ಮಂಗಳವಾರ, ಅಕ್ಟೋಬರ್ 27, 2020
19 °C

ಸರ್ಕಾರಿ ಜಮೀನು: 1.98 ಲಕ್ಷ ಎಕರೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಜಮೀನಿನ ಪ್ರಮಾಣ ಒಂದೇ ವರ್ಷದ ಅವಧಿಯಲ್ಲಿ 1.98 ಲಕ್ಷ ಎಕರೆಯಷ್ಟು ಕುಗ್ಗಿದೆ. ಸರ್ಕಾರಿ ಜಮೀನುಗಳ ಸಂರಕ್ಷಣೆಗೆ ಇರುವ ಕರ್ನಾಟಕದ ಸಾರ್ವಜನಿಕ ಜಮೀನುಗಳ ನಿಗಮ (ಕೆಪಿಎಲ್‌ಸಿ) ಒದಗಿಸಿರುವ ಅಂಕಿ–ಅಂಶಗಳೇ ಇದನ್ನು ದೃಢಪಡಿಸುತ್ತವೆ.

ಕೆಪಿಎಲ್‌ಸಿ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2017ರಿಂದ 2019ರವರೆಗೂ 63.8 ಲಕ್ಷ ಸರ್ಕಾರಿ ಜಮೀನು ಇತ್ತು. ಈಗ 61.88 ಲಕ್ಷ ಎಕರೆಗೆ ಇಳಿದಿದೆ. ಸರ್ಕಾರಿ ಜಮೀನಿನ ಲೆಕ್ಕಾಚಾರದ ಮರು ಹೊಂದಾಣಿಕೆಯ ಪರಿಣಾಮವಾಗಿ 1.98 ಲಕ್ಷ ಎಕರೆ ಯಷ್ಟು ಕುಸಿತ ಕಂಡುಬಂದಿದೆ ಎಂಬ ವಾದವಿದೆ. ಆದರೆ, ಈಗಲೂ ಕರ್ನಾಟಕದಲ್ಲಿ ಎಷ್ಟು ಎಕರೆ ಸರ್ಕಾರಿ ಜಮೀನು ಇದೆ ಎಂಬ ಖಚಿತವಾದ ಮಾಹಿತಿ ಸರ್ಕಾರದ ಬಳಿ ಇಲ್ಲ. 

ಈ ಕುರಿತು ಪ್ರತಿಕ್ರಿಯಿಸಿದ ಕೆಪಿಎಲ್‌ಸಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮೊಹ್ಸಿನ್‌, ‘ಸರ್ಕಾರಿ ಜಮೀನುಗಳ ಸಮಗ್ರ ಮಾಹಿತಿ ಸಂಗ್ರಹ ಮತ್ತು ಖಚಿತ ವಿವರ ದಾಖಲಿಸುವ ಕುರಿತು ಮಾಸಿಕ ಪರಿಶೀಲನಾ ಸಭೆಗಳನ್ನು ನಡೆಸುವಂತೆ ಎಲ್ಲ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಖಚಿತ ಅಂಕಿ–ಅಂಶ ಲಭ್ಯವಾಗಲಿವೆ’ ಎಂದರು. 

ಮೂಲಗಳ ಪ್ರಕಾರ 6ವರ್ಷಗಳಿಂದ ಈ ರೀತಿಯ ಮರು ಹೊಂದಾಣಿಕೆಯ ಪ್ರಕ್ರಿಯೆ ನಡೆಯುತ್ತಲೇ ಇದೆ. ಜಿಲ್ಲಾಧಿಕಾರಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅಂಕಿಅಂಶಗಳನ್ನು ನೀಡಿರುವುದೇ ಈ ರೀತಿಯ ವ್ಯತ್ಯಾಸ ಬರಲು ಕಾರಣ.ಇನ್ನೊಂದೆಡೆ ರಾಜ್ಯದಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ನಿರಂತರವಾಗಿ ಮುಂದುವರಿಯುತ್ತಲೇ ಇದೆ ಎಂಬುದನ್ನು ಕೆಪಿಎಲ್‌ಸಿ ನೀಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

2019ರ ಏಪ್ರಿಲ್‌ವರೆಗೆ ರಾಜ್ಯದಲ್ಲಿ 11.77 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿತ್ತು. ಈಗ ಅದು 14.01 ಲಕ್ಷ ಎಕರೆಗೆ ತಲುಪಿದೆ.ಒತ್ತುವರಿಯಾಗಿರುವ 9.96 ಲಕ್ಷ ಎಕರೆ ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ನ್ಯಾಯಾ ಲಯಗಳಲ್ಲಿ ವ್ಯಾಜ್ಯಗಳಿವೆ. ಸದ್ಯ ಅವುಗಳ ಒತ್ತುವರಿ ತೆರವು ಅಸಾಧ್ಯ. ಈವರೆಗೆ 2.7 ಲಕ್ಷ ಎಕರೆ ಜಮೀನುಗಳ ಒತ್ತುವರಿ ತೆರವು ಮಾಡಲಾಗಿದೆ. ಇನ್ನೂ 1.34 ಲಕ್ಷ ಎಕರೆಯಲ್ಲಿನ ಒತ್ತುವರಿ
ಗಳನ್ನು ತೆರವುಗೊಳಿಸಬೇಕಿದೆ.

ಜಮಾಬಂದಿ ನಡೆಸುತ್ತಿಲ್ಲ: ‘ಸರ್ಕಾರಿ ಜಮೀನು ಸಂರಕ್ಷಣೆಯ ವಿಧಾನದಲ್ಲೇ ಸಮಸ್ಯೆ ಇದೆ. ಸರ್ಕಾರದ ಬಳಿ ತನ್ನ ಆಸ್ತಿಗೆ ಸಂಬಂಧಿಸಿದ ದಾಖಲೆಗಳೇ ಇಲ್ಲವೇನೋ ಎಂಬಂತೆ ಕೆಲಸ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಬೆಂಗಳೂರು ನಗರದ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳ ಒತ್ತುವರಿ ಕುರಿತು ತನಿಖೆ ನಡೆಸಲು ನೇಮಕವಾಗಿದ್ದ ಜಂಟಿ ಸದನ ಸಮಿತಿಯ ಅಧ್ಯಕ್ಷರೂ ಆಗಿದ್ದ ಹಿರಿಯ ಶಾಸಕ ಎ.ಟಿ. ರಾಮಸ್ವಾಮಿ.

ಪ್ರತಿ ವರ್ಷ ಗ್ರಾಮ ಮಟ್ಟದಲ್ಲಿ ಜಮಾಬಂದಿ ನಡೆಸಬೇಕು. ಆದರೆ, ಇದು ನಡೆಯುತ್ತಿಲ್ಲ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು