‘ಜಿಬಿಎ ರಚನೆ ನಂತರ ಮುಂದೇನಾಗಬೇಕು’–ಸಾರ್ವಜನಿಕರ ಅಭಿಪ್ರಾಯಗಳು ಇಲ್ಲಿವೆ...
ಜಿಬಿಎಗೆ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ಸೇರಿಸಬೇಕು. ಆಗ ಅಧಿಕಾರಿಗಳು ಜವಾಬ್ದಾರಿಯನ್ನು ಒಬ್ಬರ ಮೇಲೆ ಒಬ್ಬರು ಹಾಕಿ ನುಣುಚಿಕೊಳ್ಳುವುದು ನಿಲ್ಲಲಿದೆ. ರಸ್ತೆಗಳನ್ನು ಅಗೆದು ಹಾಳು ಮಾಡಿ ನಮ್ಮ ತೆರಿಗೆ ಹಣ ಪೋಲಾಗುವುದನ್ನು ತಡೆಯ ಬೇಕು. ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದೇ ಕಡತದಲ್ಲಿ ಏಕ ಗವಾಕ್ಷಿಯಲ್ಲಿ ಅನುಮತಿಗಳು ದೊರೆಯುವಂತೆ ಮಾಡಬೇಕು. ಸಂಚಾರ ದಟ್ಟಣೆಯಾಗದಂತೆ ಮುಂದಿನ 30 ವರ್ಷಗಳ ಚಿಂತನೆಯುಳ್ಳ ಯೋಜನೆಯನ್ನು ರೂಪಿಸಬೇಕು. ವ್ಯಾಪ್ತಿ ವಿಸ್ತರಿಸುತ್ತಿರುವುದರಿಂದ ಕಸ ವಿಲೇವಾರಿಗೆ ಸರಿಯಾದ ಪರಿಹಾರ ಕಂಡುಕೊಳ್ಳಬೇಕು. ಗ್ರೇಟರ್ ಬೆಂಗಳೂರು ನಿಜವಾಗಲೂ ಗ್ರೇಟ್ ಆಗಲು ಸರ್ಕಾರವೂ ಕೆಲಸ ಮಾಡಬೇಕು. ಸಾರ್ವಜನಿಕರೂ ಸಹಕಾರ ನೀಡಬೇಕು.ಸಿ. ಮುರಳೀಧರ್, ವೆಂಕಟಾಲ, ಯಲಹಂಕ
‘ಗ್ರೇಟರ್ ಬೆಂಗಳೂರು ಪ್ರದೇಶ’ ಘೋಷಣೆಯಾಗಿರುವುದು ಸಂತೋಷದ ಸಂಗತಿ. ಎಲ್ಲ ಆಯಾಮಗಳಿಂದಲೂ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ನಿಯಮಗಳು ಸರಿಯಾದ ರೀತಿಯಲ್ಲಿ ಜಾರಿಗೊಂಡು ವಿಶ್ವದಲ್ಲಿ ಮಟ್ಟದಲ್ಲಿ ಗ್ರೇಟರ್ ಬೆಂಗಳೂರು ಎಂದು ಕರೆಸಿಕೊಳ್ಳುವ ರೀತಿಯಲ್ಲಿ ಹೊರ ಹೊಮ್ಮಿದರೆ ಸಾಕು. ನಂತರ ಮುಂದೇನಾಗಬೇಕು ಎಂಬುದರ ಬಗ್ಗೆ ಚಿಂತಿಸೋಣ,ಎಚ್. ದೊಡ್ಡ ಮಾರಯ್ಯ, ಸಂತೃಪ್ತಿ ನಗರ,
ಜಿಬಿಎ ಆಯ್ತು, ಮುಂದೇನು? ಇದೊಂದು ಯಕ್ಷ ಪ್ರಶ್ನೆ. ಉತ್ತರ ಶೂನ್ಯ. ಬಿಬಿಎಂಪಿ ರಚನೆಯಾಗಿ ದಶಕಗಳಾದರೂ ಜನ ಸಾಮಾನ್ಯರ ಕಷ್ಟಗಳು ನೀಗಿವೆಯೇ? ಹೆಸರು ಬದಲಾವಣೆ ಆಗಿದೆ ಅಷ್ಟೇ. ಆದರೆ ಅಧಿಕಾರ ನಡೆಸುವವರ, ಅಧಿಕಾರಿಗಳ ಕಾರ್ಯವೈಖರಿ ಬದಲಾಗುವುದೇ? ಅನಧಿಕೃತ ಕೇಬಲ್ ತೆರವುಗೊಳಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿರುವುದು ಇಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದೇ ನಿತ್ಯದ ಗೋಳಾಗಿದೆ. ಜನ ಎಚ್ಚೆತ್ತಿಕೊಳ್ಳುವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ.ಎಂ.ಎನ್. ಅನಂತಮೂರ್ತಿ, ಅಕ್ಷಯ ನಗರ
ಬೆಂಗಳೂರು ಮಹಾನಗರವು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಹಿಂದೆ ನಗರಕ್ಕೆ ಸೇರಿಸಿರುವ ಪ್ರದೇಶಗಳಿಗೆ ಇನ್ನೂ ನೀರು ಸರಬರಾಜು ವ್ಯವಸ್ಥೆ ಸರಿಯಾಗಿಲ್ಲ. ಇದನ್ನೆಲ್ಲ ಸರಿಪಡಿಸುವವರೆಗೆ ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ ಬೇರೆ ಹಳ್ಳಿಗಳನ್ನು ಸೇರಿಸಬಾರದು.ಚಂದ್ರಶೇಖರ್ ಟಿ.ಎ., ತೋಟಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.