ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕೋವಿಡ್‌ ಸೋಂಕು ದೃಢಪಟ್ಟವರಿಗೆ ಮುದ್ರೆ: ಸಚಿವ ಸುಧಾಕರ್ ಸೂಚನೆ‌

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್‌ ಸೂಚನೆ
Last Updated 25 ಮಾರ್ಚ್ 2021, 11:29 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿರುವುದರಿಂದ ಈ ಸೋಂಕು ದೃಢಪಟ್ಟಿರುವ ಎಲ್ಲರಿಗೂ ಮುದ್ರೆ (ಸೀಲ್) ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಚಿವರು ಅಧಿಕಾರಿಗಳ ಜೊತೆ ಗುರುವಾರ ಸಮಾಲೋಚನಾ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘20 ರಿಂದ 40 ವರ್ಷದೊಳಗಿರುವವರಲ್ಲೂ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. 70 ವರ್ಷ ಮೇಲ್ಪಟ್ಟವರಲ್ಲಿ ಗಂಭೀರ ಪ್ರಕರಣಗಳು ಹೆಚ್ಚಾಗುತ್ತಿವೆ. ರೋಗ ಲಕ್ಷಣ ಇಲ್ಲದ ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ. ಅಂತಹವರು ಹೊರಗಡೆ ಓಡಾಟ ಮಾಡಬಾರದೆಂಬ ಉದ್ದೇಶದಿಂದ ಅಕವರಿಗೆ ಮುದ್ರೆ ಹಾಕಲಾಗುತ್ತದೆ’ ಎಂದು ಸಮರ್ಥಿಸಿಕೊಂಡರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿವೆ. ಬುಧವಾರ ಸುಮಾರು 1,400 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಾಲ್ಕು ತಿಂಗಳುಗಳಲ್ಲಿ ಮೊದಲ ಬಾರಿ ಇಷ್ಟೊಂದು ಪ್ರಕರಣಗಳು ಕಂಡುಬಂದಿವೆ. ಈ ಪೈಕಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೋವಿಡ್ ಉಲ್ಭಣವಾಗುವುದನ್ನು ನಿಯಂತ್ರಿಸಲು ಪಾಲಿಕೆ ಕ್ರಮವಹಿಸುತ್ತಿದೆ’ ಎಂದರು.

‘ನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ. ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಕುಟುಂಬದ ಉಳಿದೆ ಸದಸ್ಯರಿಗೂ ಅದು ಹರಡುತ್ತಿದೆ. ಹಾಗಾಗಿ ನಾಗರಿಕರೆಲ್ಲರೂ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು’ ಎಂದರು.

‘ನಗರದ ಮಾರುಕಟ್ಟೆ, ಚಿತ್ರಮಂದಿರ, ಬಸ್ ನಿಲ್ದಾಣ, ರೈಲು ನಿಲ್ದಾಣ, ಮದುವೆ ಮಂಟಪ, ಧಾರ್ಮಿಕ ಸ್ಥಳ, ಶಾಲಾ-ಕಾಲೇಜು ಆವರಣ ಮುಂತಾದೆಡೆ ಹೆಚ್ಚು ಜನಸಂದಣಿ ಇರುವ ಕಡೆ ಮಾರ್ಷಲ್‌ಗಳು ಕೋವಿಡ್‌ ನಿಯಂತ್ರಣ ನಿಯಮ ಪಾಲನೆ ಬಗ್ಗೆ ನಿಗಾ ವಹಿಸಲಿದ್ದಾರೆ. ಕನಿಷ್ಠ 2 ಮೀ ಅಂತರ ಕಾಪಾಡದಿದ್ದರೆ, ಮಾಸ್ಕ್ ಧರಿಸದೇ ಇದ್ದರೆ ದಂಡ ವಿಧಿಸಲಿದ್ದಾರೆ. ನಗರದಲ್ಲಿ ಯಾವುದಾದರು ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ ಕೋವಿಡ್ ನಿಯಮ ಪಾಲನೆ ಮಾಡದಿರುವುದು ಕಂಡುಬಂದರೆ ಆಯೋಜಕರನ್ನೂ ಹೊಣೆಗಾರರನ್ನಾಗಿಸಿ, ಅವರಿಗೂ ದಂಡ ವಿಧಿಸಲಾಗುವುದು. ಯಾವುದೇ ಕಾರ್ಯಕ್ರಮಗಳಲ್ಲಿ ಅತವಾ ಸಮಾರಂಭಗಳಲ್ಲಿ ತೆರೆದ ಸಭಾಂಗಣದಲ್ಲಿ 500 ಮಂದಿ ಹಾಗೂ ಮುಚ್ಚಿದ ಸಭಾಂಗಣಗದಲ್ಲಿ 200 ಮಂದಿ ಮಾತ್ರ ಭಾಗವಹಿಸಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಆರ್ಟಿಪಿಸಿಆರ್‌ ಪರೀಕ್ಷೆ ವರದಿ ಕಡ್ಡಾಯ:

‘ನಗರದಲ್ಲಿ ಪತ್ತೆಯಾದ ಶೇ. 60ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಹೊರರಾಜ್ಯಗಳಿಂದ ಬಂದವರಲ್ಲೇ ಕಾಣಿಸಿಕೊಂಡಿದೆ. ಹಾ‌ಗಾಗಿ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಇಲ್ಲಿಯೇ ವಾಸಿಸುವವರು ಅಥವ ಅನೇಕ ದಿನ ಉಳಿದುಕೊಳ್ಳುವವರು ಏಪ್ರಿಲ್ 1 ರಿಂದ ಕಡ್ಡಾಯವಾಗಿ ಆರ್ಟಿಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕು ದೃಢಪಡದ ವರದಿಯ ಪ್ರತಿ ತರುವುದು ಕಡ್ಡಾಯ’ ಎಂದು ಸಚಿವರು ಸ್ಪಷ್ಪಪಡಿಸಿದರು.

ವಾರ್ಡ್‌ಗೊಂದು ಆಂಬ್ಯುಲೆನ್ಸ್ ನಿಯೋಜನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕಣಗಳು ಕ್ರಮೇಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿ ವಾರ್ಡ್‌ಗೆ ತಲಾ ಒಂದು ಆಂಬ್ಯುಲೆನ್ಸ್ ನಿಯೋಜನೆ ಮಾಡಲಾಗಿದೆ. ಸೋಂಕು ಪತ್ತೆ ಪ್ರಮಾಣ ನೋಡಿಕೊಂಡು ಅವಶ್ಯಕ್ಕನುಗುಣವಾಗಿ ಹೆಚ್ಚಿನ ಆಂಬ್ಯುಲೆನ್ಸ್ ನಿಯೋಜನೆ ಮಾಡಲು ಪಾಲಿಕೆ ಕ್ರಮವಹಿಸಲಿದೆ ಎಂದು ತಿಳಿಸಿದರು.

‘ಕ್ವಾರಂಟೈನ್ ವಾಚ್’ ತಂತ್ರಾಂಶದ ಮೂಲಕ ನಿಗಾ

ನಗರದಲ್ಲಿ ಸೋಂಕು ದೃಢಪಟ್ಟವರ ಮೇಲೆ ನಿಗಾವಹಿಸಲು ಕ್ವಾರಂಟೈನ್ ವಾಚ್ ತಂತ್ರಾಂಶವಿದೆ. ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗುವವರ ಚಲನವಲನದ ಬಗ್ಗೆ ಈ ತಂತ್ರಾಂಶದ ಮೂಲಕ ನಿಗಾ ವಹಿಸಲು ಕ್ರಮಕೈಗೊಳ್ಳಲಾಗುತ್ತದೆ. ಅವರಿಗೆ ಸರಿಯಾದ ಚಿಕಿತ್ಸೆ ನೀಡಲು ಕ್ರಮವಹಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು.

ಪರಿಣಾಮಕಾರಿಯಾಗಿ ಲಸಿಕೆ ನೀಡಲು ಕ್ರಮ:

ಪಾಲಿಕೆ ವ್ಯಾಪ್ತಿಯಲ್ಲಿ 45 ವರ್ಷ ಮೇಲ್ಪಟ್ಟವರ ಸಂಖ್ಯೆ 25 ಲಕ್ಷಕ್ಕೂ ಅಧಿಕ ಇದೆ. ಎಲ್ಲರಿಗೂ ಲಸಿಕೆ ನೀಡಲು ಕ್ರಮವಹಿಸಲಾಗುವುದು. ಇದಕ್ಕಾಗಿ ನಗರದಲ್ಲಿ 450 ಕೇಂದ್ರಗಳಲ್ಲಿ ಪ್ರತಿನಿತ್ಯ 80,000 ಮಂದಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಅಷ್ಟು ಪ್ರಮಾಣದಲ್ಲಿ ಲಸಿಕೆ ಪಡೆಯಲು ನಾಗರಿಕರು ಬರುತ್ತಿಲ್ಲ. ಆದ್ದರಿಂದ ನಾಗರಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಎಲ್ಲಾ ಆಸ್ಪತ್ರೆಗಳಲ್ಲೂ ಸಹಾಯಕೇಂದ್ರ, ಕಿಯೋಸ್ಕ್ ಹಾಗೂ ನೋಡಲ್ ಅಧಿಕಾರಿಯನ್ನು ನಿಯೋಜನೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

24 ಗಂಟೆಯಲ್ಲಿ ಪರೀಕ್ಷಾ ವರದಿ:

ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಯ ವರದಿಯನ್ನು 24 ಗಂಟೆಯೊಳಗೆ ಪಡೆಯಬೇಕು. ಸೋಂಕಿತರ ನೇರ ಸಂಪರ್ಕಕ್ಕೆ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಕನಿಷ್ಟ 20 ಪ್ರಾಥಮಿಕ ಹಾಗೂ ದ್ವಿಯ ಸಂಪರ್ಕಿತರನ್ನು ಪತ್ತೆಹಚ್ಚಿ ಐಸೋಲೇಟ್ ಮಾಡಲು ಕ್ರಮವಹಿಸಲಾಗುತ್ತಿದೆ ಆರೋಗ್ಯ ಸಚಿವರು ತಿಳಿಸಿದರು.

ನಾಗರಿಕರ ಸಹಕಾರ ಅತ್ಯಗತ್ಯ:

ನಗರದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗುವುದನ್ನು ತಡೆಯಬೇಕಾದರೆ ನಾಗರಿಕರ ಸಹಕಾರ ಬಹಳ ಮುಖ್ಯ. ಆದ್ದರಿಂದ ಎಲ್ಲಾ ನಾಗರಿಕರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜೊತೆಗೆ ಕಾರ್ಯಕ್ರಮಗಳು, ಸಭೆ ಮಾರಂಭಗಳು, ಜನ ಸಂದಣಿ ಪ್ರದೇಶಗಳಿಗೆ ಅನಗತ್ಯವಾಗಿ ಹೋಗುವುದನ್ನು ಕನಿಷ್ಠ ಪಕ್ಷ ಎರಡು ತಿಂಗಳ ಕಾಲ ಕಡಿಮೆ ಮಾಡಿ. ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಿ ಬೆಂಗಳೂರನ್ನು ಕೋವಿಡ್ ಮುಕ್ತ ನಗರವನ್ನಾಗಿಸೋಣ ಎಂದು ಆರೋಗ್ಯ ಸಚಿವರು ಕೋರಿದರು.

ಹಾಸಿಗೆಗಳ ಸಂಖ್ಯೆ ಪೋರ್ಟಲ್‌ನಲ್ಲಿ ಲಭ್ಯ:

ನಗರದಲ್ಲಿರುವ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಎಷ್ಟು ಲಭ್ಯ ಇವೆ, ತುರ್ತು ನಿಗಾ ಘಟಕಗಳಲ್ಲಿ (ಐಸಿಯು) ಎಷ್ಟು ಹಾಸಿಗೆಗಳಿವೆ ಎಂಬುದನ್ನು ತಿಳಿಯಲು ಸರಳೀಕೃತ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರ ಮಾಹಿತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಪೋರ್ಟಲ್ ಲಭ್ಯವಾಗಲಿದೆ’ ಎಂದು ಡಾ‌.ಸುಧಾಕರ್‌ ತಿಳಿಸಿದರು.

ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್,‘ನಗರದ ದಾಸರಹಳ್ಳಿ ಹಾಗೂ ಆರ್.ಆರ್.ನಗರ ವಲಯ ಹೊರತುಪಡಿಸಿ ಉಳಿದೆಲ್ಲಾ ವಲಯಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ. ಹೆಚ್ಚಿನ ಕಡೆ ಸೋಂಕು ಹೊರ ರಾಜ್ಯದಿಂದ ಬಂದವರಿಂದಲೇ ಹರಡಿವೆ. ಸೋಂಕು ಪತ್ತೆ ಪ್ರಮಾಣದಲ್ಲಿ ಶೇ. 70 ರಷ್ಟು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲೇ ಕಂಡುಬಂದಿದೆ. ಪಾಲಿಕೆ ವ್ಯಾಪ್ತಿಯ ಕೊಳಗೇರಿಗಳಲ್ಲಿ ಹೆಚ್ಚು ಕೋವಿಡ್ ಪ್ರಕಣಗಳು ಕಂಡುಬರುತ್ತಿಲ್ಲ’ ಎಂದು ಮಾಹಿತಿ ನೀಡಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಬುಧವಾರ 51,000 ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದವರ ಮೇಲೆ ದಂಡ ವಿಧಿಸಲು 216 ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗಿದೆ’ ಎಂದು ವಿವರಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಾವೇದ್‌ ಅಖ್ತರ್, ಇಲಾಖೆಯ ಆಯುಕ್ತ ಡಾ.ತ್ರಿಲೋಕಚಂದ್ರ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT