ಶನಿವಾರ, ಆಗಸ್ಟ್ 20, 2022
21 °C

ಚಿಕ್ಕಜಾಲ: ಪಂಚಾಯಿತಿ ಚುನಾವಣೆಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಯಲಹಂಕ ತಾಲ್ಲೂಕಿನ ಚಿಕ್ಕಜಾಲ ಗ್ರಾಮ ಪಂಚಾಯಿತಿ ಚುನಾವಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಚಿಕ್ಕಜಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಕ್ಷೇತ್ರಗಳಿದ್ದು, ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳನ್ನು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಅಕ್ರಮವಾಗಿ ಮತ್ತು ಅವೈಜ್ಞಾನಿಕವಾಗಿ ಸೇರ್ಪಡೆ ಮಾಡಲಾಗಿದೆ ಎಂದು ಚಿಕ್ಕಜಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀಪತಿ ಹಾಗೂ ಸ್ಥಳೀಯರು ಯಲಹಂಕ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದರು.

ದೂರನ್ನು ಪರಿಶೀಲಿಸಿ ವಿಶೇಷ ತಹಶೀಲ್ದಾರ್, ಕಂದಾಯ ಅಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ, 152-ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿಗಳು ನೀಡಿದ್ದ ವರದಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು.

ಒಂದು ಭಾಗದ ಮತದಾರರನ್ನು ಮತ್ತೊಂದು ಭಾಗಕ್ಕೆ ವ್ಯಾಪ್ತಿ ಮೀರಿ ಸೇರ್ಪಡೆಗೊಂಡಿರುವುದು ಕಂಡುಬಂದಿದ್ದು, ಮತದಾರರ ಪಟ್ಟಿಯು ಹಲವಾರು ಲೋಪದೋಷಗಳಿಂದ ಕೂಡಿದೆ. ವ್ಯತ್ಯಾಸಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಿಸಿದಲ್ಲಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಕ್ರಮ ಸಂಖ್ಯೆಯಲ್ಲೂ ವ್ಯತ್ಯಾಸ ಉಂಟಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವರದಿ ಅನ್ವಯ ಚುನಾವಣಾ ಆಯೋಗವು,’ ಈ ಎಲ್ಲ ಗೊಂದಲಗಳಿಂದಾಗಿ ಚುನಾವಣಾ ಪ್ರಕ್ರಿಯೆಗಳು ಉಲ್ಲಂಘನೆಯಾಗುವ ಸಾಧ್ಯತೆಗಳಿವೆ. ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸದೆ, ಚುನಾವಣೆ ನಡೆಸುವುದು ಸಮಂಜಸವಲ್ಲದ ಕಾರಣ ಚುನಾವಣೆ ಪ್ರಕ್ರಿಯೆಗಳನ್ನು ತಕ್ಷಣದಿಂದಲೇ ತಡೆಹಿಡಿಯಲಾಗಿದೆ’ ಎಂದು ಆದೇಶ ಹೊರಡಿಸಿದೆ.

ಮತದಾರರ ಪಟ್ಟಿಯಲ್ಲಿದ್ದ ಲೋಪದೋಷಗಳನ್ನು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಚಿಕ್ಕಜಾಲ ಗ್ರಾಮಸ್ಥರು ಚಿಕ್ಕಜಾಲದ ಉಪತಹಶೀಲ್ದಾರ್ ಕಚೇರಿ ಹಾಗೂ ಯಲಹಂಕದ ತಹಶೀಲ್ದಾರ್ ಕಚೇರಿಗಳ ಎದುರು ಪ್ರತಿಭಟನೆ ನಡೆಸಿದ್ದರು.

ಹೋರಾಟಕ್ಕೆ ಸ್ಪಂದಿಸಿ, ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಚುನಾವಣೆಯನ್ನು ತಡೆಹಿಡಿದು, ಆದೇಶ ಹೊರಡಿಸುವ ಮೂಲಕ ಜನರಿಗೆ ನ್ಯಾಯ ನೀಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಚಿಕ್ಕಜಾಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ನಗರಸಭೆಗೆ ಅಗ್ರಹಿಸಿ ಗ್ರಾ ,ಪಂ.ಚುನಾವಣೆ ಬಹಿಷ್ಕಾರ
ಹೆಸರಘಟ್ಟ: ದಾಸನಪುರ ಹೋಬಳಿಯ ಆಲೂರು ಗ್ರಾಮ ಪಂಚಾಯಿತಿಯನ್ನು ಮಾದನಾಯಕನಹಳ್ಳಿ ನಗರಸಭೆಗೆ ಸೇರ್ಪಡೆಗೊಳಿಸಬೇಕೆಂದು ಅಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ.
ಪಂಚಾಯಿತಿ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆ ದಿನವಾಗಿತ್ತು. 27 ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ 104 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಎಲ್ಲ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದು ನಗರಸಭೆಗೆ ಸೇರಿಸಬೇಕೆಂದು ಆಗ್ರಹಿಸಿದರು.

ಅಲೂರು ಜಿಲ್ಲಾ ಪಂಚಾಯಿತಿ ಸದಸ್ಯ ರವಿಕುಮಾರ್ ಮಾತನಾಡಿ, ’ಆಲೂರು ಗ್ರಾಮ ಪಂಚಾಯಿತಿಗೆ ನಗರಸಭೆಗೆ ಸೇರಲು ಬೇಕಾದ ಎಲ್ಲ ಅರ್ಹತೆಗಳಿವೆ. ಗ್ರಾಮಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಜನಸಂಖ್ಯೆ ಹೆಚ್ಚಿದ್ದು ಜನರಿಗೆ ಪ್ರಾಥಮಿಕ ಸೌಲಭ್ಯ ನೀಡಲು ಅನುದಾನದ ಕೊರತೆಯಾಗುತ್ತಿದೆ. ನಗರಸಭೆಗೆ ಸೇರಿಸಿದರೆ ಗ್ರಾಮಗಳಿಗೆ ಹೆಚ್ಚಿನ ಅನುದಾನ ತಂದು ಜನರಿಗೆ ಅನೇಕ ಸೌಲಭ್ಯಗಳನ್ನು ನೀಡಬಹುದು‘ ಎಂದು ಹೇಳಿದರು.

‘ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಕೂತು ಆಲೋಚನೆ ಮಾಡಿ ಚುನಾವಣೆಯ ಬಹಿಷ್ಕಾರದ ನಿರ್ಧಾರ ಮಾಡಿದ್ದೇವೆ‘ ಎಂದು ಬಿಜೆಪಿ ಮುಖಂಡ ಅರುಣ್ ಕುಮಾರ್ ಹೇಳಿದರು. ’ಆಲೂರು ಗ್ರಾಮ ಪಂಚಾಯಿತಿಯ ಹೆಗ್ಗಡದೇವನ ಕೋಟೆ, ಆಲೂರು, ತಮ್ಮೆನಹಳ್ಳಿ ಗ್ರಾಮಗಳಿಂದ 27 ಗ್ರಾಮ ಪಂಚಾಯಿತಿ ಸ್ಥಾನಗಳಿವೆ. ಈ ಸ್ಥಾನಗಳಿಗೆ 104 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಲ್ಕು ನಾಮಪತ್ರಗಳು ತಿರಸ್ಕಾರಗೊಂಡಿದ್ದವು. ಕುದುರೆಗೆರೆ ಗ್ರಾಮದ ವಾರ್ಡ್‌ ನಂ 1 ಮತ್ತು 2ರಿಂದ 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರು ನಾಮಪತ್ರ ಹಿಂಪಡೆದಿಲ್ಲ. ಹಾಗಾಗಿ ಕುದುರೆ ಗ್ರಾಮದಲ್ಲಿ ಚುನಾವಣೆ ನಡೆಯಲಿದೆ‘ ಎಂದು ಚುನಾವಣಾಧಿಕಾರಿ ಸಂತೋಷ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು