ಬುಧವಾರ, ಆಗಸ್ಟ್ 10, 2022
21 °C

₹ 12.60 ಲಕ್ಷ ದುರ್ಬಳಕೆ; ಗ್ರಾ.ಪಂ. ಅಧ್ಯಕ್ಷ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮ ಪಂಚಾಯಿತಿಗೆ ತೆರಿಗೆ ರೂಪದಲ್ಲಿ ಬಂದಿದ್ದ ₹ 12.60 ಲಕ್ಷವನ್ನು ನಕಲಿ ಖಾತೆಗೆ ವರ್ಗಾಯಿಸಿಕೊಂಡು ಸ್ವಂತಕ್ಕೆ ಬಳಸಿ ದುರ್ಬಳಕೆ ಮಾಡಿದ್ದ ಆರೋಪದಡಿ ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘2019ರ ಸೆಪ್ಟೆಂಬರ್‌ನಿಂದ 2020ರ ಫೆಬ್ರುವರಿವರೆಗಿನ ಅವಧಿಯಲ್ಲಾದ ಹಣದ ದುರ್ಬಳಕೆ ಬಗ್ಗೆ ಬಾಗಲೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅನ್ನಪೂರ್ಣೇಶ್ವರಿ ಅವರು ಸಂಜಯನಗರ ಠಾಣೆಗೆ ದೂರು ನೀಡಿದ್ದರು. ಅದು ನಮ್ಮ ಠಾಣೆಗೆ ವರ್ಗವಾಗಿತ್ತು. ಅದೇ ದೂರಿನಡಿ ಮುನೇಗೌಡ ಅವರನ್ನು ಬಂಧಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಬಾಗಲೂರು ಪೊಲೀಸರು ಹೇಳಿದರು.

‘ಬೆಂಗಳೂರು ಉತ್ತರ ತಾಲ್ಲೂಕಿನ ಬಾಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಓಎಫ್‌ಸಿ ಕೇಬಲ್ ಅಳವಡಿಸಲು ಜಿಯೊ ಡಿಜಿಟಲ್ ಫೈಬರ್ ಕಂಪನಿಯವರು ಅರ್ಜಿ ಸಲ್ಲಿಸಿದ್ದರು. ₹12.60 ಲಕ್ಷ ತೆರಿಗೆ ಪಾವತಿಸುವಂತೆ ಪಿಡಿಒ ಹೇಳಿದ್ದರು. ಆದರೆ, ಕಂಪನಿಯವರು ಹಣ ಪಾವತಿ ಮಾಡಿರಲಿಲ್ಲ. ಅನುಮತಿಯೂ ಸಿಕ್ಕಿರಲಿಲ್ಲ.’

‘ಇದರ ನಡುವೆಯೇ ಕಂಪನಿಯವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಬಲ್ ಅಳವಡಿಕೆ ಕೆಲಸ ಆರಂಭಿಸಿದ್ದರು. ಈ ಬಗ್ಗೆ ಪಿಡಿಒ ಪ್ರಶ್ನಿಸಿದಾಗ, ‘ತೆರಿಗೆ ಶುಲ್ಕವನ್ನು ಡಿ.ಡಿ ಮೂಲಕ ಪಾವತಿಸಿ ಅದರ ದಾಖಲೆಯುನ್ನು ಅಧ್ಯಕ್ಷ ಮುನೇಗೌಡ ಅವರಿಗೆ ನೀಡಿದ್ದೇವೆ’ ಎಂದು ಕಂಪನಿಯವರು ಹೇಳಿದ್ದರು. ಡಿ.ಡಿ ಪರಿಶೀಲಿಸಿದಾಗ, ಸಂಜಯನಗರದ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಪಿಡಿಒ ಹೆಸರಿನಲ್ಲಿ ನಕಲಿ ಖಾತೆ ಇರುವುದು ಗಮನಕ್ಕೆ ಬಂದಿತ್ತು’ ಎಂದು ಪೊಲೀಸರು ಹೇಳಿದರು.

‘ನಕಲಿ ದಾಖಲೆಗಳನ್ನು ನೀಡಿ ಪಿಡಿಒ ಹೆಸರಿನಲ್ಲಿ ಖಾತೆ ಸೃಷ್ಟಿಸಿದ್ದ ಆರೋಪಿ, ತೆರಿಗೆ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಸಂಗತಿಯನ್ನೂ ಪಿಡಿಒ ಅವರು ತಮ್ಮ ಹೇಳಿಕೆಯಲ್ಲೂ ದಾಖಲಿಸಿದ್ದಾರೆ’ ಎಂದೂ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.