ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಾಗ ಒತ್ತುವರಿ: ಮಂತ್ರಿಮಾಲ್‌ನಲ್ಲಿ ಸರ್ವೆ

ಮಂತ್ರಿ ಗ್ರೀನ್ ಸಮುಚ್ಚಯ: ಗಡಿ ಗುರುತಿಸಿದ ಬಿಬಿಎಂಪಿ ಅಧಿಕಾರಿಗಳು
Last Updated 29 ಫೆಬ್ರುವರಿ 2020, 7:33 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಮಂತ್ರಿ ಮಾಲ್ ಮತ್ತು ಮಂತ್ರಿ ಗ್ರೀನ್ ಸಮುಚ್ಚಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ಸರ್ವೆ ಆರಂಭಿಸಿದರು.

ಬಿಬಿಎಂಪಿ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ವಶಕ್ಕೆ ಪಡೆದುಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು
ಜ. 30ರಂದು ಆದೇಶ ಹೊರಡಿಸಿದ್ದರು.

ಅದರಂತೆ ಬಿಬಿಎಂಪಿ ಜಾಗ ಎಲ್ಲಿದೆ ಎಂಬುದನ್ನು ಹುಡುಕಲು ಸರ್ವೆ ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯದ ಉಪ ಆಯುಕ್ತ ವಿ. ಪ್ರಸನ್ನಕುಮಾರ್ ಮತ್ತು ಸರ್ವೆ ಮೇಲ್ವಿಚಾರಕ ಗಂಗಯ್ಯ ನೇತೃತ್ವದಲ್ಲಿ ಸರ್ವೆ ನಡೆಸಲು ಮುಂದಾದರು. ಒಳ ಹೋಗಲು ಮಂತ್ರಿ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಅಪಾರ್ಟ್‌ಮೆಂಟ್ ನಿವಾಸಿಗಳು ಹೈಕೊರ್ಟ್ ತಡೆಯಾಜ್ಞೆ ನೀಡಿದೆ ಎಂದು ಆದೇಶದ ಪ್ರತಿ ಹಿಡಿದು ಸರ್ವೆ ಕಾರ್ಯ ನಡೆಸದಂತೆ ಒತ್ತಾಯಿಸಿದರು. ನಿವಾಸಿಗಳ ವಿರೋಧದ ನಡುವೆ ಹೊರ ಭಾಗದಲ್ಲೇ ಗಡಿ ಗುರುತಿಸುವ ಕಾರ್ಯವನ್ನು ಅಧಿಕಾರಿಗಳು ಮುಗಿಸಿದರು.

‘1912–13ನೇ ಸಾಲಿನಲ್ಲಿ ಮೈಸೂರಿನ ಮಹಾರಾಜರು ಕೈಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೈಸೂರು ಸ್ಪಿನ್ನಿಂಗ್ ಲಿಮಿಟೆಡ್‌ಗೆ 13 ಎಕರೆ 1 ಗುಂಟೆ ಜಾಗ ನೀಡಿದ್ದರು. ಆ ಜಾಗದಲ್ಲಿ ರಾಜಾ ಮಿಲ್ ತೆರೆಯಲಾಗಿತ್ತು. ಮಿಲ್ ಮುಚ್ಚಿದ ಬಳಿಕ ಆ ಜಾಗವನ್ನು ರಾಷ್ಟ್ರೀಯ ಜವಳಿ ನಿಗಮ (ಎನ್‌ಟಿಸಿ) ವಶಕ್ಕೆ ಪಡೆದುಕೊಂಡಿತು. ಬಳಿಕ ಎನ್‌ಟಿಸಿ ಅದನ್ನು ಹರಾಜು ಹಾಕಿದ್ದು, ಹಮಾರಾ ಶೆಲ್ಟರ್ಸ್ ಪ್ರೈವೇಟ್‌ ಲಿಮಿಟೆಡ್‌ ಈ ಜಾಗವನ್ನು ಖರೀದಿಸಿದೆ. ಆ ಪ್ರಕಾರ 13 ಎಕರೆ 1 ಗುಂಟೆ ಜಾಗ ಮಾತ್ರ ಹಮಾರಾ ಶೆಲ್ಟರ್ಸ್‌ಗೆ ಸೇರಿದ್ದು, ಇದಲ್ಲದೆ 4 ಎಕರೆ 28 ಗುಂಟೆ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಅದನ್ನು ವಶಕ್ಕೆ ಪಡೆದುಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದರು’
ಎಂದು ಬಿಬಿಎಂಪಿ ಅಧಿಕಾರಿಗಳು ವಿವರಿಸಿದರು.

ಸರ್ವೆ ಮುಗಿದಿದೆ: ಆಯುಕ್ತ

‘ಮಂತ್ರಿ ಮಾಲ್ ಮತ್ತು ಅಪಾರ್ಟ್‌ಮೆಂಟ್ ಸಮುಚ್ಚಯ ಇರುವ ಜಾಗದಲ್ಲಿ ಸರ್ವೆ ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ಮುಗಿಸಿದ್ದಾರೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರುಹೇಳಿದರು.

‘ಮೊದಲಿಗೆ ನಿವಾಸಿಗಳು ಅವಕಾಶ ನೀಡಲಿಲ್ಲ. ಕಾನೂನಿನ ಬಗ್ಗೆ ವಿವರಣೆ ನೀಡಿದ ಬಳಿಕ ಅವಕಾಶ ಮಾಡಿಕೊಟ್ಟರು. ಪಾಲಿಕೆ ಜಾಗ ಎಷ್ಟಿದೆ, ಎಲ್ಲಿದೆ, ಅಲ್ಲಿ ಯಾವ ಕಟ್ಟಡಗಳಿವೆ ಎಂಬುದು ಗೊತ್ತಾಗಿದೆ. ಈ ಸಂಬಂಧ ವಿಸ್ತೃತ ವರದಿಯನ್ನು ಸರ್ವೆ ಸಿಬ್ಬಂದಿ ಎರಡು–ಮೂರು ದಿನಗಳಲ್ಲಿ ‌ನೀಡಲಿದ್ದಾರೆ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅನುಮತಿ ನೀಡಿಲ್ಲವೇ?

‘ಹರಾಜಿನಲ್ಲಿ ಖರೀದಿಸಿರುವ ಜಮೀನಿನಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಾಣವಾಗಿದೆ. ಬಿಬಿಎಂಪಿಯ ಅನುಮತಿ ಪಡೆದೇ ನಿರ್ಮಾಣವಾಗಿರುವ ಕಟ್ಟಡವನ್ನು ಅಕ್ರಮ ಎನ್ನುವುದು ಹೇಗೆ’ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರಶ್ನಿಸಿದರು.

‘ಸರ್ಕಾರಿ ಜಾಗವಾಗಿದ್ದರೆ ಕಟ್ಟಡ ನಿರ್ಮಾಣಕ್ಕೆ ಅನುಮತಿಯನ್ನು ಬಿಬಿಎಂಪಿ ಏಕೆ ನೀಡಿತು? ಅಪಾರ್ಟ್‌ಮೆಂಟ್‌ನಲ್ಲಿರುವ 427 ಮನೆಯವರೂ ದಾಖಲೆಗಳನ್ನು ನೋಡಿ, ಬ್ಯಾಂಕ್ ಸಾಲ ಪಡೆದು ಫ್ಲ್ಯಾಟ್ ಖರೀದಿ ಮಾಡಿದ್ದೇವೆ. ತೆರವಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವುಗೊಳಿಸಿ ನಂತರ ಅಧಿಕಾರಿಗಳು ಸರ್ವೆಗೆ ಬರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT