ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿರೋಧ ಆಯ್ಕೆ ತ್ಯಜಿಸಿದ ಗ್ರಾ.ಪಂ ಸದಸ್ಯೆ

Last Updated 16 ಡಿಸೆಂಬರ್ 2020, 20:55 IST
ಅಕ್ಷರ ಗಾತ್ರ

ಹೆಸರಘಟ್ಟ: ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡದೇವನಪುರ ಗ್ರಾಮದ ಮಹಿಳಾ ಅಭ್ಯರ್ಥಿ ಸೌಮ್ಯಾ ಸಿ.ಅರುಣ್ ಕುಮಾರ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಆದರೆ, ಅವರು ಸದಸ್ಯತ್ವವನ್ನು ತ್ಯಜಿಸಿದ್ದಾರೆ.

ಮಾದನಾಯಕನಹಳ್ಳಿ ನಗರಸಭೆಗೆ ಆಲೂರು ಗ್ರಾಮ ಪಂಚಾಯಿತಿಯನ್ನು ಸೇರ್ಪಡೆಗೊಳಿಸಬೇಕೆಂದು ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿರುವ ಕಾರಣ ಅವರು ಈ ನಿರ್ಧಾರ ಮಾಡಿದ್ದಾರೆ. ಆಲೂರು ಗ್ರಾಮ ಪಂಚಾಯಿತಿಗೆ ಅವರು ನಾಲ್ಕು ವರ್ಷಗಳ ಕಾಲ
ಅಧ್ಯಕ್ಷೆಯಾಗಿದ್ದರು. ಹೆಗ್ಗಡದೇವನಪುರ ಗ್ರಾಮದಿಂದ ಕಳೆದ ಚುನಾವಣೆಯಲ್ಲೂ ಅವಿರೋಧವಾಗಿ ಆಯ್ಕೆಯಾಗಿದ್ದರು.

’ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಸಾಕಷ್ಟು ಅನುದಾನವನ್ನು ಆಲೂರು ಗ್ರಾಮ ಪಂಚಾಯಿತಿಗೆ ನೀಡಿದ್ದರು. ರಸ್ತೆ ಮತ್ತು ಕುಡಿಯುವ ನೀರಿಗೆ ನಾನು ಹೆಚ್ಚಿನ ಒತ್ತು ನೀಡಿದ್ದೆ. ಪಕ್ಷ ಭೇದ ಮರೆತು ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಾಣ ಮಾಡಿದ್ದೆವು. ಗ್ರಾಮಗಳ ಅಭಿವೃದ್ದಿ ದೃಷ್ಟಿಯಿಂದ ಚುನಾವಣೆ ಬಹಿಷ್ಕಾರ ಮಾಡಬೇಕಾಯಿತು. ಗ್ರಾಮದ ಅಭಿವೃದ್ಧಿಯೇ ಮುಖ್ಯ ಎಂಬ ಕಾರಣಕ್ಕೆ ಅವಿರೋಧ ಆಯ್ಕೆಯನ್ನು ತಿರಸ್ಕಾರ ಮಾಡಿದೆ‘ ಎಂದು ಸೌಮ್ಯಾ ಅರುಣ್ ಕುಮಾರ್ ತಿಳಿಸಿದರು.

‘ಉತ್ತಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂಬ ಕಾರಣಕ್ಕೆ ಸೌಮ್ಯಾ ಸದಸ್ಯತ್ವ ತಿರಸ್ಕರಿಸಿದರು. ಅವರ ಈ ನಡೆ ಮಾದರಿ’ ಎಂದು ನಿಸರ್ಗ ಬಡಾವಣೆ ನಿವಾಸಿ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಮತಕ್ಕಾಗಿ ಓಲೈಕೆ: ಡಾಬಾಗಳಲ್ಲಿ ಬಾಡೂಟ
ದಾಬಸ್ ಪೇಟೆ:
ಯುವ ಮತದಾರರನ್ನು ಸೆಳೆಯಲು ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ಡಾಬಾಗಳಲ್ಲಿ ಬಾಡೂಟ ಮಾಡಿಸುತ್ತಿದ್ದಾರಲ್ಲದೆ, ಮನೆಗಳಲ್ಲಿ ಔತಣಕೂಟಗಳನ್ನು ಏರ್ಪಡಿಸುತ್ತಿದ್ದಾರೆ.

ಮಧ್ಯಾಹ್ನ ಖಾಲಿಯೇ ಇರುತ್ತಿದ್ದ ದಾಬಸ್ ಪೇಟೆ ಸುತ್ತಮುತ್ತ ಇರುವ ಡಾಬಾಗಳು ಮಧ್ಯಾಹ್ನವೇ ಭರ್ತಿಯಾಗುತ್ತಿವೆ. ಸಂಜೆಯಾಗುತ್ತಲೇ ರಂಗೇರುತ್ತಿವೆ. ಇನ್ನು ಕೆಲವರು ಕಾರು ಮಾಡಿಕೊಂಡು ಯುವಕರು ಜೊತೆಗೆ ಮಧ್ಯ ವಯಸ್ಕರನ್ನೂ ಕರೆದುಕೊಂಡು ಡಾಬಾಗಳಿಗೆ ಹೋಗುತ್ತಿದ್ದಾರೆ.

ಮಾಂಸ ತಿನ್ನುವವರ ಮನೆಗಳಿಗೆ ಕೋಳಿಗಳನ್ನು ಕೂಡ ಅಭ್ಯರ್ಥಿಗಳು ನೀಡುತ್ತಿದ್ದಾರೆ. ಇದರಿಂದ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು ಅಭ್ಯರ್ಥಿಗಳು ಮದ್ಯವನ್ನು ಕೂಡ ಹಂಚುತ್ತಿದ್ದಾರೆ ಹೆಸರು ಬಹಿರಂಗಪಡಿಸಲು ಬಯಸದ ಮತದಾರರೊಬ್ಬರು ಹೇಳಿದರು.

ಮೊದಲ ಹಂತ: 1,17,383 ಅಭ್ಯರ್ಥಿಗಳು ಕಣದಲ್ಲಿ
ಬೆಂಗಳೂರು:
ಇದೇ 22ರಂದು ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿರುವ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯಿತಿಗಳಲ್ಲಿರುವ 48,048 ಸ್ಥಾನಗಳ ಪೈಕಿ, 43,238 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 4,377 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಆದರೆ 432 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ.

ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 1,64,555 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ, 1,57,735 ನಾಮಪತ್ರಗಳು ಕ್ರಮಬದ್ಧವಾಗಿವೆ. 40,352 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸು ಪಡೆದಿದ್ದಾರೆ. ಅಂತಿಮವಾಗಿ, 1,17,383 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT