ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಫೈಟ್‌ ಕಾರ್ಖಾನೆ ಮುಚ್ಚಲು ಎನ್‌ಜಿಟಿ ಆದೇಶ:ವೈಟ್‌ಫೀಲ್ಡ್‌ ನಿವಾಸಿಗಳಿಗೆ ಹರ್ಷ

ಮಾಲಿನ್ಯ ನಿಯಂತ್ರಣ ಮಂಡಳಿ ತೀರ್ಪಿಗೆ ಮನ್ನಣೆ
Last Updated 1 ಫೆಬ್ರುವರಿ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿರುವ ಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌ ಕಂಪನಿಯನ್ನು ಮುಚ್ಚುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು 2012ರಲ್ಲಿ ನೀಡಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ಪೀಠ ಎತ್ತಿ ಹಿಡಿದಿದೆ.

ದೆಹಲಿಯ ಮುಖ್ಯ ಪೀಠ ಈ ತೀರ್ಪನ್ನು ಜ. 28ರಂದು ನೀಡಿದೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಕರಣದ ವಿಚಾರಣೆ ನಡೆದಿದ್ದು 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯನ್ನು ಮುಚ್ಚಲು ಸ್ಥಳೀಯ ನಿವಾಸಿಗಳು ದಶಕಗಳಿಂದ ನಡೆಸಿದ್ದ ಹೋರಾಟ ಕೊನೆಗೂ ತಾರ್ಕಿಕ ಹಂತಕ್ಕೆ ಬಂದಿದೆ.

‘ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ವ್ಯಾಪಕವಾಗಿ ನಿಯಮ ಉಲ್ಲಂಘನೆ ಮಾಡಿದ ಈ ಕಾರ್ಖಾನೆಯನ್ನು ಮುಚ್ಚಬೇಕು’ ಎಂದು ಮಂಡಳಿ ಆದೇಶಿಸಿತ್ತು.

‘ಕಾರ್ಖಾನೆಯನ್ನು ಮುಚ್ಚುವುದಷ್ಟೇ ಅಲ್ಲ. ಅದರಿಂದ ಹೊರಹೊಮ್ಮಿದ ಹೊಗೆ, ರಾಸಾಯನಿಕ ಕಣಗಳಿಂದಾಗಿ ಅಲ್ಲಿ ಉಂಟಾದ ಮಾಲಿನ್ಯದ ಬಗ್ಗೆ ಬೇರೆ ಬೇರೆ ಸಂಸ್ಥೆಗಳ ಮೂಲಕ ಅಧ್ಯಯನ ನಡೆಸಬೇಕು’ ಎಂದು ಪೀಠ ಹೇಳಿದೆ.

ಮಂಡಳಿಯ ಆದೇಶವನ್ನು 2013ರಲ್ಲಿ ಕರ್ನಾಟಕ ರಾಜ್ಯ ಮೇಲ್ಮನವಿ ಪ್ರಾಧಿಕಾರವು ತಳ್ಳಿಹಾಕಿತ್ತು. ಕಾರ್ಖಾನೆಯನ್ನು ಮುಚ್ಚುವಂತೆ ಸ್ಥಳೀಯ ನಿವಾಸಿಗಳು ಸಾಕಷ್ಟು ದೂರು ನೀಡಿದ್ದರು. ಕಾನೂನು ಹೋರಾಟ ನಡೆದಿತ್ತು. 2018ರಲ್ಲಿ ಪ್ರಕರಣ ಹಸಿರು ನ್ಯಾಯಮಂಡಳಿಯ ದೆಹಲಿಯ ಮುಖ್ಯ ಪೀಠಕ್ಕೆ ವರ್ಗಾವಣೆಗೊಂಡಿತು.

‘ದಾಖಲೆಗಳ ಪ್ರಕಾರ ಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌ ಪರಿಸರ ಸಂರಕ್ಷಣೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿದೆ. ಹೀಗಾಗಿ ಪೀಠದ ಮೂವರು ನ್ಯಾಯಾಧೀಶರ ಪೈಕಿ 2;1ರ ಅಭಿಪ್ರಾಯ ಅನುಪಾತದ ಆಧಾರದಲ್ಲಿ ಈ ತೀರ್ಪು ಹೊರಬಂದಿದೆ.

‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿ ರಚಿಸಿ ಕಾರ್ಖಾನೆ ಪ್ರದೇಶದಲ್ಲಿ ಉಂಟಾದ ವಾಯು ಮಾಲಿನ್ಯದ ಪ್ರಮಾಣವನ್ನು ಅಳೆಯಬೇಕು. ಈ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಅಳೆಯುವ 10 ಕೇಂದ್ರಗಳನ್ನು ಸ್ಥಾಪಿಸಬೇಕು. ಈ ಪ್ರದೇಶದಲ್ಲಿ ಮಾಲಿನ್ಯ ಪ್ರಮಾಣ ಹಂಚಿಕೆಯಾದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಎರಡು ತಿಂಗಳ ಒಳಗೆ ಈ ಅಧ್ಯಯನ ಮುಗಿಯಬೇಕು. ಏ. 8ರ ಒಳಗೆ ಅಧ್ಯಯನ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.‌

ಹಸಿರು ಪೀಠದ ಈ ತೀರ್ಪಿಗೆ ವೈಟ್‌ ಫೀಲ್ಡ್‌ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಕಂಪನಿ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದ ಪ್ರವೀರ್‌ ಬಗ್ರೋಡಿಯಾ ಪ್ರತಿಕ್ರಿಯಿಸಿ, ‘ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಅನುಭವಿಸಿದ ಸಂಕಟ ನಿವಾಸಿಗಳಿಗೆಲ್ಲರಿಗೂ ಗೊತ್ತಿದೆ. ಆದ್ದರಿಂದ ಈ ತೀರ್ಪು ಸಹಜವಾಗಿಯೇ ಖುಷಿ ತಂದಿದೆ’ ಎಂದು ಹೇಳಿದರು.

ಆದೇಶದಲ್ಲಿ ಸ್ಪಷ್ಟತೆ ಇಲ್ಲ
ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯಶ್ರೀನಿವಾಸ್‌ ರಾವ್‌ ಪ್ರತಿಕ್ರಿಯಿಸಿ, ‘ತೀರ್ಪು ಸ್ವಾಗತಾರ್ಹ. ಆದರೆ, ಸ್ಪಷ್ಟತೆ ಕಾಣುತ್ತಿಲ್ಲ. ಒಂದೆಡೆ ಕಾರ್ಖಾನೆಯನ್ನು ಸಂಪೂರ್ಣ ಮುಚ್ಚಬೇಕು ಎನ್ನುತ್ತಾರೆ. ಇನ್ನೊಂದೆಡೆ ಇಲ್ಲಿ ಅಧ್ಯಯನ ನಡೆಸಬೇಕು ಎನ್ನುತ್ತಾರೆ. ಕಾರ್ಖಾನೆಯನ್ನು ಪೂರ್ಣ ಮುಚ್ಚಿದ ಬಳಿಕ ಏನು ಅಧ್ಯಯನ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಒಂದು ವೇಳೆ ಅಧ್ಯಯನ ಮಾಡುವುದಿದ್ದರೆ ಆ ಸಮಿತಿಯಲ್ಲಿ ಸ್ಥಳೀಯ ನಿವಾಸಿಗಳನ್ನೂ ಸೇರಿಸಬೇಕು. ಈ ಆದೇಶ ಸಂಬಂಧಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಲುವು ಏನು ಎಂಬುದನ್ನೂ ನೋಡಬೇಕು. ತೀರ್ಪಿನ ಸ್ಪಷ್ಟತೆ ಕೋರಿ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಚಿಂತನೆಯಲ್ಲಿದ್ದೇವೆ’ ಎಂದರು.

ಮಾಲಿನ್ಯಕ್ಕೆ ₹ 50 ಲಕ್ಷ ದಂಡ ತೆತ್ತ ಕಂಪನಿ
ಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌ ವಾಯುಮಾಲಿನ್ಯ ಮಾಡಿದ್ದಕ್ಕಾಗಿ ₹ 50 ಲಕ್ಷ ದಂಡ ಪಾವತಿಸುವಂತೆ ಸುಪ್ರೀಂ ಕೋರ್ಟ್‌ 2018ರ ಅಕ್ಟೋಬರ್‌ನಲ್ಲಿ ಆದೇಶಿಸಿತ್ತು. ಈ ಮೊತ್ತ ಪಾವತಿಗೆ ಕಂಪನಿಯೂ ಸಮ್ಮತಿಸಿತ್ತು. ಈ ಹಣದಿಂದ ಪರಿಸರ ಸಂರಕ್ಷಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೋರ್ಟ್‌ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT