ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ಹೆಚ್ಚುವರಿ ಅಕ್ಕಿ ವಿತರಣೆ ಪ್ರಯತ್ನ: ಸಚಿವ ಕೆ.ಎಚ್. ಮುನಿಯಪ್ಪ

Published 5 ಆಗಸ್ಟ್ 2023, 0:30 IST
Last Updated 5 ಆಗಸ್ಟ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಎಲ್ಲ ಸದಸ್ಯರಿಗೆ ಪ್ರತಿ ತಿಂಗಳಿಗೆ ತಲಾ ಐದು ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ಸೆಪ್ಟೆಂಬರ್ ತಿಂಗಳಿನಿಂದಲೇ ವಿತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಅಕ್ಕಿ ಪೂರೈಕೆಗೆ ಆಸಕ್ತಿ ವ್ಯಕ್ತಪಡಿಸಿವೆ. ಹೆಚ್ಚಿನ ದರದಲ್ಲಿ ಖರೀದಿ ಸಾಧ್ಯವಿಲ್ಲ. ಆದ್ದರಿಂದ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್‌) ಅಡಿಯಲ್ಲಿ ನಿಗದಿಪಡಿಸುವ ದರದಲ್ಲಿ ಅಕ್ಕಿ ಪೂರೈಸಿದರೆ ಖರೀದಿಗೆ ನಾವು ಸಿದ್ಧ ಎಂದು ಎರಡೂ ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದೇವೆ’ ಎಂದರು.

ಜುಲೈ ತಿಂಗಳಲ್ಲಿ ಒಂದು ಕೋಟಿ ಕುಟುಂಬಗಳಿಗೆ ₹ 566 ಕೋಟಿಯನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗಿದೆ. ಹೆಚ್ಚು ಸಮಯ ನಗದು ಪಾತಿಸುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಅಕ್ಕಿ ಖರೀದಿಗೆ ಎಲ್ಲ ಪ್ರಯತ್ನಗಳೂ ನಡೆದಿವೆ. ಎಫ್‌ಸಿಐ ದರಕ್ಕೆ ಅಕ್ಕಿ ಪೂರೈಸಲು ಪೂರೈಕೆದಾರರು ಒಪ್ಪದೇ ಇದ್ದರೆ ಮಾತ್ರ ಕೆಲವು ತಿಂಗಳ ಕಾಲ ವಿಳಂಬವಾಗಬಹುದು ಎಂದು ಹೇಳಿದರು.

5.32 ಲಕ್ಷ ಕುಟುಂಬಗಳು ಮೂರು ತಿಂಗಳಲ್ಲಿ ಯಾವುದೇ ಪಡಿತರ ಪಡೆದಿಲ್ಲ. 19.27 ಪಡಿತರ ಚೀಟಿಗಳಿಗೆ ಆಧಾರ್‌ ಮತ್ತು ಬ್ಯಾಂಕ್‌ ಖಾತೆಗಳ ವಿವರ ಜೋಡಣೆಯಾಗಿಲ್ಲ. ಈ ಎಲ್ಲವೂ ಅನರ್ಹ ಪಡಿತರ ಚೀಟಿಗಳು ಎಂಬ ಅನುಮಾನವಿದೆ ಎಂದರು.

ಅಂಚೆ ಇಲಾಖೆಯ ಸಹಯೋಗದಲ್ಲಿ 170 ನ್ಯಾಯಬೆಲೆ ಅಂಗಡಿಗಳಲ್ಲಿ ಶಿಬಿರ ನಡೆಸಿ ಪಡಿತರ ಚೀಟಿದಾರರ ಬ್ಯಾಂಕ್‌ ಖಾತೆ ತೆರೆಯಲು ವ್ಯವಸ್ಥೆ ಮಾಡಲಾಗಿತ್ತು. ಈವರೆಗೆ 1.19 ಲಕ್ಷ ಪಡಿತರ ಚೀಟಿದಾರರ ಬ್ಯಾಂಕ್‌ ಖಾತೆ ತೆರೆಯಲಾಗಿದೆ ಎಂದು ತಿಳಿಸಿದರು.

ಪಡಿತರ ಚೀಟಿ ವಿತರಣೆಗೆ ಕ್ರಮ: ಜುಲೈ ಅಂತ್ಯಕ್ಕೆ ಬಿ‍ಪಿಎಲ್‌ ಪಡಿತರ ಚೀಟಿ ಕೋರಿರುವ 2.95 ಲಕ್ಷ ಅರ್ಜಿಗಳು ಬಾಕಿ ಇವೆ. ಅವುಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ಶೀಘ್ರದಲ್ಲಿ ಪಡಿತರ ಚೀಟಿಗಳನ್ನು ವಿತರಿಸಲಾಗುವುದು. ಕೋರಿಕೆ ಆಧರಿಸಿ ಬಡತನ ರೇಖೆಗಿಂತ ಮೇಲಿರುವ (ಎಪಿಎಲ್‌) ಪಡಿತರ ಚೀಟಿಗಳ ವಿತರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಶ್ರೀಮಂತರು ಅಕ್ರಮವಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ದೂರುಗಳಿವೆ. ಈ ಕುರಿತು ತನಿಖೆ ನಡೆಸಲಾಗುವುದು. ಅನರ್ಹರು ಹೊಂದಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುವುದು. ಬಾಡಿಗೆ ಉದ್ದೇಶಕ್ಕೆ ನಾಲ್ಕು ಚಕ್ರದ ವಾಹನ ಹೊಂದಿರುವವರಿಗೆ ಮಾತ್ರ ಬಿಪಿಎಲ್‌ ಪಡಿತರ ಚೀಟಿ ನೀಡಬಹುದು. ಸ್ವಂತ ಬಳಕೆಯ ಕಾರು ಹೊಂದಿವರಿಗೆ ನೀಡಿದ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT