ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಲಕ್ಷ್ಮಿ ಯೋಜನೆ: ಜಮೆ ಆಗದ ಹಣ, ಮಹಿಳೆಯರ ಆಕ್ರೋಶ

Published 6 ನವೆಂಬರ್ 2023, 23:30 IST
Last Updated 6 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಯಲಹಂಕ: ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮೆಯಾಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ತಹಶೀಲ್ದಾರ್ ಕಚೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎದುರು ಜಮಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಕೆಲವರಿಗೆ ಮಾತ್ರ ಹಣ ಸಂದಾಯವಾಗಿದೆ. ಬಹುತೇಕರಿಗೆ ಹಣ ಬಂದಿಲ್ಲ. ಅವರೆಲ್ಲರೂ ನಿತ್ಯವೂ ಕಚೇರಿಗೆ ಅಲೆದಾಡುತ್ತಿದ್ದಾರೆ.

‘ಅರ್ಜಿ ಸಲ್ಲಿಸಿ ಹಲವು ದಿನಗಳಾದರೂ ಹಣ ಬಂದಿಲ್ಲ. ಕಚೇರಿಗೆ ಬಂದು ವಿಚಾರಿಸಿದರೆ, ಅಧಿಕಾರಿಗಳು ಏನೇನೊ ನೆಪ ಹೇಳುತ್ತಿದ್ದಾರೆ. ಕೆಲಸ ಬಿಟ್ಟು ವಾರಕ್ಕೆ ಮೂರು ಬಾರಿ ಕಚೇರಿಗೆ ಅಲೆಯಬೇಕಾದ ಸ್ಥಿತಿ ಎದುರಾಗಿದೆ. ಯೋಜನೆಯ ಹಣ ಯಾವಾಗ ಬರುತ್ತದೆ ಎಂಬ ಖಾತರಿಯೇ ಇಲ್ಲದಂತಾಗಿದೆ’ ಎಂದು ಟ್ಯಾನರಿ ರಸ್ತೆ ನಿವಾಸಿ ಮೇರಿ ಸ್ಟಲ್ಲಾ ಅಳಲು ತೋಡಿಕೊಂಡರು.

‘ಬ್ಯಾಂಕ್ ಖಾತೆ ಮಾಹಿತಿ ಸರಿ ಇಲ್ಲದಿದ್ದರಿಂದ ಹಣ ಬಂದಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಬ್ಯಾಂಕ್‌ನಲ್ಲಿ ವಿಚಾರಿಸಿದರೆ ಎಲ್ಲವೂ ಸರಿ ಇದೆ. ಹಣ ಕೇಳಲು ಪದೇ ಪದೇ ಕಚೇರಿಗೆ ಬಂದು ಹೋಗುವಂತಾಗಿದೆ’ ಎಂದು ಹೆಸರಘಟ್ಟದ ಸುಶೀಲಾ ಬೇಸರ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ತಾಲ್ಲೂಕು ಅಧಿಕಾರಿ ಶಶಿಧರ್, ‘ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದಿರುವುದು, ಬ್ಯಾಂಕ್ ಪಾಸ್‌ಪುಸ್ತಕ ಹಾಗೂ ಆಧಾರ್ ಮಾಹಿತಿ ಹೊಂದಾಣಿಕೆ ಆಗದಿರುವುದು, ಕೆವೈಸಿ ಇಲ್ಲದಿರುವುದು ಸೇರಿದಂತೆ ಹಲವು ಕಾರಣದಿಂದ ಹಣ ಜಮೆ ತಡವಾಗಿದೆ. ಅರ್ಜಿ ವಿಲೇವಾರಿ ಮಾಡಲು ಸದ್ಯ ಒಂದೇ ಕಂಪ್ಯೂಟರ್ ಇದೆ. ನಾಳೆಯಿಂದ ನಾಲ್ಕು ಕಂಪ್ಯೂಟರ್ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT