ಇಂತಹ ಪ್ರಕರಣಗಳಲ್ಲಿ ಸರಿಯಾದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಪರವಾಗಿ ಉತ್ತರಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಕೆ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಕುರಿತು ರಾಜ್ಯಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲಾಗುವುದು’ ಎಂದು ಪ್ರಕಟಿಸಿದರು.

‘₹ 1,500 ಕೋಟಿ ಮೊತ್ತದ ಅಕ್ರಮ’
‘ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಕೆಆರ್‌ಐಡಿಎಲ್‌ ಅಧಿಕಾರಿಗಳು ಶಾಮೀಲಾಗಿ ₹ 1,500 ಕೋಟಿಗೂ ಹೆಚ್ಚು ಅಕ್ರಮ ನಡೆಸಿದ್ದಾರೆ. ಪಂಚಾಯಿತಿಗಳಿಗೆ ನೀಡಿದ್ದ ಅನುದಾನ ದುರ್ಬಳಕೆಯಾಗಿದೆ. ಸರ್ಕಾರಿ ಅನುದಾನ ಬಳಸಿಕೊಂಡು ಖಾಸಗಿ ಬಡಾವಣೆಗಳಿಗೂ ರಸ್ತೆ ನಿರ್ಮಿಸಿದ್ದಾರೆ’ ಎಂದು ಎಂ. ನಾರಾಯಣಸ್ವಾಮಿ ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು