ಗುರುವಾರ , ಫೆಬ್ರವರಿ 2, 2023
26 °C

ಖಾಸಗಿ ಶಾಲಾ ಶುಲ್ಕ ನಿಗದಿ ಸರ್ಕಾರಕ್ಕೆ ಅವಕಾಶ ಇಲ್ಲ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಅನುದಾನ ರಹಿತ ಶಾಲೆಗಳು ರಾಜ್ಯ ಸರ್ಕಾರ ನಿಗದಿಪಡಿಸಿದ ಕ್ರಮವನ್ನು ಹೊರತುಪಡಿಸಿ ಇತರೆ ಕಾರಣಗಳಿಗೆ ಶುಲ್ಕ ಪಡೆಯುವುದನ್ನು ನಿಷೇಧಿಸುವ ಕರ್ನಾಟಕ ಶಿಕ್ಷಣ ಕಾಯ್ದೆ–1983ರ ಕಲಂ 48 ಅನ್ನು ಹೈಕೋರ್ಟ್, ಅಸಾಂವಿಧಾನಿಕ ಎಂದು ಘೋಷಿಸಿದೆ. ಇದರಿಂದಾಗಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಶುಲ್ಕ ವಿಧಿಸುವುದನ್ನು ನಿಯಂತ್ರಿಸುವುದಕ್ಕೆ ಸರ್ಕಾರಕ್ಕಿದ್ದ ಅಧಿಕಾರ ರದ್ದುಗೊಂಡಂತಾಗಿದೆ.

ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಹಾಗೂ ಇತರ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ‘ಪೂರ್ವ ಪ್ರಾರ್ಥಮಿಕ ಅವಧಿಗೆ ಶುಲ್ಕ ವಿಧಿಸುವುದು ಮತ್ತು ವಿಶೇಷ ಅಭಿವೃದ್ಧಿ ಶುಲ್ಕ ಸಂಗ್ರಹಿಸುವುದನ್ನು ನಿಯಂತ್ರಿಸಬಹುದಾದ 1995 ಮತ್ತು 1999ರಲ್ಲಿ ಅನುಷ್ಠಾನಕ್ಕೆ ತಂದಿರುವ ನಿಯಮಗಳು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ‘ ಎಂದು ಹೇಳಿದೆ. 

‘ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಮತ್ತು ಅವರ ಸುರಕ್ಷತೆ ಕಾಪಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ಅದರ ಉದ್ಯೋಗಿಗಳ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ನೀಡುವ ಕಲಂ 5ಎ, ಅನುದಾನ ರಹಿತ ಶಾಲೆಗಳನ್ನು ನಿಯಂತ್ರಿಸುವ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ಅಧಿಕಾರ ಒದಗಿಸುವ ಕಲಂ 2(11ಎ), ನಿಗದಿಗಿಂತಲೂ ಹೆಚ್ಚುವರಿ ಶುಲ್ಕ ಪಡೆಯುವುದನ್ನು ನಿಯಂತ್ರಿಸುವ ಕಲಂ 48 ಅನ್ನು ಉಲ್ಲಂಘಿಸುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ  ₹ 10 ಲಕ್ಷದವರೆಗೂ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಕಲಂ 124 ಎ ಅನ್ನು ಅಸಾಂವಿಧಾನಿಕ’  ಎಂದು ಸಾರಿದೆ. ಕರ್ನಾಟಕ ಅನುದಾನ ರಹಿತ ಶಾಲೆಗಳ ನಿರ್ವಹಣಾ ಸಂಘ (ಕುಸ್ಮಾ) 1995ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ, 2022ರ ಡಿಸೆಂಬರ್ 1 ರಂದು ಕರ್ನಾಟಕ ಶಿಕ್ಷಣ ಕಾಯ್ದೆ–1983ರ ಹಲವು ಕಲಂಗಳನ್ನು ಅಸಾಂವಿಧಾನಿಕ ಎಂದು ಘೋಷಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು